ನವದೆಹಲಿ(ಏ. 19): ಬೆಳಗಾವಿ ವಿಷಯದಲ್ಲಿ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಶಿವಸೇನೆ ಈಗ ಹೊಸ ತಗಾದೆ ತೆಗೆದಿದೆ. ಮರಾಠಿ ಭಾಷಿಗರ ರಕ್ಷಣೆಗಾಗಿ ಕರ್ನಾಟಕದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಕಚೇರಿ ಸ್ಥಾಪಿಸಬೇಕು ಎಂದಿದ್ದಾರೆ. ಅಲ್ಲದೆ ಮುಂದೆ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ಇಲ್ಲಿ ವ್ಯಾಪಾರ ಮತ್ತು ವಹಿವಾಟು ನಡೆಸಲು ಕಷ್ಟವಾಗಬಹುದು ಶಿವಸೇನೆ ಪಕ್ಷದ ವಕ್ತಾರರೂ ಆದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿವಸೇನೆ ಪಕ್ಷದ ಮುಖವಾಣಿ ‘ಸಾಮ್ನಾ’ದ ತಮ್ಮ ಅಂಕಣದಲ್ಲಿ ಸಂಜಯ್ ರಾವತ್ ಅವರು ಮತ್ತೊಮ್ಮೆ ಕರ್ನಾಟಕದ ವಿರುದ್ಧ ಕಿಡಿ ಕಾರಿದ್ದಾರೆ. ಮರಾಠಿ ಭಾಷಿಗರ ರಕ್ಷಣೆಗಾಗಿ ಕರ್ನಾಟಕದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಕಚೇರಿ ಸ್ಥಾಪಿಸಬೇಕು. ಅಲ್ಲದೆ ರಾಜ್ಯದ ಗಡಿಪ್ರದೇಶಗಳ ಸಮನ್ವಯ ಸಚಿವ ಏಕನಾಥ್ ಶಿಂಧೆ ಅವರು ಪದೇ ಪದೇ ಬೆಳಗಾವಿಗೆ ಭೇಟಿ ನೀಡಬೇಕು. ಹಿಂದಿನ ಗಡಿ ಪ್ರದೇಶಗಳ ಸಮನ್ವಯ ಸಚಿವರು ಬೆಳಗಾವಿಗೆ ಭೇಟಿ ನೀಡದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಗಡಿ ವಿವಾದದ ಬಗ್ಗೆ ಅನಗತ್ಯವಾಗಿ ಪ್ರಸ್ತಾಪ ಮಾಡಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕ ಮಾಡುವ ವಾದವನ್ನು ಮಹಾರಾಷ್ಟ್ರ ಮತ್ತಷ್ಟು ಪ್ರಬಲವಾಗಿ ವಿರೋಧಿಸಬೇಕು. ರಾಜ್ಯದ ಅಡ್ವೋಕೇಟ್ ಜನರಲ್ ಅವರು ಕೂಡ ಬೆಳಗಾವಿ ಗಡಿ ಪ್ರದೇಶಗಳಿಗೆ ಭೇಟಿ ನೀಡಿಬೇಕು. ಅಲ್ಲಿನ ಪರಿಸ್ಥಿತಿ ಆಧರಿಸಿ ವರದಿ ಸಿದ್ದಪಡಿಸಿ ಬೆಳಗಾವಿಯ ಜನರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಂದೆ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರು ಇಲ್ಲಿ ವ್ಯಾಪಾರ - ವಹಿವಾಟು ನಡೆಸಲು ಕಷ್ಟವಾಗಬಹುದು ಎಂದು ಹೇಳುವ ಮೂಲಕ ಭಾರತ ಒಕ್ಕೂಟ ವ್ಯವಸ್ಥೆ ಹೊಂದಿರುವ ದೇಶ, ಮಹಾರಾಷ್ಟ್ರ ಅದರ ಒಂದು ಭಾಗ ಎಂಬುದನ್ನೇ ಮರೆತಿದ್ದಾರೆ. ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು 'ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ಕನ್ನಡಿಗರು ದಾಳಿ ನಡೆಸಿದ್ದಾರೆ' ಎಂದು ಆರೋಪಿಸಿದ್ದಾರೆ. ಕನ್ನಡಿಗರ ಈ ಕೆಲಸಕ್ಕೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳ ಮೇಲೆ ದಾಳಿ ಮಾಡುವ ಮೂಲಕ ಶಿವಸೇನೆ ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದೇ ಸಂಜಯ್ ರಾವತ್ ಇತ್ತೀಚೆಗೆ ' ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠಿ ಕಚೇರಿ ತೆರವುಗೊಳಿಸಿರುವುದರಿಂದ ಅಲ್ಲಿನ ಮರಾಠಿಗರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದುದರಿಂದ ಅವರಿಗೆ ಧೈರ್ಯ ತುಂಬಲು ಬೆಳಗಾವಿಗೆ ಸರ್ವಪಕ್ಷ ನಿಯೋಗ ಕಳಿಸಬೇಕು' ಎಂದು ಆಗ್ರಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ