Sikh Man Shot Dead in Pak: ಪಾಕ್​​ನಲ್ಲಿ ನಿಲ್ಲದ ಅಲ್ಪಸಂಖ್ಯಾತರ ಮೇಲಿನ ದಾಳಿ; ಸಿಖ್ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

ಕ್ಲಿನಿಕ್ ಒಳಗೆ ನುಗ್ಗಿದ ಕಿರಾತಕರು ಸತ್ನಾಮ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸತ್ನಾಮ್ ಅವರ ದೇಹವನ್ನು ನಾಲ್ಕು ಗುಂಡುಗಳು ಪ್ರವೇಶಿಸಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ  ನೀಡಿದ್ದಾರೆ.

ಮೃತ ಸರ್ದಾರ್ ಸತ್ನಾಮ್ ಸಿಂಗ್

ಮೃತ ಸರ್ದಾರ್ ಸತ್ನಾಮ್ ಸಿಂಗ್

  • Share this:
ಇಸ್ಲಾಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಪೇಶಾವರದಲ್ಲಿ ಅಪರಿಚಿತರು ಸಿಖ್ ವ್ಯಕ್ತಿಯ(Unani medicine practitioner) ಮೇಲೆ ಗುಂಡಿನ ಮಳೆ ಸುರಿದು ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ. ಕೊಲೆಯ ಬಳಿಕ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಗಾರರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಸರ್ದಾರ್ ಸತ್ನಾಮ್ ಸಿಂಗ್ (ಖಲ್ಸಾ) ಕೊಲೆಯಾದ ಸಿಖ್ ವ್ಯಕ್ತಿ. ಸತ್ನಾಮ್ ಓರ್ವ ಸಿಖ್ ಹಕೀಮ್ ಆಗಿದ್ದು, ಪೇಶಾವರದ ಚಾರ್ ಸಡ್ಡಾದಲ್ಲಿ ಸ್ವಂತ ಕ್ಲಿನಿಕ್ ಹೊಂದಿದ್ದರು. ಕ್ಲಿನಿಕ್ ಒಳಗೆ ನುಗ್ಗಿದ ಕಿರಾತಕರು ಸತ್ನಾಮ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸತ್ನಾಮ್ ಅವರ ದೇಹವನ್ನು ನಾಲ್ಕು ಗುಂಡುಗಳು ಪ್ರವೇಶಿಸಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ  ನೀಡಿದ್ದಾರೆ.

ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರ ತನಿಖೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪಾಕಿಸ್ತಾನ ಪೊಲೀಸರು ಘಟನೆ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹಾಕಿ, ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರು ಎಸ್ಕೇಪ್ ಆಗಲು ಯಶಸ್ವಿಯಾಗಿದ್ದು, ಸತ್ನಾಮ್ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೊಲೆ ಹಿಂದೆ ಭಯೋತ್ಪಾದಕ ಕೈವಾಡ ಇದೆಯಾ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೇಶಾವರದಲ್ಲಿ 15 ಸಾವಿರಕ್ಕೂ ಹೆಚ್ಚು ಸಿಖ್ ಸಮುದಾಯದ ಜನರಿದ್ದಾರೆ. ಹೆಚ್ಚಿನ ಜನರು ಜೋಗನ್ ಶಾ ಆಸುಪಾಸಿನಲ್ಲಿಯೇ ವಾಸವಾಗಿದ್ದಾರೆ. ಸಿಖ್ ಸಮುದಾಯದ ಬಹುತೇಕ ಜನರು ವ್ಯಾಪರಿಗಳಾಗಿದ್ರೆ, ಕೆಲವರು ಮೆಡಿಕಲ್ ವಿಭಾಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಈ ಹಿಂದೆಯೂ ಕೃತ್ಯಗಳು

2018ರಲ್ಲಿ ಸಿಖ್ ಸಮುದಾಯದ ಸದಸ್ಯರಾಗಿದ್ದ ಚರಣ್‍ಜಿತ್ ಸಿಂಗ್ ಅವರನ್ನ ಅಪರಿಚಿತರು ಕೊಲೆ ಮಾಡಿದ್ದರು. 2020ರಲ್ಲಿ ನ್ಯೂಸ್ ಆಂ್ಯಕರ್ ರವೀಂದ್ರ ಸಿಂಗ್ ಕೊಲೆ ನಗರದಲ್ಲಿಯೇ ನಡೆದಿತ್ತು. ಇನ್ನು 2016ರಲ್ಲಿ ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್ ನ್ಯಾಷನಲ್ ಅಸೆಂಬ್ಲಿ ಸದಸ್ಯ ಸೋರೆನ್ ಸಿಂಗ್ ಅವರನ್ನ ಕೊಲೆಗೈಯಲಾಗಿತ್ತು.

ಪಾಕ್ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಹಿಂದೂಗಳು

ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ಹಿಂದೂ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗುತ್ತಿರೋದು ಇದೇ ಮೊದಲೇನಲ್ಲ. ಪಾಕಿಸ್ತಾನದ 2017ರ ಜನಗಣತಿ ಪ್ರಕಾರ, ಅಲ್ಪಸಂಖ್ಯಾತರಲ್ಲಿ ಹಿಂದೂಗಳೇ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕ್ರೈಸ್ತರಿದ್ದಾರೆ. ಇದರ ಜೊತೆಗೆ ಅಹಮದಿ, ಸಿಖ್ ಮತ್ತು ಪಾರ್ಸಿಗಳು ಪಾಕಿಸ್ತಾನದ ಅಲ್ಪಸಂಖ್ಯಾತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: Moral Policing: ನೈತಿಕ ಪೊಲೀಸ್​ಗಿರಿ ಮೆರೆದ ಗ್ರಾಮಪಂಚಾಯತ್​ ಅಧ್ಯಕ್ಷ: ಅಕ್ರಮ ಸಂಬಂಧ ಆರೋಪದ ಮೇಲೆ ಬುಡಕಟ್ಟು ಜನಾಂಗದ ಮಹಿಳೆಯ ಬೆತ್ತಲೆ ಮೆರವಣಿಗೆ

ಇಮ್ರಾನ್ ಚಳಿ ಬಿಡಿಸಿದ್ದ ಸ್ನೇಹಾ ದುಬೆ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರವನ್ನು ಭಾರತ ಖಂಡಿಸುತ್ತಿದೆ. ಸೆಪ್ಟಂಬರ್ 24ರಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೆ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಸ್ನೇಹಾ ದುಬೆ ಖಡಕ್ ಉತ್ತರ ನೀಡಿದ್ದರು. ಪಾಕಿಸ್ತಾನ ಭಯೋತ್ಪಾದಕತೆಯನ್ನು ಹಿಂಬಾಗಿಲ ಮೂಲಕ ಪೋಷಿಸುತ್ತಿದೆ. ತಮ್ಮ ಭಯೋತ್ಪಾದಕ ಕೃತ್ಯಗಳನ್ನು ಮುಚ್ಚಿಡಲು ಅದು ಪ್ರಯತ್ನಿಸುತ್ತಿದೆ. ಪಾಕ್ ಆಕ್ರಮಿಸಿರುವುದು ಭಾರತದ ಜಾಗ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಗಳನ್ನು ಪದೇ ಪದೇ ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೆ, ಈ ವೇದಿಕೆಯಲ್ಲಿ ನಾವು ನಮ್ಮ ಧ್ವನಿ ಎತ್ತಲು ಬಳಸಿಕೊಳ್ಳುತ್ತೇವೆ ಎಂದು ತೀಕ್ಷ್ಣ ಉತ್ತರ ನೀಡಿದ್ದರು.
Published by:Kavya V
First published: