ಈ ಹಿಂದೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social Media) ತುಂಬಾನೇ ವೈರಲ್ ಆಗಿತ್ತು. ಅದರಲ್ಲಿ ಎರಡು ದೊಡ್ಡ ಸೂಟ್ಕೇಸ್ ಗಳು (Suitcase) ವಿಮಾನದಿಂದ (Flight) ಹೊರತೆಗೆದು ವಿಮಾನ ನಿಲ್ದಾಣಕ್ಕೆ (Airport) ಸಾಗಿಸುವಾಗ ಪೂರ್ತಿಯಾಗಿ ಸೂಟ್ಕೇಸ್ ಗಳ ಮೇಲಿನ ಆ ಕವರ್ ತುಂಬಾನೇ ಹಾಳಾಗಿದ್ದನ್ನು ನಾವು ನೋಡಿದ್ದೆವು. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲಿಯೂ ಸಹ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕೂಡ ವಿಮಾನದಿಂದ ಹೇಗೆ ನಮ್ಮ ಲಗೇಜ್ ಗಳನ್ನ (Luggage) ಬೇಜವಾಬ್ದಾರಿತನದಿಂದ ಅಥವಾ ನಿರ್ಲಕ್ಷ್ಯತನದಿಂದ ಸಾಗಿಸುತ್ತಾರೆ ಅನ್ನೋದನ್ನು ನೋಡಬಹುದಾಗಿದೆ.
ಸದ್ಯ ಸೂಫಿ ಗಾಯಕ ಬಿಸ್ಮಿಲ್ ಎಂಬವರು ತಮ್ಮ ಸಾಮಾಗ್ರಿಗಳನ್ನು ಅಸಡ್ಡೆಯಿಂದ ಬೀಸಾಕಿದ್ದಕ್ಕಾಗಿ ಇಂಡಿಗೋ ಏರ್ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಗೋ ಉದ್ಯೋಗಿಯೊಬ್ಬರು ತಮ್ಮ ದುಬಾರಿ ಸಂಗೀತ ವಾದ್ಯಗಳನ್ನು ಬೇಕಾಬಿಟ್ಟಿ ಎಸೆಯುವ ವೀಡಿಯೋವನ್ನು ಸೂಫಿ ಗಾಯಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಕಾಣುವಂತೆ ಇಂಡಿಗೋ ಗ್ರೌಂಡ್ ಕೆಲಸಗಾರರ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಬಿಸ್ಮಿಲ್ ಪ್ರಕಾರ, ವಿಮಾನಯಾನ ಸಿಬ್ಬಂದಿ ಸಂಗೀತ ವಾದ್ಯಗಳನ್ನು ನಿರ್ವಹಿಸುವ ವಿಧಾನವು ಬೇಸರವನ್ನುಂಟು ಮಾಡುತ್ತದೆ.
View this post on Instagram
ಇಂಡಿಗೋ ನಮ್ಮ ಲಗೇಜ್ ಗಳನ್ನು ಇದೇ ರೀತಿಯಾಗಿ ಸಾಗಿಸುತ್ತಿದ್ದಾರೆ! ಇಂಡಿಗೋ ನೀವು ನಮ್ಮ ಲಗೇಜ್ ಗಳನ್ನು ಕೊಂಚವಾದರೂ ಗೌರವದಿಂದ ಕಾಣಬೇಕು" ಎಂದು ಬಿಸ್ಮಿಲ್ ಬರೆದಿದ್ದಾರೆ. ಗಾಯಕರ ಪೋಸ್ಟ್ ಗೆ ಅನೇಕ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಏಕೆಂದರೆ ಅನೇಕರು ಸಂಗೀತ ವಾದ್ಯವನ್ನು ಕೆಟ್ಟ ರೀತಿ ತೆಗೆದುಕೊಂಡು ಹೋಗಿದ್ದಕ್ಕೆ ವಿಮಾನಯಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ದಯವಿಟ್ಟು ಸಂಗೀತ ವಾದ್ಯಗಳನ್ನು ಎಚ್ಚರಿಕೆಯಿಂದ ಎತ್ತುಕೊಳ್ಳಿ ಮತ್ತು ನಮ್ಮ ಹೆಚ್ಚುವರಿ ಸಾಮಾಗ್ರಿ ಸರಂಜಾಮುಗಳಿಗೆ 30,000 ರೂಪಾಯಿಗಿಂತಲೂ ಅಧಿಕ ಹಣವನ್ನು ಪಾವತಿಸಿರುತ್ತೇವೆ. ನನ್ನ ಎಲ್ಲಾ ಸಹ ಕಲಾವಿದರೇ, ನೀವು ನಿಮ್ಮ ಬ್ಯಾಗ್ ಗಳನ್ನು ಇಂಡಿಗೋಗೆ ನೀಡುವಾಗ ದಯವಿಟ್ಟು ಜಾಗರೂಕರಾಗಿರಿ" ಎಂದು ಕ್ಯಾಪ್ಷನ್ನಲ್ಲಿ ಬರೆದು ಕೊಂಡಿದ್ದಾರೆ.
ಇಂಡಿಗೋ ಕೆಲಸದ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗರು
"ಅವರು ಲಗೇಜ್ ಮತ್ತು ವಿಶೇಷವಾಗಿ ಭಾರವಿರುವ ವಸ್ತುಗಳನ್ನು ಸಾಗಿಸಲು ಸರಿಯಾದ ವ್ಯವಸ್ಥೆಗಳನ್ನು ಹೊಂದಿರಬೇಕು. ಇಂಡಿಗೋ ದಯವಿಟ್ಟು ಲಗೇಜ್ ಡೆಲಿವರಿ ಮತ್ತು ನಿರ್ವಹಣೆಯನ್ನು ಎಚ್ಚರಿಕೆಯಿಂದ ನಿರ್ವಹಿಸಲು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಪ್ರತಿಬಾರಿಯೂ ನಾವು ಇಂತಹ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದಾಗ ಇದು ನಿಜವಾಗಿಯೂ ಅವಮಾನಕರವಾಗಿದೆ. ಏನೇ ಮಾಡಿದರೂ ನಾವು ಕಿವಿಯ ಮೇಲೂ ಹಾಕಿಕೊಳ್ಳುವುದಿಲ್ಲ ಅಂದುಕೊಂಡಿದ್ದಾರೆ. ಈ ಸಾಮಾನು ಸರಂಜಾಮುಗಳು ನಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿರುತ್ತೇವೆ. ಇದರಲ್ಲಿ ನಮ್ಮ ಭವಿಷ್ಯ ಮತ್ತು ಭಾವನೆಗಳಿರುತ್ತದೆ ಎಂಬುವುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಇದು ನಿಜಕ್ಕೂ ನಿರಾಶಾದಾಯಕವಾಗಿದೆ. ಏರ್ಲೈನ್ಸ್ ಗಳು ಕೆಲವು ನಿಯಮಗಳನ್ನು ಹೊಂದಿರುತ್ತದೆ. ಆದರೆ ಅದು ಹೆಚ್ಚು ಅಪಾಯಕಾರಿಯಾಗಿದೆ, ಏಕೆಂದರೆ ನೀವು ಸಹಿ ಮಾಡುವ ಒಪ್ಪಂದದಲ್ಲಿ, ನಮ್ಮ ಲಗೇಜ್ ಗಳಿಗೆ ಯಾವುದಾದರೂ ಹಾನಿಯಾದರೆ ಅದಕ್ಕೆ ಅವರು ಜವಾಬ್ದಾರರಲ್ಲ ಎಂದು ಹೇಳಿರುತ್ತಾರೆ. ಅದಕ್ಕಾಗಿಯೇ ಅವರು ಯಾವುದೇ ಕಾಳಜಿ ವಹಿಸುವುದಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ಇದನ್ನೂ ಓದಿ: IndiGo Sale: ಹೊಸ ವರ್ಷಕ್ಕೆ ಇಂಡಿಗೋ ಬಂಪರ್ ಗಿಫ್ಟ್, ಟಿಕೆಟ್ ಬೆಲೆ ಜಸ್ಟ್ 2023 ರೂಪಾಯಿ ಮಾತ್ರ!
ವೀಡಿಯೋ ನೋಡಿ ಪ್ರತಿಕ್ರಿಯಿಸಿದ ಇಂಡಿಗೋ
ಇಂಡಿಗೋ ಈಗಾಗಲೇ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು "ಬ್ಯಾಗೇಜ್ ಹ್ಯಾಂಡ್ಲಿಂಗ್ ಅನ್ನು ತೋರಿಸುವ ಈ ವೀಡಿಯೋವು ಇಂಡಿಗೋ ತನ್ನ ಬ್ಯಾಗೇಜ್ ಹ್ಯಾಂಡ್ಲಿಂಗ್ ಸೇವೆಗಳಿಗಾಗಿ ನಿಗದಿಪಡಿಸಿದ ಉನ್ನತ ಮಾನದಂಡಗಳಿಗೆ ಪ್ರತಿಸ್ಪಂದಿಸುವುದಿಲ್ಲ. ಗಮ್ಯಸ್ಥಾನದಲ್ಲಿ ಸಾಮಾನು ಸರಂಜಾಮುಗಳಿಗೆ ಯಾವುದೇ ಹಾನಿಯು ವರದಿಯಾಗಿಲ್ಲವಾದರೂ, ನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅಗತ್ಯವಿರುವೆಡೆಯಲ್ಲಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ