Shirdi Sai Baba Temple: ಬಾಗಿಲು ತೆರೆದ ಶಿರಡಿ ಬಾಬಾ ಮಂದಿರ; ನವರಾತ್ರಿಯಿಂದ ಸಾರ್ವಜನಿಕರಿಗೆ ಸಿಗಲಿದೆ ಸಾಯಿ ದರ್ಶನ

ಶಿರಡಿ ಸಾಯಿ ಬಾಬಾ ದೇಗುಲಕ್ಕೆ ತೆರಳುವ ಮುನ್ನ ಅಲ್ಲಿನ ನಿಯಮ ಪಾಲನೆ ಅನಿವಾರ್ಯವಾಗಿದ್ದು, ಅಲ್ಲಿನ ಟ್ರಸ್ಟ್​ ಯಾವ ನಿಬಂಧನೆಗಳನ್ನು ಹೇರಿದೆ ಎಂಬ ಮಾಹಿತಿ ಇಲ್ಲಿದೆ.

ಶಿರಡಿ ಬಾಬಾ

ಶಿರಡಿ ಬಾಬಾ

 • Share this:
  ಮುಂಬೈ (ಅ. 5):  ಕೋವಿಡ್​ ಎರಡನೇ ಅಲೆಗೆ ಮಹಾರಾಷ್ಟ್ರ ತತ್ತರಿಸಿತ್ತು. ಅತಿ ಹೆಚ್ಚು ಪ್ರಕರಣ ದಾಖಲಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ ಸೋಂಕು (Maharashtra Covid Cases) ನಿಯಂತ್ರಣಕ್ಕೆ ಬಿಗಿ ನಿಯಂತ್ರಣ ಕ್ರಮ ಕೈಗೊಳ್ಳಲಾಗಿತ್ತು. ಇದೇ ವೇಳೆ ಕೋವಿಡ್​​  ಅಬ್ಬರದಿಂದ ಮಹಾರಾಷ್ಟ್ರದ ಪ್ರಮುಖ ದೇಗುಲಗಳು ಬಂದ್​ ಆಗಿದ್ದವು. ಸೋಂಕು ಕಡಿಮೆಯಾದ ಬಳಿಕವೂ ಕಂಡು ಬಂದ ಡೆಲ್ಟಾ ಹಾವಳಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ದೇಗುಲಗಳು ಬಂದ್​ ಆಗಿದ್ದವು.  ಈ ದೇಗುಲಗಳ ಬಾಗಿಲು ತೆರೆಯುವಂತೆ ಜನರು, ಬಿಜೆಪಿ ನಾಯಕರು ಶಿವಸೇನೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ, ತಕ್ಷಣಕ್ಕೆ ದೇಗುಲಗಳನ್ನು ತೆರೆದರೆ ಅಪಾಯ ಎಂದ ಸರ್ಕಾರ ಹಂತ ಹಂತವಾಗಿ ದೇಗುಲಗಳ ತೆರವಿಗೆ ಆದೇಶ ನೀಡಿತು. ಅದರಂತೆ ಇದೀಗ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ (shiradi Sai baba Temple) ತೆರೆಯಲು ಅನುಮತಿ ಸಿಕ್ಕಿದ್ದು, ಬಾಬಾನ ಭಕ್ತರಲ್ಲಿ ಸಂತಸ ಮೂಡಿದೆ.

  ನವರಾತ್ರಿಯಿಂದ ದರ್ಶನ ನೀಡಲಿರುವ ಬಾಬಾ

  ನವರಾತ್ರಿಯ ಆರಂಭದಿಂದಲೇ ಅಂದರೆಅಕ್ಟೋಬರ್ 7 ರಿಂದ ಮಹಾರಾಷ್ಟ್ರ ಸರ್ಕಾರವು ಸೆಪ್ಟೆಂಬರ್ 24 ರಂದು ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಪುನಃ ತೆರೆಯುವುದಾಗಿ ಸರಕಾರ ಘೋಷಿಸಿದೆ. ಅದರಂತೆ ಶಿರಡಿ ಸಾಯಿಬಾಬಾ ದೇಗುಲ ಕೂಡ ಆರು ತಿಂಗಳ ಬಳಿಕ ಮತ್ತೆ ಭಕ್ತರಿಗೆ ಪ್ರವೇಶ ಮುಕ್ತವಾಗಲಿದೆ.

  ನಿಯಮ ಪಾಲನೆ ಕಡ್ಡಾಯ

  ನವರಾತ್ರಿ ಹಬ್ಬದ ಸಂಭ್ರಮದ ಹಿನ್ನಲೆ ಇದೀಗ ಶಿರಡಿ ಸಾಯಿ ಬಾಬಾ ಮಂದಿರ ತೆರೆಯಲು ಶ್ರೀ ಸಾಯಿ ಬಾಬಾ ಸಂಸ್ಥಾನದ ಟ್ರಸ್ಟ್​ ಮುಂದಾಗಿದೆ, ನವರಾತ್ರಿ ಆರಂಭವಾಗಲಿದ್ದು, ಅದೇ ದಿನ ಬಾಬಾ ಮಂದಿರ ಕೂಡ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಈ ವೇಳೆ ಭಕ್ತರಿಗೆ ಕೆಲವು ನಿರ್ಬಂಧಗಳನ್ನು ಟ್ರಸ್ಟ್​ ವಿಧಿಸಿದೆ. ಈ ನಿಯಮಗಳ ಪಾಲನೆ ಮಾಡಿದರೆ ಮಾತ್ರ ಭಕ್ತರಿಗೆ ಅವಕಾಶ ಎಂದು ಟ್ರಸ್ಟ್​ ತಿಳಿಸಿದೆ.

  ಶಿರಡಿ ಸಾಯಿ ಬಾಬಾ ದೇಗುಲಕ್ಕೆ ತೆರಳುವ ಮುನ್ನ ಅಲ್ಲಿನ ನಿಯಮ ಪಾಲನೆ ಅನಿವಾರ್ಯವಾಗಿದ್ದು, ಅಲ್ಲಿನ ಟ್ರಸ್ಟ್​ ಯಾವ ನಿಬಂಧನೆಗಳನ್ನು ಹೇರಿದೆ ಎಂಬ ಮಾಹಿತಿ ಇಲ್ಲಿದೆ.
  -ಅಕ್ಟೋಬರ್​ 7 ರಿಂದ ಶಿರಡಿ ಸಾಯಿ ಬಾಬಾ ಮಂದಿರ ತೆರೆಯಲಾಗುವುದು. ಈ ವೇಳೆ ದಿನಕ್ಕೆ ಕೇವಲ 15000 ಭಕ್ತರಿಗೆ ಮಾತ್ರ ದೇವಾಲಯದ ಆವರಣಕ್ಕೆ ಪ್ರವೇಶ ಕಲ್ಪಿಸಲಾಗುವುದು
  -ಇದರಲ್ಲಿ ದೇವಾಲಯದ ಆಡಳಿತ ಮಂಡಳಿ 5000 ಶುಲ್ಕದ ಪಾಸ್​​ ನೀಡಿದರೆ, ಆನ್​ಲೈನ್​ ಮೂಲಕ 5000, ಆಫ್​ಲೈನ್​​ ಮೂಲಕ 5000 ಪಾಸ್​ ನೀಡಲಾಗುವುದು.
  ಹೊಸ ನಿಯಮದ ಪ್ರಕಾರ ಗಂಟೆಗೆ 1,150 ಭಕ್ತರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು
  -ಆರತಿ ಕಾರ್ಯಕ್ರಮದಲ್ಲಿ ಕೇವಲ 90 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು
  ದೇವಾಲಯದ ಆಡಳಿತ ಮಂಡಳಿ ಹೊರಡಿಸಿರುವ ನಿಯಮಗಳ ಪಾಲನೆ, ಮಾಸ್ಕ್​ ಧಾರಣೆ ಕಡ್ಡಾಯವಾಗಿದೆ.
  -ಗರ್ಭಿಣಿ ಮಹಿಳೆಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಆವರಣ ಪ್ರವೇಶಿಸಲು ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಸ್ಪಷ್ಟಪಡಿಸಿದೆ.
  -ಸಾಯಿ ಬಾಬಾ ದೇವಸ್ಥಾನದ ದರ್ಶನ ಮತ್ತು ದೇವಸ್ಥಾನದ ದೈನಂದಿನ ಕಾರ್ಯಕ್ರಮಗಳು ಎಂದಿನಂತೆ ಮುಂದುವರಿಯಲಿವೆ. ಇಲ್ಲಿ ತಂಗಲು, ಆಹಾರ ಮತ್ತು ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ.

  ಇದನ್ನು ಓದಿ: 18,000 ವರ್ಷಗಳ ಹಿಂದೆ ಮಾನವರು ಸಾಕುತ್ತಿದ್ದ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಯ ಕುರಿತು ಇಲ್ಲಿದೆ ವಿವರ

  ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನಲೆ ಮತ್ತು ಲಸಿಕೆ ಕಾರ್ಯಕ್ರಮ ಭರದಿಂದ ಸಾಗಿರುವ ಹಿನ್ನಲೆ  ಧಾರ್ಮಿಕ ಸ್ಥಳಗಳನ್ನು ತೆರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೆಪ್ಟೆಂಬರ್‌ನಲ್ಲಿ ಅವಕಾಶ ನೀಡಿದ್ದಾರೆ, ಈ ವೇಳೆ ಜನರು ತಪ್ಪದೇ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಈ ಮೂಲಕ ಮತ್ತೊಂದು ಅಲೆ ಸೋಂಕಿಗೆ ಅವಕಾಶ ನೀಡಬಾರದು  ಎಂದು ಒತ್ತಾಯಿಸಿದ್ದಾರೆ.
  Published by:Seema R
  First published: