ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರ ಪುತ್ರ, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ (Shrikanth Shindhe) ಅವರಿಂದ ಜೀವ ಬೆದರಿಕೆ ಇದೆ, ನನ್ನನ್ನು ಕೊಲ್ಲಲು ಥಾಣೆಯಿಂದ ಕೊಲೆಗಾರರನ್ನು ಸುಪಾರಿ ಕೊಟ್ಟು ಕರೆಸಿಕೊಂಡಿದ್ದಾರೆ ಎಂದು ಉದ್ಧವ್ ಬಾಳಾ ಸಾಹೇಬ್ ಠಾಕ್ರೆ ಬಣದ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರಿಗೆ ಪತ್ರ ಬರೆದಿರುವ ಸಂಜಯ್ ರಾವತ್, ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ತಾವು ಬರೆದಿರುವ ಪತ್ರದಲ್ಲಿ ಹಲವು ವಿಚಾರಗಳನ್ನು ಉಲ್ಲೇಖ ಮಾಡಿರುವ ಸಂಸದ ಸಂಜಯ್ ರಾವತ್, ಇತ್ತೀಚೆಗೆ ಚುನಾಯಿತ ಪ್ರತಿನಿಧಿಗಳ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ನನ್ನ ಭದ್ರತೆಯನ್ನು ಹಿಂಪಡೆಯಲಾಗಿದೆ. ಆದರೆ ಅದರ ಬಗ್ಗೆ ನನಗೆ ಯಾವುದೇ ಆಕ್ಷೇಪ ಇಲ್ಲ ಎಂದಿರುವ ಸಂಜಯ್ ರಾವತ್, ಮಹಾರಾಷ್ಟ್ರದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಸರ್ಕಾರವು ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಚವ್ಹಾಣ್‌ಗೆ ಫಡ್ನವಿಸ್ ಟಾಂಗ್
ಸಂಸದ ಸಂಜಯ್ ರಾವತ್ ಪತ್ರ ಬರೆದಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಸಂಜಯ್ ರಾವತ್ ಅವರು ನನಗೆ ಏಕೆ ಪತ್ರ ಬರೆದಿದ್ದಾರೆ? ಭದ್ರತೆಯನ್ನು ಪಡೆಯಲೇ ಅಥವಾ ಸಂಚಲನ ಮೂಡಿಸಲೇ? ಅವರು ಪ್ರತಿದಿನ ಸುಳ್ಳು ಹೇಳುವ ಮೂಲಕ ಸಿಂಪತಿ ಪಡೆಯಲು ಸಾಧ್ಯವಿಲ್ಲ, ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಆರೋಪ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಮಾಜಿ ಸಿಎಂಗೆ ಜೀವ ಬೆದರಿಕೆ; ದೂರು ದಾಖಲು
ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಮತ್ತು ತಮ್ಮ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕ ಅಶೋಕ್ ಚವ್ಹಾಣ್ ಅವರು ನಾಂದೇಡ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ಅವರಿಗೆ ನೀಡಿದ ದೂರಿನಲ್ಲಿ, ‘ತಮ್ಮ ಲೆಟರ್ ಹೆಡ್ ಮತ್ತು ಸಹಿಯನ್ನು ನಕಲಿ ಮಾಡಲಾಗಿದೆ ಮತ್ತು ಮರಾಠ ಸಮುದಾಯಕ್ಕೆ ಮೀಸಲಾತಿ ವಿರುದ್ಧ ಎಂಬ ಪತ್ರವನ್ನು ಬರೆದು ಸಂಚು ರೂಪಿಸಿದ್ದಾರೆ’ ಎಂದು ಅಶೋಕ್ ಚವ್ಹಾಣ್ ಆರೋಪಿಸಿದ್ದಾರೆ.
ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಬಾರದು ಎಂದು ನಾನು ಯಾವತ್ತೂ ಪತ್ರ ಬರೆದಿಲ್ಲ ಎಂದಿರುವ ಅಶೋಕ್ ಚವ್ಹಾಣ್, ನಾನು ಯಾವಾಗಲೂ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಪರವಾಗಿ ಇದ್ದೇನೆ. ಇದು ನಕಲಿ ಪತ್ರ. ನನ್ನನ್ನು ರಾಜಕೀಯವಾಗಿ ಮುಗಿಸಲು ಇದನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೇ, ನಾನು ಮರಾಠಾ ಸಚಿವ ಸಂಪುಟ ಉಪ ಸಮಿತಿಯ ನಾಯಕನಾಗಿದ್ದೆ. ಮೀಸಲಾತಿ ಪಡೆಯಲು ನನ್ನದೂ ಪಾತ್ರವಿದೆ. ನನ್ನ ವಿರುದ್ಧ ಸಮಾಜ ವಿರೋಧಿಗಳನ್ನು ಪ್ರಚೋದಿಸುವುದು ಈ ಪತ್ರದ ಉದ್ದೇಶವಾಗಿದೆ ಎಂದು ಚವ್ಹಾಣ್ ಹೇಳಿದರು.
ಇದನ್ನೂ ಓದಿ: Shootout: ಪ್ರತಿಭಟನೆ ವೇಳೆ ಗುಂಡಿನ ದಾಳಿಗೆ ಶಿವಸೇನೆ ಮುಖಂಡ ಸಾವು! ಹೊಣೆ ಹೊತ್ತುಕೊಂಡ ಸಂಘಟನೆ ಯಾವುದು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ