ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಸಾಧ್ಯತೆ: ಉದ್ಧವ್​​​ ಠಾಕ್ರೆಗೆ ಸಿಎಂ ಸ್ಥಾನ, ಅಜಿತ್​​ ಪವಾರ್​​ಗೆ ಡಿಸಿಎಂ ಪೋಸ್ಟ್​​​​?

ಇತ್ತ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆಯವರೇ ಠಾಕ್ರೆ ಕುಟುಂಬದ ಕುಡಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮಾಡುವುದಾಗಿ ತಂದೆ ಬಾಳಾ ಠಾಕ್ರೆಗೆ ಮಾತು ಕೊಟ್ಟಿದ್ದೇನೆ ಎಂದು ಹೇಳಿದ್ದರು. ಆದಿತ್ಯ ಠಾಕ್ರೆಯೇ ಸಿಎಂ ಆಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದರು.

news18-kannada
Updated:November 11, 2019, 9:59 PM IST
ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಸಾಧ್ಯತೆ: ಉದ್ಧವ್​​​ ಠಾಕ್ರೆಗೆ ಸಿಎಂ ಸ್ಥಾನ, ಅಜಿತ್​​ ಪವಾರ್​​ಗೆ ಡಿಸಿಎಂ ಪೋಸ್ಟ್​​​​?
ಅಜಿತ್​ ಠಾಕ್ರೆ ಮತ್ತು ಉದ್ಧವ್​​ ಠಾಕ್ರೆ
  • Share this:
ಬೆಂಗಳೂರು(ನ.11): ಬರೋಬ್ಬರಿ 25 ವರ್ಷಗಳ ನಂತರ ಬಿಜೆಪಿ ಸಖ್ಯ ತೊರೆದ ಶಿವಸೇನೆ ಮೊದಲ ಬಾರಿಗೆ ಕಾಂಗ್ರೆಸ್​-ಎನ್​​ಸಿಪಿ ಜತೆ ಮೈತ್ರಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವ ಸಾಧ್ಯತೆಯಿದೆ. ಆರಂಭದಿಂದಲೂ ಮೈತ್ರಿಗೆ ಹಿಂದೇಟು ಹಾಕಿದ್ದ ಕಾಂಗ್ರೆಸ್-ಎನ್‍ಸಿಪಿಯೀಗ ಷರತ್ತು ವಿಧಿಸಿ ಶಿವಸೇನೆಯೊಂದಿಗೆ ಕೈಜೋಡಿಸಿವೆ ಎನ್ನಲಾಗುತ್ತಿದೆ. ಬಿಜೆಪಿ ನೇತೃತ್ವದ ಎನ್​​​ಡಿಎ ಸಖ್ಯ ತೊರೆದರೆ ಮಾತ್ರ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಶಿವಸೇನೆಗೆ ಕಾಂಗ್ರೆಸ್​​-ಎನ್​​ಸಿಪಿ ಹೇಳಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದ ಮೇಲೆ ಹದ್ದಿನ ಕಣ್ಣಿಟ್ಟಿರುವ ಶಿವಸೇನೆ ಕಾಂಗ್ರೆಸ್​​-ಎನ್​ಸಿಪಿ ಪಕ್ಷಗಳ ಷರತ್ತಿಗೆ ಒಪ್ಪಿಗೆ ನೀಡಿದ್ದು, ಉಭಯ ಪಕ್ಷಗಳ ಬೆಂಬಲ ಪಡೆದಿದೆ. ನ್ಯಾಷನಲಿಸ್ಟ್​​ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಮುಖ್ಯಸ್ಥ ಶರದ್ ಪವಾರ್ ಮೊದಲಿಗೆ ಶಿವಸೇನೆಗೆ ಬೆಂಬಲ ಘೋಷಿಸಿತು. ನಂತರ ಕಾಂಗ್ರೆಸ್​ ಬಾಹ್ಯ ಬೆಂಬಲ ನೀಡಿದ್ದು, ಸದ್ಯದಲ್ಲೇ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ದವ್​​ ಠಾಕ್ರೆ ಮತ್ತು ಡಿಸಿಎಂ ಆಗಿ ಶರದ್​​ ಪವಾರ್​​​ ಸೋದರ ಅಳಿಯ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​​ ಬಾಹ್ಯ ಬೆಂಬಲ: ಕಾಂಗ್ರೆಸ್​​ ಆರಂಭದಿಂದಲೂ ಶಿವಸೇನೆ ನಡೆಯನ್ನು ಟೀಕಿಸುತ್ತಲೇ ಬಂದಿದೆ. ಹಾಗಾಗಿಯೇ ಸಹಜವಾಗಿ ಶಿವಸೇನೆಗೆ ಬೆಂಬಲ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿತ್ತು. ಶಿವಸೇನೆ ಜತೆ ಮೈತ್ರಿಗೆ ಒಪ್ಪಿಗೆ ನೀಡಲು ಕಾಂಗ್ರೆಸ್​​ನಲ್ಲೇ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​ನ ರೆಬೆಲ್​​ ನಾಯಕ ಸಂಜಯ್ ನಿರುಪಮ್ ಶಿವಸೇನೆಗೆ ಬೆಂಬಲ ನೀಡದಂತೆ ಟ್ವೀಟ್​ ಕೂಡ ಮಾಡಿದ್ದರು. ಆದರೀಗ, ಕಾಂಗ್ರೆಸ್​ನಲ್ಲಿ ಬಂಡಾಯದ ನಡುವೆಯೂ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಿವಸೇನೆಗೆ ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್- ಎನ್‌ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಶಿವಸೇನಾ ಮುಂದಾಗಿದೆ. ಖುದ್ದು ಉದ್ಧವ್ ಠಾಕ್ರೆಯವರೇ ಸೋನಿಯಾ ಜತೆ ಮಾತುಕತೆ ನಡೆಸಿದ ಬಳಿಕ ಸರ್ಕಾರ ರಚನೆ ತೀರ್ಮಾನಕ್ಕೆ ಬಂದಿದ್ಧಾರೆ ಎಂದು ತಿಳಿದು ಬಂದಿದೆ. ಶಿವಸೇನೆ ಮತ್ತು ಕಾಂಗ್ರೆಸ್​ ನಡುವೇ ಮಾತುಕತೆ ನಡೆಯುವಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಪ್ರಮುಖ ಪಾತ್ರವಹಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಬಾಳಾಸಾಹೇಬ್​ಗೆ ಆಸೆ ಈಡೇರಿಕೆಗೆ ಉದ್ಧವ್ ಠಾಕ್ರೆ ಸಕಲ ಪ್ರಯತ್ನ; ಸರ್ಕಾರ ರಚಿಸಲಿದೆಯೇ ಶಿವಸೇನೆ?

ಈಗಾಗಲೇ ಶಿವಸೇನೆ ಶಾಸಕಾಂಗ ನಾಯಕ ಏಕನಾಥ್ ಶಿಂದೆ ಮತ್ತು ಶಾಸಕ ಆದಿತ್ಯ ಠಾಕ್ರೆ ನೇತೃತ್ವದ ನಿಯೋಗ ಮಹಾರಾಷ್ಟ್ರದ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಮೊದಲಿಗೆ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರ ರಚನೆ ಹಕ್ಕು ಮಂಡಿಸದ ಕಾರಣ, ಶಿವಸೇನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಅದರಂತೆಯೇ ಕಾಂಗ್ರೆಸ್​​-ಎನ್​​ಸಿಪಿ ಬೆಂಬಲ ಖಾತ್ರಿಯಾದ ಮೇಲೆ ಶಿವಸೇನೆ ಸರ್ಕಾರ ರಚನೆ ಹಕ್ಕು ಮಂಡಿಸಿದೆ.

ಇನ್ನು ಸದ್ಯದಲ್ಲೇ ಶಿವಸೇನೆ ಕಾಂಗ್ರೆಸ್​-ಎನ್​​ಸಿಪಿಯೊಂದಿಗೆ ಸರ್ಕಾರ ರಚನೆ ಮಾಡುವ ಸಾಧ್ಯತೆಯಿದೆ. ಠಾಕ್ರೆ ಕುಟುಂಬದ ಕುಡಿ ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗುವುದು ಅನುಮಾನ. ಮೂಲಗಳ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್​​ಸಿಪಿ ಅಜಿತ್​​ ಪವಾರ್ ಆಗಲಿದ್ದಾರೆ. ಹಾಗೆಯೇ ಶಿವಸೇನೆಗೆ ಬಾಹ್ಯ ಬೆಂಬಲ ನೀಡಿರುವ ಕಾಂಗ್ರೆಸ್​​ ಪಕ್ಷಕ್ಕೆ ವಿಧಾನಸಭಾ ಸಭಾಧ್ಯಕ್ಷ ಸ್ಥಾನ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದ ಠಾಕ್ರೆ ಕುಟುಂಬ

ಪ್ರಾರಂಭದಿಂದಲೂ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಮತ್ತು ಪುತ್ರ ಉದ್ಧವ್‌ ಠಾಕ್ರೆ ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದರು. ಆದರೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. 29 ವರ್ಷದ ಆದಿತ್ಯ ಠಾಕ್ರೆಯವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಹಲವರ ಒತ್ತಾಯದ ಮೇರೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಸಿಎಂ ಆಗುತ್ತಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ರಚನೆ; ಶಿವಸೇನೆಗೆ ಕಾಂಗ್ರೆಸ್ ಬಾಹ್ಯ ಬೆಂಬಲ; ರಾಜಭವನಕ್ಕೆ ಬಂದ ಸೇನಾ ನಾಯಕರು

ಮರಾಠಿ ಅಸ್ಮಿತೆ ಮತ್ತು ಹಿಂದುತ್ವದ ಆಧಾರದ ಮೇಲೆ ಉದಯವಾದ ಪಕ್ಷವೇ ಶಿವಸೇನೆ. ಹಿಂದುತ್ವದ ಸಿದ್ದಾಂತವೇ ಹೊಂದಿದ್ದ ಶಿವಸೇನೆ ಮತ್ತು ಬಿಜೆಪಿ ನಡುವೇ 1990ರಲ್ಲೇ ದೋಸ್ತಿ ಕುದುರಿತು. ನಂತರ 1995ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಒಟ್ಟಿಗೆ ಸ್ಪರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾದವು. ಅಂದಿನ ಚುನಾವಣೆ ಗೆಲುವಿನಲ್ಲಿ ಠಾಕ್ರೆ ಕುಟುಂಬದ ಪರಿಶ್ರಮ ಹೆಚ್ಚಿತ್ತು. ಆದರೆ, ಬಾಳಾ ಠಾಕ್ರೆಯಾಗಲಿ ಮತ್ತವರ ಕುಟುಂಬದವರಾಗಲಿ ಯಾರು ಮುಖ್ಯಮಂತ್ರಿಯಾಗಲು ಮುಂದಾಗಲಿಲ್ಲ. ಬದಲಿಗೆ ಶಿವಸೇನೆ ಹಿರಿಯ ನಾಯಕ ಮನೋಹರ ಜೋಶಿಯವರನ್ನು ಮುಖ್ಯಮಂತ್ರಿಯಾಗಿಸಿದರು. ಬಳಿಕ ಅದೇ ಸರ್ಕಾರದ ಕೊನೆಯ ಹಂತದಲ್ಲಿ ಮತ್ತೋರ್ವ ಹಿರಿಯ ನಾಯಕ ನಾರಾಯಣ ರಾಣೆಯವರನ್ನು ಮುಖ್ಯಮಂತ್ರಿಯಾಗಿಸಿದರು. ಅದರ ಮೂಲಕ ಹಿಂಬಾಗಿಲಿನಿಂದಲೇ ಠಾಕ್ರೆ ಕುಟುಂಬ ಆಡಳಿತ ನಡೆಸಿತು. ಸರ್ಕಾರದ ಕೀಲಿ ಕೈ ಠಾಕ್ರೆ ಕುಟುಂಬದ ಬಳಿಯೇ ಇತ್ತು.

1995ರ ನಂತರ ಬಿಜೆಪಿ-ಶಿವಸೇನೆ ದೋಸ್ತಿ ಅಂತ್ಯಗೊಂಡಿತು. ನಂತರದ 1999ರ ಚುನಾವಣೆಯಲ್ಲಿ ಸೋಲು ಕಂಡ ಶಿವಸೇನೆಗೆ ಸುಮಾರು 15 ವರ್ಷ ಪ್ರತಿಪಕ್ಷ ಸ್ಥಾನದಲ್ಲೇ ಕೂರಬೇಕಾಯ್ತು. ಬಳಿಕ 2014ರಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುಸಿರಿದ ಶಿವಸೇನೆ ಮತ್ತು ಬಿಜೆಪಿ ಫಲಿತಾಂಶದ ನಂತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ಅವಾಗಲೂ ಬಾಳಾ ಠಾಕ್ರೆಗೆ ಭಾರೀ ಜನಪ್ರಿಯತೆ, ಬೆಂಬಲ ಇತ್ತು. ಆದರೂ, ಬಾಳಾ ಠಾಕ್ರೆ ಕುಟುಂಬ ಚುನಾವಣಾ ರಾಜಕಾರಣದಿಂದ ದೂರ ಉಳಿಯಿತು.

ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕುಡಿ ಚುನಾವಣಾ ರಾಜಕೀಯಕ್ಕೆ ಪ್ರವೇಶ

2019ರಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಶಿವಸೇನೆ ಬಾಳಾ ಠಾಕ್ರೆಯವರ ಮೊಮ್ಮಗ ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಅಖಾಡಕ್ಕಿಳಿಸಿತು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯ ಹಿರಿಯ ಮಗ. ಬಿಎ, ಎಲ್​ಎಲ್​ಬಿ ವ್ಯಾಸಂಗ ಮಾಡಿರುವ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯದ ನಾಯಕನೆಂದು ಬಿಂಬಿಸಲಾಯ್ತು. ಉದ್ಧವ್ ಠಾಕ್ರೆ ನಂತರ ಶಿವಸೇನೆಯ ನೊಗವನ್ನು ಹೊತ್ತು ಮುನ್ನಡೆಸುವ ಹೊಣೆಗಾರಿಕೆಯನ್ನು ಆದಿತ್ಯನಾಗಿ ವಹಿಸಲಾಯ್ತು. ಆದಿತ್ಯ ಠಾಕ್ರೆ ಮುಂಬೈನ ವೋರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. ಆದಿತ್ಯ ಠಾಕ್ರೆ ಹಾಗೆಯೇ ಠಾಕ್ರೆ ಕುಟುಂಬದಲ್ಲಿ ಸಾಕಷ್ಟು ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನಂತರ ಜೀತೇಂದ್ರ ಠಾಕ್ರೆ, ಶಾಲಿನಿ ಠಾಕ್ರೆ, ತೇಜಸ್ ಠಾಕ್ರೆ ಕೂಡ ರಾಜಕಾರಣಕ್ಕೆ ಧುಮುಕಿದ್ದಾರೆ.

ಇದನ್ನೂ ಓದಿ: ಶಿವಸೇನೆ ಮುಖ್ಯ ವಕ್ತಾರ ಸಂಜಯ್​​ ರಾವತ್​​ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಇತ್ತ ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆಯವರೇ ಠಾಕ್ರೆ ಕುಟುಂಬದ ಕುಡಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮಾಡುವುದಾಗಿ ತಂದೆ ಬಾಳಾ ಠಾಕ್ರೆಗೆ ಮಾತು ಕೊಟ್ಟಿದ್ದೇನೆ ಎಂದು ಹೇಳಿದ್ದರು. ಆದಿತ್ಯ ಠಾಕ್ರೆಯೇ ಸಿಎಂ ಆಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದರು. ಇದನ್ನು ಸಂಜಯ್​​ ರಾವತ್​​ ಕೂಡ ಬಹಿರಂಗಪಡಿಸಿದ್ದರು. ಆದರೀಗ, ಶಿವಸೇನೆ ಹಿರಿಯ ನಾಯಕರ ಒತ್ತಾಯದ ಮೇರೆಗೆ ಉದ್ಧವ್​​ ಠಾಕ್ರೆಯವರೇ ಸಿಎಂ ಆಗಲಿದ್ದಾರೆ ಎನ್ನಲಾಗುತ್ತಿದೆ. ಉದ್ಧವ್​​ ಠಾಕ್ರೆ ಸಿಎಂ ಆಗಬೇಕಾದರೆ ವಿಧಾನ ಪರಿಷತ್​​ ಸದಸ್ಯ ಆಗಬೇಕು. ಇಲ್ಲದೇ ಹೋದರೆ ಯಾರಾದರೂ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆ ಗೆದ್ದು ಶಾಸಕರಾಗಿ ಆಯ್ಕೆಯಾಗಬೇಕಾಗುತ್ತದೆ.
--------
First published: November 11, 2019, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading