ಅವಿಶ್ವಾಸ ನಿರ್ಣಯ; ಕೇಂದ್ರ ಸರಕಾರದ ಪರವಾಗಿ ನಿಂತ ಶಿವಸೇನೆ


Updated:July 19, 2018, 4:20 PM IST
ಅವಿಶ್ವಾಸ ನಿರ್ಣಯ; ಕೇಂದ್ರ ಸರಕಾರದ ಪರವಾಗಿ ನಿಂತ ಶಿವಸೇನೆ
ಉದ್ಧವ್ ಠಾಕ್ರೆ

Updated: July 19, 2018, 4:20 PM IST
- ನ್ಯೂಸ್18 ಕನ್ನಡ

ನವದೆಹಲಿ(ಜು. 19): ಕೆಲವಾರು ವರ್ಷಗಳಿಂದ ಬಿಜೆಪಿ ವಿರುದ್ಧ ನಿರಂತರವಾಗಿ ಕೆಂಡಕಾರುತ್ತಲೇ ಬರುತ್ತಿರುವ, ಮೋದಿ ಸರಕಾರದ ಪ್ರತೀ ಹೆಜ್ಜೆಯನ್ನೂ ಕಟುವಾಗಿ ವಿರೋಧಿಸಿಕೊಂಡು ಬರುತ್ತಿರುವ ಶಿವಸೇನೆ ಪಕ್ಷ ಈಗ ಅವಿಶ್ವಾಸ ನಿರ್ಣಯದ ವಿಚಾರದಲ್ಲಿ ಕೇಂದ್ರದ ಕೈಹಿಡಿಯಲು ನಿರ್ಧರಿಸಿದೆ. ಶಿವಸೇನೆಯ ಈ ನಡೆಯು ವಿಪಕ್ಷಗಳಿಗೆ ಅಚ್ಚರಿ ಮೂಡಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಉದ್ಧವ್ ಠಾಕ್ರೆ ಜೊತೆ ಫೋನ್ ಮೂಲಕ ಮಾತನಾಡಿ, ತಮ್ಮ ಸರಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಿವಸೇನೆ ತನ್ನ 18 ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಮಾಡಿದೆ. ಇದರೊಂದಿಗೆ ಟಿಡಿಪಿ ನೇತೃತ್ವದಲ್ಲಿ ಮಂಡನೆಯಾಗಲಿರುವ ಅವಿಶ್ವಾಸ ನಿರ್ಣಯಕ್ಕೆ ಮತ್ತೆ ಸೋಲುಂಟಾಗುವ ಸಾಧ್ಯತೆ ದಟ್ಟವಾಗಿದೆ.

535 ಸದಸ್ಯಬಲದ ಲೋಕಸಭೆಯಲ್ಲಿ ಬಹುಮತ ಸಾಬೀತಿಗೆ 268 ಸದಸ್ಯರ ಬೆಂಬಲ ಅಗತ್ಯವಿದೆ. ಭಾರತೀಯ ಜನತಾ ಪಕ್ಷದಲ್ಲೇ 274 ಸಂಸದರಿದ್ದಾರೆ. ಎನ್​ಡಿಎ ಮೈತ್ರಿಕೂಟದಲ್ಲಿರುವ ಬಿಜೆಪಿಯ ಇತರ ಮಿತ್ರ ಪಕ್ಷಗಳನ್ನು ಸೇರಿಸಿದರೆ ಒಟ್ಟಾರೆ 313 ಸಂಸದರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತೊಮ್ಮೆ ಅವಿಶ್ವಾಸ ಯುದ್ಧದಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮುವುದು ಬಹುತೇಕ ನಿಶ್ಚಿತವಾಗಿದೆ. ಉದ್ಧವ್ ಠಾಕ್ರೆ ನಿರ್ಧಾರ ಪ್ರಕಟವಾಗುವ ಮುನ್ನ ಕೇಂದ್ರ ಸಚಿವ ಅನಂತಕುಮಾರ್ ಅವರು ಅವಿಶ್ವಾಸ ನಿರ್ಣದಯವಿರುದ್ಧ ಇಡೀ ಎನ್​ಡಿಎ ಒಗ್ಗಟ್ಟಿನಿಂದ ನಿಂತುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ನಾಳೆ, ಸಂಸತ್​ನಲ್ಲಿ ಟಿಡಿಪಿಯಿಂದ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಎರಡು ದಿನ ಈ ನಿರ್ಣಯದ ಮೇಲೆ ಚರ್ಚೆ ನಡೆದು ಬಳಿಕ ಮತದಾನವಾಗಲಿದೆ. ಕಾಂಗ್ರೆಸ್, ಟಿಎಂಸಿ ಮೊದಲಾದ ವಿಪಕ್ಷಗಳು ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿವೆ.

ಇನ್ನು, ಕೇಂದ್ರವನ್ನು ಬೆಂಬಲಿಸುವ ಶಿವಸೇನೆ ಪಕ್ಷದ ನಡೆ ತುಸು ಅಚ್ಚರಿ ಮೂಡಿಸಿದೆಯಾದರೂ ಅನಿರೀಕ್ಷಿತ ನಿರ್ಧಾರವೇನೂ ಅಲ್ಲ. ಬಿಜೆಪಿ ಜೊತೆಗಿನ ಶಿವಸೇನೆಯ ವೈಮನಸ್ಸು ಬಹುತೇಕ ಮಹಾರಾಷ್ಟ್ರಕ್ಕೆ ಸೀಮಿತವಾಗಿದೆ. ಮಹಾರಾಷ್ಟ್ರದಲ್ಲಿ ಇಷ್ಟು ವರ್ಷ ಬಿಜೆಪಿಗಿಂತ ದೊಡ್ಡ ಪಕ್ಷವಾಗಿದ್ದ ಶಿವಸೇನೆಯ ಬಲ ಇತ್ತೀಚಿನ ವರ್ಷಗಳಿಂದ ಕುಂಠಿತಗೊಂಡಿದೆ. ಇಲ್ಲಿ ಬಿಜೆಯೇ ದೊಡ್ಡಣ್ಣನಂತೆ ವರ್ತಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಶಿವಸೇನೆ ಆಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ವೈಯಕ್ತಿಕವಾಗಿಯೇ ಬಹುಮತ ಗಳಿಸಿ ಶಿವಸೇನೆಯ ಆತ್ಮವಿಶ್ವಾಸವನ್ನು ಇನ್ನಷ್ಟು ಅಡಗಿಸಿದೆ. ಹೀಗಾಗಿ, ಶಿವಸೇನೆಯು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಪ್ರತೀ ಹೆಜ್ಜೆಗೂ ಮತ್ತು ನಿರ್ಧಾರಕ್ಕೂ ಅಡ್ಡಗಾಲು ಹಾಕುತ್ತಾ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬೆದರಿಕೆಯನ್ನೂ ಒಡ್ಡಿದೆ. ಆದರೂ ಕೂಡ ಎನ್​ಡಿಎ ಮೈತ್ರಿಕೂಟವನ್ನು ತ್ಯಜಿಸುವ ನಿರ್ಧಾರವನ್ನು ಈವರೆಗೂ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಎನ್​ಡಿಎ ಮೈತ್ರಿಕೂಟದ ಅಂಗ ಪಕ್ಷವಾಗಿ ಶಿವಸೇನೆಯು ಅವಿಶ್ವಾಸ ನಿರ್ಣಯದ ವೇಳೆ ಕೇಂದ್ರದ ಪರ ನಿಲ್ಲುವುದು ಅನಿರೀಕ್ಷಿತವೆನಿಸುವುದಿಲ್ಲ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...