ನವ ದೆಹಲಿ (ಮಾರ್ಚ್ 07); ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯ ವಿರುದ್ಧದ ಹೋರಾಟಗಾರರಿಗೆ ಟಾಂಗ್ ನೀಡಿರುವ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, “ಭಾರತದ ಹೊರತು ಎಲ್ಲರನ್ನೂ ಬರಮಾಡಿಕೊಳ್ಳುವ ಮತ್ತೊಂದು ದೇಶ ಜಗತ್ತಿನಲ್ಲಿ ಯಾವುದಇದೆ?” ಎನ್ನುವ ಮೂಲಕ ಸಿಎಎ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಎ ಕಾನೂನಿನ ಕುರಿತು ಜನರಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ ಸಚಿವ ಜೈಶಂಕರ್, “ಕೇಂದ್ರ ಸರ್ಕಾರ ಈ ಕಾನೂನಿನ ಮೂಲಕ ಪೌರತ್ವ ಇಲ್ಲದೆ ಸೌಲಭ್ಯ ವಂಚಿತರಾಗಿರುವವರ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸುತ್ತಿದೆ. ಇಂತಹ ಕೆಲಸವನ್ನು ಪ್ರಶಂಸಿಸಬೇಕು. ಭವಿಷ್ಯದಲ್ಲಿ ದೇಶಕ್ಕೆ ಯಾವುದೇ ದೊಡ್ಡ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಕಾನೂನನ್ನು ರೂಪಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದರು.
"ಪ್ರತಿಯೊಬ್ಬರಿಗೂ ಒಂದು ಮಾನದಂಡ ಮತ್ತು ಸಂದರ್ಭದ ಮೇಲೆ ಪೌರತ್ವ ನೀಡಲಾಗುತ್ತಿದೆ. ಅಸಲಿಗೆ ಭಾರತದ ಹೊರತು ಪ್ರಪಂಚದ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ಹೇಳುವ ಮತ್ತೊಂದು ದೇಶವನ್ನು ತೋರಿಸಿ? ಎಂದರೆ ಈ ಕುರಿತು ಯಾರೂ ಮಾತನಾಡುವುದಿಲ್ಲ” ಎಂದು ಅವರು ಸಿಎಎ ಕುರಿತು ಸಮರ್ಥಿಸಿಕೊಂಡಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆಯ ಮಾನಹ ಹಕ್ಕು ಆಯೋಗ ಭಾರತದ ಕ್ರಮವನ್ನು ಕಟುವಾಗಿ ಟೀಕಿಸುತ್ತಿದೆ. ಈ ಕುರಿತೂ ಸಹ ಅಸಮಾಧಾನ ಹೊರಹಾಕಿರುವ ಜೈಶಂಕರ್, “ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಉಗ್ರಗಾಮಿಗಳು ದೇಶದ ಒಳಗೆ ಎಲ್ಲಿಂದ ಬರುತ್ತಿದ್ದಾರೆ? ಎಂಬುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಲಿ. ಮಾನವ ಹಕ್ಕು ಆಯೋಗದ ಈಗಿನ ನಿರ್ದೇಶಕರು ಈ ಹಿಂದೆ ಕಾಶ್ಮೀರದ ಸಮಸ್ಯೆಯನ್ನು ಹೇಗೆ ಬಗೆಹರಿಸಿದರು? ಎಂಬುದರ ಕುರಿತು ದಾಖಲೆಗಳನ್ನು ನೋಡಿ ತಿಳಿದುಕೊಳ್ಳಲಿ” ಎಂದು ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ