Shashi Tharoor- ಪತ್ನಿ ಸುನಂದಾ ಸಾವು ಪ್ರಕರಣ: ಶಶಿ ತರೂರ್​ಗೆ ಕ್ಲೀನ್ ಚಿಟ್; ಏಳು ವರ್ಷದ ಯಾತನೆಗೆ ಕೊರಗಿದ ಸಂಸದ

Sunanda Pushkar Death Case- 2010ರಲ್ಲಿ ಶಶಿ ತರೂರ್ ಅವರನ್ನ ವಿವಾಹವಾಗಿದ್ದ ಸುನಂದಾ ಪುಷ್ಕರ್ 2014ರಲ್ಲಿ ದೆಹಲಿಯ ಲಕ್ಷುರಿ ಹೋಟೆಲ್​ವೊಂದರ ಕೊಠಡಿಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ ತರೂರ್ ಅವರಿಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ಶಶಿ ತರೂರ್

ಶಶಿ ತರೂರ್

  • News18
  • Last Updated :
  • Share this:
ನವದೆಹಲಿ, ಆ. 18: ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಖುಲಾಸೆಗೊಂಡಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಇಂದು ಪ್ರಕಟಿಸಿದ ತೀರ್ಪಿನಲ್ಲಿ ಈ ಅಭಿಪ್ರಾಯ ನೀಡಿದೆ. ಏಳು ವರ್ಷಗಳ ಹಿಂದೆ ದೆಹಲಿಯ ಹೋಟೆಲ್​ವೊಂದರಲ್ಲಿ ಸುನಂದಾ ಪುಷ್ಕರ್ ಸಾವನ್ನಪ್ಪಿದ್ದರು. ದೆಹಲಿ ಪೊಲೀಸರು ಇದೊಂದು ಕೊಲೆ ಎಂದು ಪ್ರಕರಣ ದಾಖಲಿಸಿ ಶಶಿ ತರೂರ್ ಅವರನ್ನ ಪ್ರಮುಖ ಆರೋಪಿಯಾಗಿ ಮಾಡಲಾಗಿತ್ತು. ಆದರೆ, ವಿಶೇಷ ತನಿಖಾ ತಂಡ ಎಸ್​ಐಟಿ ನಡೆಸಿದ ತನಿಖೆಯಿಂದ ಶಶಿ ತರೂರ್ ಅವರ ಪಾತ್ರ ಈ ಸಾವಿನಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ ಎಂದು ಕಳೆದ ಬಾರಿಯ ಕೋರ್ಟ್ ವಿಚಾರಣೆಯ ವೇಳೆ ಶಶಿ ತರೂರ್ ಪರ ವಕೀಲ ವಿಕಾಸ್ ಪಾಹ್ವ ವಾದಿಸಿದ್ದರು.

2014ರಲ್ಲಿ ಸುನಂದಾ ಪುಷ್ಕರ್ ಅವರು ದೆಹಲಿಯ ಲಕ್ಸುರಿ ಹೋಟೆಲ್​ವೊಂದರ ರೂಮಿನಲ್ಲಿ ಸಾವನ್ನಪ್ಪಿದ್ದರು. ಆಗ ಯುಪಿಎ ಆಡಳಿತದ ಅವಧಿಯಲ್ಲಿ ಶಶಿ ತರೂರ್ ಕೇಂದ್ರ ಸಚಿವರಾಗಿದ್ದರು. ದೆಹಲಿಯಲ್ಲಿ ತಮ್ಮ ಅಧಿಕೃತ ನಿವಾಸದ ದುರಸ್ತಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ಚಾಣಕ್ಯಪುರಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ವಾಸವಿದ್ದರು. ಆಗ ಸುನಂದಾ ಅವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಬೆಳಗ್ಗೆ ಸುನಂದಾ ಅವರನ್ನ ಎಬ್ಬಿಸಲು ಶಶಿ ತರೂರ್ ಪ್ರಯತ್ನಿಸಿದಾಗ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಈಕೆ ಓವರ್ ಡೋಸ್ ಔಷಧ ತೆಗೆದುಕೊಂಡಿದ್ದರಿಂದ ಸಾವನ್ನಪ್ಪಿರಬಹುದು ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿತ್ತು. ಇದೇ ವೇಳೆ, ಶಶಿ ತರೂರ್ ಅವರೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಅದರಂತೆಯೇ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕ್ರೌರ್ಯ ಎಸಗಿದ ಆರೋಪವನ್ನು ಹೊರಿಸಿದ್ದರು. ಆದರೆ, ಅಂತಿಮವಾಗಿ ನ್ಯಾಯಾಲಯವು ಶಶಿ ತರೂರ್ ಅವರನ್ನ ಆರೋಪಮುಕ್ತಗೊಳಿಸಿದೆ.

ನ್ಯಾಯಾಲಯದ ತೀರ್ಪನ್ನು ಶಶಿ ತರೂರ್ ಸ್ವಾಗತಿಸಿದ್ದಾರೆ. ಏಳೂವರೆ ವರ್ಷಗಳು ನನ್ನ ಪಾಲಿಗೆ ಅಕ್ಷರಶಃ ಯಾತನಾಮಯ ದಿನಗಳಾಗಿದ್ದವು. ಈ ತೀರ್ಪನ್ನು ನಾನು ಸ್ವಾಗಿಸುತ್ತೇನೆ ಎಂದು ಶಶಿ ತರೂರ್ ಹೇಳಿದ್ಧಾರೆ. “ನನ್ನ ಪತ್ನಿ ಸುನಂದಾ ಅವರ ನಿಧನದ ಬಳಿಕ ಸೃಷ್ಟಿಯಾದ ದುಃಸ್ಥಿತಿಗೆ ಇದು ಅಂತ್ಯವಾಡಿದೆ. ಇಲ್ಲದ ಆರೋಪ ಮತ್ತು ಮಾಧ್ಯಮ ಚರ್ಚೆಗಳನ್ನ ನಾನು ಸಂಯಮದಿಂದಲೇ ಎದುರಿಸಿದೆ. ನ್ಯಾಯಾಂಗದ ಮೇಲೆ ನನಗೆ ಅಚಲವಾದ ನಂಬಿಕೆ ಇತ್ತು. ಅದೀಗ ಆ ನಂಬಿಕೆ ನಿಜವಾಗಿದೆ” ಎಂದು ಶಶಿ ತರೂರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ಧಾರೆ.

ಇದನ್ನೂ ಓದಿ: Afghanistan Crisis| ಪಾಕಿಸ್ತಾನಕ್ಕಿಂತ ಭಾರತದ ಮೇಲೆಯೇ ಅಘ್ಫಾನರಿಗೆ ನಿರೀಕ್ಷೆ ಹೆಚ್ಚು; ಪತ್ರಕರ್ತೆ ಕನಿಕಾ ಗುಪ್ತಾ

ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯಲ್ಲ, ಕೊಲೆಯೂ ಅಲ್ಲ ಎಂಬುದು ಸಾಕ್ಷ್ಯದಿಂದ ತಿಳಿಯುತ್ತದೆ. ಸುನಂದಾ ಪುಷ್ಕರ್ ಅವರು ಆ ದಿನಗಳಲ್ಲಿ ಹಲವಾರು ವೈದ್ಯಕೀಯ ಸಮಸ್ಯೆಗಳನ್ನ ಎದುರಿಸುತ್ತಿದ್ದರು. ಹೀಗಾಗಿ, ಆಕೆಯ ಸಾವನ್ನು ಒಂದು ಅಕಸ್ಮಿಕ ಘಟನೆ ಎಂದು ಪರಿಗಣಿಸಬೇಕು ಶಶಿ ತರೂರ್ ಅವರು ಹಿಂದಿನ ವಿಚಾರಣೆಗಳಲ್ಲಿ ಕೋರ್ಟ್​​ ಮುಂದೆ ಹೇಳಿದ್ದರು.

ಕಾಶ್ಮೀರೀ ಪಂಡಿತ ಸಮುದಾಯದ ಸುನಂದಾ ಪುಷ್ಕರ್ ಮತ್ತು ಕೇರಳದ ಶಶಿ ತರೂರ್ ಅವರು 2010ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ವೈಯಕ್ತಿಕವಾಗಿ ಅದು ಮೂರನೇ ಮದುವೆಯಾಗಿತ್ತು. ನಾಲ್ಕು ವರ್ಷಗಳ ಅವರ ದಾಂಪತ್ಯದಲ್ಲಿ ಏನೋ ಸಮಸ್ಯೆ ಇತ್ತು ಎಂದು ಅನುಮಾನ ಬರುವಂತಹ ಕೆಲ ಬೆಳವಣಿಗೆಗಳು ಆಗಿದ್ದವು. ಪಾಕಿಸ್ತಾನದ ಪತ್ರಕರ್ತೆಯೊಬ್ಬಳೊಂದಿಗೆ ಶಶಿ ತರೂರ್ ಸಂಬಂಧ ಇದೆ ಎಂಬರ್ಥದಲ್ಲಿ ಸುನಂದಾ ಪುಷ್ಕರ್ ಅವರು ಟ್ವೀಟ್ ಮಾಡಿದ್ದರು. ಅದಾಗಿ ಕೆಲ ದಿನಗಳಲ್ಲೇ ಅವರು ಹೋಟೆಲ್ ರೂಮ್​ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಇದೀಗ ಆ ಸಾವಿನಲ್ಲಿ ತರೂರ್ ಪಾತ್ರ ಇಲ್ಲ ಎಂದು ಕೋರ್ಟ್ ತೀರ್ಪು ನೀಡುವುದರೊಂದಿಗೆ ಪ್ರಕರಣ ಬಹುತೇಕ ಸಮಾಪ್ತಿಯಾಗಿದೆ. ಆದರೆ, ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಇನ್ನೂ ಹೆಚ್ಚು ದಾಖಲೆಗಳನ್ನ ಸಲ್ಲಿಸಲು ಅವಕಾಶ ಕೊಡುವಂತೆ ಕೋರ್ಟ್​​ಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕೋರ್ಟ್ ಕೂಡ ಒಪ್ಪಿಕೊಂಡಿದೆ.
Published by:Vijayasarthy SN
First published: