news18-kannada Updated:February 13, 2020, 9:23 PM IST
ಅಮಿತ್ ಶಾ
ನವದೆಹಲಿ: ಇದೇ ತಿಂಗಳ 11ರಂದು ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿರುವ ಅಮಿತ್ ಶಾ ಅವರು, ಬಿಜೆಪಿ ನಾಯಕರು ಗೋಲಿ ಮಾರೋ (ಅವರಿಗೆ ಗುಂಡಿಕ್ಕಿ) ಮತ್ತು ಈ ಚುನಾವಣೆ ಭಾರತ-ಪಾಕಿಸ್ತಾನ ಪಂದ್ಯ ಇದ್ದಂತೆ ಎಂಬಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದ್ದಾರೆ.
ಬಿಜೆಪಿ ಇಂತಹ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತದೆ ಮತ್ತು ನಾಯಕರುಗಳು ನೀಡಿದ ಇಂತಹ ಹೇಳಿಕೆಗಳಿಂದ ಪಕ್ಷ ಭಾರೀ ಮುಜುಗರ ಅನುಭವಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
70 ವಿಧಾನಸಭೆ ಸದಸ್ಯ ಸ್ಥಾನದಲ್ಲಿ ಬಿಜೆಪಿ ಕೇವಲ 8 ಸ್ಥಾನಗಳಲ್ಲಷ್ಟೇ ಗೆಲುವು ದಾಖಲಿಸಿದೆ. ಆಡಳಿತಾರೂಢ ಪಕ್ಷ ಆಮ್ ಆದ್ಮಿ ಪಕ್ಷ ಬರೋಬ್ಬರಿ 62 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ, ಮೂರನೇ ಬಾರಿಗೆ ದೆಹಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಪಕ್ಷದ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಇದೇ ತಿಂಗಳ 16ರಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದೆಹಲಿ ಚುನಾವಣೆ ರ್ಯಾಲಿ ಸಮಯದಲ್ಲಿ ಫೆಬ್ರವರಿ 8ರಂದು ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಕ್ಯಾಮರಾ ಮುಂದೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ವಿರೋಧ ಪಕ್ಷದವರನ್ನು ದೇಶದ್ರೋಹಿಗಳು ಎಂದು ಜರಿದಿದ್ದರು. ಈ ಹೇಳಿಕೆಗೆ ನೆರೆದಿದ್ದ ಜನರು ಅವರನೆಲ್ಲ ಗುಂಡಿಕ್ಕಿ ಎಂದು ಪ್ರತಿಕ್ರಿಯಿಸಿದ್ದರು.
ಇದನ್ನು ಓದಿ: ಫೆ.16ರಂದು ಮೂರನೇ ಬಾರಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣವಚನ
ಏತನ್ಮಧ್ಯೆ, ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರು, ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನದ ಪಂದ್ಯ ಇದ್ದಂತೆ ಎಂಬ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಬಳಿಕ ಚುನಾವಣಾ ಆಯೋಗದ ನಿರ್ದೇಶನದಂತೆ ಕಪಿಲ್ ಮಿಶ್ರಾ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
First published:
February 13, 2020, 9:22 PM IST