ಸಿಧು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ; ರಾಜಿಸೂತ್ರ ಒಪ್ಪಿಕೊಳ್ಳಲಿದ್ದಾರೆಯೇ ಕ್ಯಾಪ್ಟನ್​ ಅಮರೀಂದರ್​ ಸಿಂಗ್​?

ಮಾಜಿ ಕ್ರಿಕೆಟಿಗನನ್ನು ಕಾಂಗ್ರೆಸ್​ ಪಕ್ಷವು ತನ್ನ ರಾಜ್ಯ ಘಟಕದ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಿದೆಯೇ ಎಂಬ ಊಹಾಪೋಹಗಳ ನಡುವೆ ಸಿಧು ಪಂಜಾಬ್ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸುನಿಲ್ ಜಖರ್ ಮತ್ತು ಹಲವಾರು ಶಾಸಕರನ್ನು ಶನಿವಾರ ಭೇಟಿಯಾದರು.

ನವಜೋತ್ ಸಿಂಗ್ ಸಿಧು

ನವಜೋತ್ ಸಿಂಗ್ ಸಿಧು

 • Share this:
  ಅಂತೂ ಇಂತೂ ಪಂಜಾಬ್​ ಕಾಂಗ್ರೆಸ್​ ಜಗಳ ಒಂದು ಹಂತಕ್ಕೆ ಶಮನವಾಗುವಂತೆ ಗೋಚರಿಸುತ್ತಿದೆ.  ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರು ನವಜೋತ್ ಸಿಂಗ್ ಸಿಧು ಅವರನ್ನು ತಮ್ಮ ಪಕ್ಷದ ರಾಜ್ಯ ಘಟಕದ ಮುಂದಿನ ಮುಖ್ಯಸ್ಥರನ್ನಾಗಿ ಮಾಡುವ ಬಗ್ಗೆ ಸಿಎಂಗೆ ಶನಿವಾರ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

  ಇದು ಪಕ್ಷದ ನಿರ್ಧಾರ ಎಂದು ಹೇಳಿರುವ ರಾವತ್ ಅವರು, ಸಿಧುವಿನ ಜೊತೆಗೆ ಸಿಎಂ ಆಯ್ಕೆ ಮಾಡಲು ಮೂರು ನಾಲ್ಕು ಕಾರ್ಯನಿರತ ಅಧ್ಯಕ್ಷರನ್ನು ಸಹ ನೇಮಕ ಮಾಡಲಾಗುವುದು ಎಂದು ಕ್ಯಾಪ್ಟನ್‌ಗೆ ರಾವತ್​ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಶನಿವಾರದಂದು ಕೂಡ ಈ ವಿಷಯದ ಬಗ್ಗೆ  ಶೀಘ್ರದಲ್ಲೇ ಪ್ರಕಟಣೆ ನೀಡಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ರಾವತ್ ಅವರು ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ನಂತರವೇ ಪತ್ರಿಕಾ ಪ್ರಕಟಣೆಯ ಮೂಲಕ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಕಾಂಗ್ರೆಸ್​ ಪಕ್ಷದ ಮೂಲಗಳು ತಿಳಿಸಿವೆ.

  https://twitter.com/harishrawatcmuk/status/1416345937266446337

  ಈ ಮಧ್ಯೆ, ರಾವತ್ ಅವರು ಶನಿವಾರದಂದು ಸಿಂಗ್ ಅವರನ್ನು ಭೇಟಿಯಾದ ನಂತರ, ಟ್ವೀಟ್​ ಮಾಡಿ: "ನಾನು ಅಮರಿಂದರ್ ಸಿಂಗ್ ಜಿ ಅವರನ್ನು ಭೇಟಿಯಾದ ನಂತರ ದೆಹಲಿಗೆ ಮರಳಿದ್ದೇನೆ. ಚರ್ಚಿಸಲಾಗುತ್ತಿರುವ ಬಹಳಷ್ಟು ವಿಷಯಗಳು ಅರ್ಥಹೀನವೆಂದು ಸಾಬೀತಾಗಿದೆ ಮತ್ತು ಕ್ಯಾಪ್ಟನ್ ಸಾಹಿಬ್ ತಮ್ಮ ಮಹತ್ವದ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ, ಕಾಂಗ್ರೆಸ್ ಅಧ್ಯಕ್ಷರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ’’, ಎಂದು ಹೇಳಿದ್ದಾರೆ ಎಂಬುದಾಗಿ ಬರೆದುಕೊಂಡಿದ್ದರು.

  ಮಾಜಿ ಕ್ರಿಕೆಟಿಗನನ್ನು ಕಾಂಗ್ರೆಸ್​ ಪಕ್ಷವು ತನ್ನ ರಾಜ್ಯ ಘಟಕದ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಿದೆಯೇ ಎಂಬ ಊಹಾಪೋಹಗಳ ನಡುವೆ ಸಿಧು ಪಂಜಾಬ್ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸುನಿಲ್ ಜಖರ್ ಮತ್ತು ಹಲವಾರು ಶಾಸಕರನ್ನು ಶನಿವಾರ ಭೇಟಿಯಾದರು. ಅರ್ಧ ಘಂಟೆಯವರೆಗೆ ನಡೆದ ಜಖರ್ ಅವರೊಂದಿಗಿನ ಭೇಟಿಯ ನಂತರ, ಸಿಧು ಅವರು ತಮ್ಮ ಹಿರಿಯ ಸಹೋದರ ಮತ್ತು ಮಾರ್ಗದರ್ಶಕ ಶಕ್ತಿ ಎಂದು ಹೇಳಿದರು. ಜಖರ್, ಸಿಧುನನ್ನು ಸಮರ್ಥ ವ್ಯಕ್ತಿ ಎಂದು ಸಹ ಬಣ್ಣಿಸಿದರು. ಜಖರ್ ಅವರನ್ನು ಭೇಟಿಯಾದ ನಂತರ, ಸಿಧು ಅವರು ಕೆಲವು ಮಂತ್ರಿಗಳು ಸೇರಿದಂತೆ ಪಕ್ಷದ ಇತರ ಮುಖಂಡರನ್ನು ಚಂಡೀಗಡದಲ್ಲಿ ಭೇಟಿಯಾದರು.

  ನವಜೋತ್​ ಸಿಂಗ್​ ಸಿಧು ಅವರು ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಮತ್ತು ಪಕ್ಷದ ಹಿರಿಯ ಮುಖಂಡ ಲಾಲ್ ಸಿಂಗ್ ಅವರನ್ನು ಭೇಟಿಯಾಗಿದ್ದು ಅತ್ಯಂತ ಕುತೂಹಲ ಮೂಡಿಸಿತ್ತು. ಏಕೆಂದರೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಆಪ್ತರೆಂದು ಇವರನ್ನು ಕರೆಯಲಾಗುತ್ತದೆ. ಕ್ಯಾಬಿನೆಟ್ ಸಚಿವ ಸುಖ್ವಿಂದರ್​ ಸಿಂಗ್ ರಾಂಧಾವಾ ಮತ್ತು ಶಾಸಕರಾದ ಬರೀಂದರ್​ಮಿತ್​ ಸಿಂಗ್ ಪಹ್ರಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕುಲ್ಬೀರ್ ಸಿಂಗ್ ಜಿರಾ ಮತ್ತು ದೇವಿಂದರ್ ಸಿಂಗ್ ಘುಬಯಾ ಅವರನ್ನೂ ಸಹ ಸಿಧು ಭೇಟಿಯಾದರು. ಸುದ್ದಿಗಾರರೊಂದಿಗೆ ಮಾತನಾಡಿದ ರಾಂಧವ, ಪಕ್ಷದಲ್ಲಿ “ಎಲ್ಲವೂ ಚೆನ್ನಾಗಿದೆ” ಎಂದು ಹೇಳಿದರು.

  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಸಿಧು ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪಂಜಾಬ್ ಕಾಂಗ್ರೆಸ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಭೆಗಳು ನಡೆಯುತ್ತಿದ್ದವಿ. ಶುಕ್ರವಾರ ಸಿಧು ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿಯಾಗಿ ರಾಜ್ಯ ಘಟಕದ ಪುನರುಜ್ಜೀವನದ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.

  ಇದನ್ನೂ ಓದಿ: Mobile Blast: ಬಾಲಕ ಗೇಮ್ ಆಡುತ್ತಿದ್ದಾಗ ಮೊಬೈಲ್ ಬ್ಲಾಸ್ಟ್: ಬೆರಳುಗಳು ಕಟ್, ಕಣ್ಣಿಗೆ ಗಂಭೀರ ಗಾಯ!

  ಸಭೆಯಲ್ಲಿ ಪಂಜಾಬ್‌ನ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಮತ್ತು ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಸಿಧು ಅವರ ವರ್ತನೆ ಕುರಿತು ಅಮರಿಂದರ್ ಸಿಂಗ್ ಅವರು ಸಿಟ್ಟಾಗಿ ಇತ್ತೀಚೆಗೆ  ಸೋನಿಯಾ ಗಾಂಧಿಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: