• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ರೈತರ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಪ್ರಚೋದನಾತ್ಮಕ ಟ್ವೀಟ್​; ಶಶಿ ತರೂರ್​ ಸೇರಿದಂತೆ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

ರೈತರ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಪ್ರಚೋದನಾತ್ಮಕ ಟ್ವೀಟ್​; ಶಶಿ ತರೂರ್​ ಸೇರಿದಂತೆ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

ಸಂಸದ ಶಶಿ ತರೂರ್​.

ಸಂಸದ ಶಶಿ ತರೂರ್​.

ಯುವಕನ ಸಾವಿನ ಬಗೆಗಿನ ವರದಿಯನ್ನು ತಿರುಚಲಾಗಿದೆ. ಇದು ಪೂರ್ವಾಗ್ರಹ ಪೀಡಿತವಾಗಿದೆ. ಇವರು ರಾಷ್ಟ್ರೀಯ ಸುರಕ್ಷತೆ ಮತ್ತು ಜನರ ಜೀವನವನ್ನು ಅಪಾಯಕ್ಕೆ ದೂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ.

 • Share this:

  ನವ ದೆಹಲಿ (ಜನವರಿ 29); ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಪ್ರಚೋದನಾತ್ಮಕ ಟ್ವೀಟ್ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಸೇರಿದಂತೆ 6 ಜನ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ಜವವರಿ 26ರ ರೈತ ಪ್ರತಿಭಟನೆ ವೇಳೆ ಕೆಲ ರೈತರ ಗುಂಪು ಕೆಂಪುಕೋಟೆಗೆ ಮುತ್ತಿಗೆ ಹಾಕಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದರೆ 20 ಜನ ಗಾಯಾಳುಗಳಾಗಿದ್ದರು. ಈ ಘಟನೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯ ವೇಳೆ ಯುವಕನೋರ್ವ ಸಾವಿಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದ ಸಂಸದ ಶಶಿ ತರೂರ್‌ ಸೇರಿದಂತೆ ಹಲವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.


  ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ನ್ಯಾಷನಲ್‌ ಹೆರಾಲ್ಡ್‌ನ ಮ್ರಿನಾಲ್‌ ಪಾಂಡೆ, ಕೌಮಿ ಆವಾಜ್‌ನ ಜಾಫರ್ ಆಘಾ, ದಿ ಕ್ಯಾರವನ್‌ ಸುದ್ದಿ ಸಮೂಹದ ಅನಂತ್‌ ನಾಥ್‌ ಮತ್ತು ವಿನೋದ್‌ ಜೋಶ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ.


  ಈ ಕುರಿತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಟ್ವೀಟ್ ಮಾಡಿದ್ದು, "ಭಾರತೀಯ ದಂಡಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 120ಬಿ (ಮರಣದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕೆ ಅಪರಾಧ ಸಂಚು) ಸೇರಿದಂತೆ 11 ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.


  ರ್‍ಯಾಲಿ ವೇಳೆ ಟ್ರ್ಯಾಕ್ಟರ್‌ ಮಗುಚಿ ಬಿದ್ದು ಯುವಕನೋರ್ವ ಮೃತಪಟ್ಟಿದ್ದ. ಈ ಸುದ್ದಿಯನ್ನು ಪೊಲೀಸರ ಗುಂಡೇಟಿಗೆ ಯುವಕ ಮೃತಪಟ್ಟಿದ್ದಾನೆಂದು ಕೆಲ ಮಾಧ್ಯಮಗಳು ವರದಿ ಮಾಡಿದವು. ಆ ವರದಿಗಳನ್ನು ಶಶಿ ತರೂರ್‌ ಸೇರಿದಂತೆ ಹಲವು ಪತ್ರಕರ್ತರು ಟ್ವೀಟ್‌ ಮಾಡಿದ್ದರು. ಆದರೆ, ಯುವಕನು ಪೊಲೀಸರ ಗುಂಡೇಟಿಗೆ ಬಲಿಯಾಗಿರಲಿಲ್ಲ ಎಂಬುದು ಮರಣೋತ್ತರ ವರದಿ ಬಂದ ನಂತರ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ.


  ಯುವಕನ ಸಾವಿನ ಬಗೆಗಿನ ವರದಿಯನ್ನು ತಿರುಚಲಾಗಿದೆ. ಇದು ಪೂರ್ವಾಗ್ರಹ ಪೀಡಿತವಾಗಿದೆ. ಇವರು "ರಾಷ್ಟ್ರೀಯ ಸುರಕ್ಷತೆ ಮತ್ತು ಜನರ ಜೀವನವನ್ನು ಅಪಾಯಕ್ಕೆ ದೂಡಿದ್ದಾರೆ" ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ.


  ಇದನ್ನೂ ಓದಿ: President Speech - ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ರಾಮನಾಥ್ ಕೋವಿಂದ್


  ಜನವರಿ 26 ರಂದು ನಡೆದ ರ್‍ಯಾಲಿಯಲ್ಲಿ ಕೆಲವು ರೈತರ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಸಿಖ್ ಧರ್ಮದ ಧ್ವಜವನ್ನು ಹಾರಿಸಿತ್ತು. ಇದು ದೇಶದಾದ್ಯಂತ ಸಂಚಲನ ಉಂಟುಮಾಡಿತ್ತು. ಇದು ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಪಿತೂರಿ ಎಂದು ರೈತ ಸಂಘಟನೆಗಳು ಆರೋಪಿಸಿದ್ದವು.


  ಇದರ ಜೊತೆಗೆ ಈ ಘಟನೆ ಬಗ್ಗೆ ಇದೀಗ ದೇಶದಾದ್ಯಂತ ಪರ-ವಿರೋಧದ ಚರ್ಚೆಗಳು ಆರಂಭವಾಗಿರುವ ಬೆನ್ನಿಗೆ ಶಶಿ ತರೂರ್​ ಸೇರಿದಂತೆ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿರುವುದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.

  Published by:MAshok Kumar
  First published: