ಬೆಂಗಳೂರು: ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ ಕೇಂದ್ರ ಸಚಿವ ಹಾಗೂ ಶಿವಸೇನೆ ನಡುವೆ ಭಾರೀ ವಾಗ್ಸಮರ ನಡೆದಿದೆ. ಸಿಎಂ ಉದ್ಧವ್ ಠಾಕ್ರೆ (CM Uddhav Thackeray) ವಿರುದ್ಧ ಬಿಜೆಪಿ ಕೇಂದ್ರ ಸಚಿವ ನಾರಾಯಣ ರಾಣೆ (Union Minister Narayan Rane) ಅವರು ನೀಡಿದ ಅವಹೇಳನಕಾರಿ ಹೇಳಿಕೆ ಭಾರೀ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದೆ. ಕೇಂದ್ರ ಸಚಿವರ ಹೇಳಿಕೆ ಸಂಬಂಧ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದರು. ಆ ಬಳಿಕ ಸಚಿವರು ಜಾಮೀನು ಪಡೆದು ಅಂದು ರಾತ್ರಿಯೇ ಬಂಧನದಿಂದ ಮುಕ್ತಿ ಪಡೆದರು.
ಈ ವಿಚಾರವಾಗಿ ಇಂದು ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ಮಹಾರಾಷ್ಟ್ರ ಸಂಸದ ಸಂಜಯ್ ರಾವುತ್ ಅವರು, ಕೇಂದ್ರ ಸಚಿವ ನಾರಾಯಣ್ ರಾಣೆ ಬಿಡುಗಡೆ ಕಾನೂನು ಪ್ರಕಾರ ಆಗಿದೆ. ಸಿಎಂ ಉದ್ಧವ್ ಠಾಕ್ರೆ ಬಗ್ಗೆ ಕೆಟ್ಟ ಭಾಷೆ ಬಳಸಿದ್ದರು. ಮುಖ್ಯಮಂತ್ರಿಗೆ ಹೊಡೆಯುತ್ತೇನೆ ಎಂದಿದ್ದು ತಪ್ಪು. ಮಹಾರಾಷ್ಟ್ರ ಗೃಹ ಇಲಾಖೆ ಕ್ರಮ ತೆಗೆದುಕೊಂಡಿದೆ. ರಾಣೆ ಕೇಂದ್ರ ಸರ್ಕಾರದ ಮಂತ್ರಿಯಾಗಿದ್ದಾರೆ. ಮಂತ್ರಿ ಬಳಸುವ ಭಾಷೆಯಲ್ಲಿ ಶಿಷ್ಟಾಚಾರ ಇರಬೇಕು. ಪರಸ್ಪರ ಗೌರವಿಸಿ ಮಾತನಾಡುವುದನ್ನು ಕಲಿಯಬೇಕು. ಸಿಎಂಗೆ ಹೊಡೆಯುತ್ತೇನೆ ಎಂದರೆ ಹೇಗೆ ಸಹಿಸುವುದು. ನಮ್ಮ ಜೊತೆ ಫೈಟ್ ಮಾಡಲು ಯಾರಿಗೂ ಧಮ್ ಇಲ್ಲ. ಪ್ರಧಾನಿಗೆ ಈ ರೀತಿ ಮಾತನಾಡಿದರೆ ದೇಶದ್ರೋಹದ ಆರೋಪ ಹೊರಿಸುತ್ತಾರೆ. ಮುಖ್ಯಮಂತ್ರಿ ಕೂಡ ಅಷ್ಟೇ ಗೌರವ ಸ್ಥಾನದಲ್ಲಿದ್ದಾರೆ. ಹೀಗಾಗಿ ಸಿಎಂ ಬಗ್ಗೆ ಮಾತನಾಡಿದ್ರೆ ಸಹಿಸಲಾರೆವು ಎಂದು ಅವರು ಹೇಳಿದರು.
ಏನಿದು ಘಟನೆ?
ಕೇಂದ್ರ ಸಚಿವ ನಾರಾಯಣ ರಾಣೆ ಅವರು ಬಿಜೆಪಿ ಜನ ಆಶೀರ್ವಾದ ಯಾತ್ರೆಯ ಕಾರ್ಯಕ್ರಮದ ಅಂಗವಾಗಿ ಮುಂಬೈನಿಂದ ಸಿಂದುದುರ್ಗ್ವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಸೋಮವಾರ ರಾತ್ರಿ ರತ್ನಗಿರಿಯ ಜಿಲ್ಲೆಯ ಛಿಪ್ಲುನ್ ಯಾತ್ರೆಯಲ್ಲಿ ಸಿಎಂ ಠಾಕ್ರೆ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದರು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಯದಲ್ಲಿ ಮುಖ್ಯಮಂತ್ರಿ ತಮ್ಮ ಭಾಷಣದ ವೇಳೆ ಸ್ವಾತಂತ್ರ್ಯ ವರ್ಷವನ್ನೇ ಮರೆತಿದ್ದರು. ಬಳಿಕ ತಮ್ಮ ಭಾಷಣದ ನಡುವೆ ಸಹಾಯಕರಿಂದ ಮಾಹಿತಿ ಪಡೆದುಕೊಂಡರು. ಒಂದು ವೇಳೆ ನಾನು ಅಲ್ಲಿ ಇದ್ದಿದ್ದರೆ ಅವರಿಗೆ ಹೊಡೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಶಿವಸೇನೆ ಕಾರ್ಯಕರ್ತರು ಎಲ್ಲ ಕಡೆ ಕೇಂದ್ರ ಸಚಿವ ರಾಣೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಸಂಬಂಧ ಎರಡು ಎಫ್ಐಆರ್ಗಳು ಕೂಡ ದಾಖಲಾಗಿದ್ದವು. ಹಾಗಾಗಿ ಮಂಗಳವಾರ ಮಧ್ಯಾಹ್ನ 2.25ರ ಸಮಯದಲ್ಲಿ ರತ್ನಗಿರಿ ಬಳಿ ಪೊಲೀಸರು ಬಂಧಿಸಿದ್ದರು. ಆ ಬಳಿಕ ಅವರು ಜಾಮೀನು ಪಡೆದು ಅಂದು ರಾತ್ರಿಯೇ ಜಾಮೀನು ಪಡೆದು ಬಿಡುಗಡೆ ಆದರು.
ಇದನ್ನು ಓದಿ: CM Bommai: ದೆಹಲಿಗೆ ಆಗಮಿಸಿದ ಸಿಎಂ ಬೊಮ್ಮಾಯಿ; ನೀರಾವರಿ ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ
ಶಿವಸೇನೆ ಹೇಳಿದ್ದೇನು?
ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ, ಕಾನೂನಿಗಿಂತ ಮೇಲೆ ಯಾರೂ ಇಲ್ಲ ಎಂಬ ಸಂದೇಶವನ್ನು ಕಳುಹಿಸುವುದು. ರಾಣೆ ಜಾಮೀನು ಪಡೆಯುವುದರಲ್ಲಿ ಯಾವುದೇ ತೊಂದರೆ ಇಲ್ಲ ಮತ್ತು ಕೇಂದ್ರ ಸಚಿವರ ವಿರುದ್ಧ ಪ್ರಕರಣಗಳನ್ನು ಮುಂದುವರಿಸುವ ಉದ್ದೇಶವೂ ಇಲ್ಲ. ಸಂದೇಶವು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿದೆ, ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ವರದಿ: ದಶರಥ ಸಾವೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ