ಸಿಎಂ ವಸುಂಧರಾ ದೇಹದ ಬಗ್ಗೆ ಶರದ್​ ಯಾದವ್ ಕಮೆಂಟ್​; ಭಾಷೆ ಮೇಲೆ ಹಿಡಿತವಿರಲಿ ಎಂದ ರಾಜೇ

2015ರಲ್ಲಿ ಕೂಡ ಇದೇ ರೀತಿ ವಿವಾದ ಹುಟ್ಟುಹಾಕಿದ್ದ ಶರದ್​ ಯಾದವ್​ ಸಂಸತ್​ನಲ್ಲಿ ಮಾತನಾಡುವಾಗ ದಕ್ಷಿಣ ಭಾರತೀಯ ಮಹಿಳೆಯರು ಅಷ್ಟೇನೂ ಆಕರ್ಷಿತವಲ್ಲದ ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ ಎಂದು ವ್ಯಾಖ್ಯಾನ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು.

sushma chakre | news18
Updated:December 7, 2018, 11:55 AM IST
ಸಿಎಂ ವಸುಂಧರಾ ದೇಹದ ಬಗ್ಗೆ ಶರದ್​ ಯಾದವ್ ಕಮೆಂಟ್​; ಭಾಷೆ ಮೇಲೆ ಹಿಡಿತವಿರಲಿ ಎಂದ ರಾಜೇ
ವಸುಂಧರಾ ರಾಜೇ- ಶರದ್ ಯಾದವ್
sushma chakre | news18
Updated: December 7, 2018, 11:55 AM IST
ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಪ್ರಸಿದ್ಧರಾಗುತ್ತಿರುವ ಬಿಹಾರದ ಎಲ್​ಜೆಡಿ ನಾಯಕ ಶರದ್ ಯಾದವ್ ಇದೀಗ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ವಿವಾದಾತ್ಮಕ ಕಮೆಂಟ್​ ಮಾಡಿ ಸುದ್ದಿಯಾಗಿದ್ದಾರೆ.

ರಾಜಸ್ಥಾನದ ಅಲ್ವಾರ್​ನಲ್ಲಿ ನಿನ್ನೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಶರದ್​ ಯಾದವ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು 'ಡುಮ್ಮಿ' ಎಂದು ಕರೆದಿದ್ದಾರೆ. ತಮ್ಮ ಪಕ್ಷದ ನಾಯಕಿಯ ದೇಹದ ಬಗ್ಗೆ ಕಮೆಂಟ್​ ಮಾಡಿರುವ ಶರದ್ ಯಾದವ್ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

ಶರದ್​ ಯಾದವ್ ಹೇಳಿದ್ದೇನು?
ಪ್ರಚಾರದ ವೇಳೆ ಬಿಜೆಪಿ ಪಕ್ಷದ ಮೇಲೆ ಹರಿಹಾಯ್ದ ಯಾದವ್, 'ವಸುಂಧರಾ ರಾಜೇ ಅವರಿಗೆ ಸ್ವಲ್ಪ ವಿಶ್ರಾಂತಿ ಬೇಕಾಗಿದೆ. ಅವರಿಗೆ ಅವರ ಆರೋಗ್ಯ ಮತ್ತು ದೇಹದ ಸೌಂದರ್ಯದ ಕುರಿತು ಕಾಳಜಿ ವಹಿಸಲು ಸಮಯವೇ ಇಲ್ಲದಂತಾಗಿದೆ. ಆ ಕಾರಣಕ್ಕಾದರೂ ನೀವು ಈ ಬಾರಿ ಬಿಜೆಪಿಗೆ ವಿಶ್ರಾಂತಿ ನೀಡಬೇಕು. ಸಿಎಂ ವಸುಂಧರಾ ರಾಜೆ ಬಹಳ ಸುಸ್ತಾಗಿದ್ದಾರೆ. ಅವರಿಗೆ ರಾಜಕೀಯದಿಂದ ಸ್ವಲ್ಪ ಬಿಡುವು ನೀಡೋಣ. ಮೊದಲೆಲ್ಲ ತೆಳ್ಳಗೆ ಎಷ್ಟು ಚೆನ್ನಾಗಿದ್ದರು. ಈಗ ತಮ್ಮ ಬಗ್ಗೆ ಕಾಳಜಿ ವಹಿಸಲು ಬಿಡುವಿಲ್ಲದೆ ಯಾವ ರೀತಿ ಊದಿಕೊಂಡಿದ್ದಾರೆ ನೋಡಿ. ಆಕೆ ನಮ್ಮ ಮಧ್ಯಪ್ರದೇಶದ ಮಗಳು. ಆಕೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯೂ ಹೌದು' ಎಂದು ಗೇಲಿ ಮಾಡಿದ್ದಾರೆ.


Loading...

ಶರದ್​ ಯಾದವ್​ ಸಿಎಂ ವಸುಂಧರಾ ರಾಜೇ ಅವರ ದೇಹಸೌಂದರ್ಯದ ಬಗ್ಗೆ ಕಮೆಂಟ್​ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅವರ ವಿರುದ್ಧ ರಾಜಸ್ಥಾನದ ಬಿಜೆಪಿ ಚುನಾವಣಾ ಘಟಕದ ರಾಜ್ಯಾಧ್ಯಕ್ಷರಾದ ನಹಾರ್​ ಸಿಂಗ್​ ಮಹೇಶ್ವರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಶರದ್​ ಯಾದವ್​ ಅವರನ್ನು ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್​ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಅದಾದ ನಂತರ ಲೋಕತಾಂತ್ರಿಕ ಜನತಾ ದಳ (ಎಲ್​ಜೆಡಿ) ಪಕ್ಷ ಕಟ್ಟಿಕೊಂಡಿದ್ದ ಶರದ್​ ಯಾದವ್​ ವಿವಾದಗಳಿಂದಲೇ ಹೆಚ್ಚು ಗಮನ ಸೆಳೆದಿದ್ದರು. ವಸುಂಧರಾ ರಾಜೆ ಕುರಿತ ಅವರ ಹೇಳಿಕೆಯ ವಿಡಿಯೋ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಚುನಾವಣೆ: ಭಾರೀ ಪ್ರಮಾಣದಲ್ಲಿ ಅಕ್ರಮ ಹಣ, ಮದ್ಯ ವಶಕ್ಕೆ

ವಿವಾದ ಇದೇ ಮೊದಲೇನಲ್ಲ:
ಹೆಣ್ಣುಮಗಳ ಗೌರವಕ್ಕಿಂತ ಮತದ ಗೌರವ ಉಳಿಸುವುದು ದೊಡ್ಡ ಜವಾಬ್ದಾರಿ. ಮಗಳು ಮರ್ಯಾದೆ ಕಳೆದುಕೊಂಡರೆ ಒಂದು ಹಳ್ಳಿಯ ಮರ್ಯಾದೆ ಹೋದಂತೆ. ಅದೇ ಒಂದು ವೋಟನ್ನು ಮಾರಾಟ ಮಾಡಿಕೊಂಡರೆ ಇಡೀ ದೇಶದ ಮರ್ಯಾದೆಯೇ ಹೋಗುತ್ತದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು ಶರದ್​ ಯಾದವ್.

2015ರಲ್ಲಿ ಕೂಡ ಇದೇ ರೀತಿ ವಿವಾದ ಹುಟ್ಟುಹಾಕಿದ್ದ ಶರದ್​ ಯಾದವ್​ ದಕ್ಷಿಣ ಭಾರತೀಯರ ಮೈಬಣ್ಣದ ಬಗ್ಗೆ ಮಾತನಾಡಿದ್ದರು. ಸಂಸತ್​ನಲ್ಲಿ ಮಾತನಾಡುವಾಗ ದಕ್ಷಿಣ ಭಾರತೀಯ ಮಹಿಳೆಯರು ಅಷ್ಟೇನೂ ಆಕರ್ಷಿತವಲ್ಲದ ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ ಎಂದು ವ್ಯಾಖ್ಯಾನ ಮಾಡಿ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಂದಹಾಗೆ, ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಜಲ್ರಾಪಟನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರ ವಿರುದ್ಧ ಇತ್ತೀಚೆಗಷ್ಟೆ ಬಿಜೆಪಿಯಿಂದ ಕಾಂಗ್ರೆಸ್​ ಸೇರಿರುವ ಮನವೇಂದ್ರ ಸಿಂಗ್​ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ-ತೆಲಂಗಾಣ ವಿಧಾನಸಭಾ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ಮತದನಾ ಮಾಡಿದ ಸ್ಟಾರ್​ ನಟರು

ಶಾಕ್​ ಆದ ವಸುಂಧರಾ ರಾಜೇ :

ಬಿಹಾರದ ರಾಜಕಾರಣಿ ಶರದ್​ ಯಾದವ್​ ಅವರ ಹೇಳಿಕೆ ಕೇಳಿ ನನಗೆ ಆಘಾತವಾಗಿದೆ. ಅವರು ಓರ್ವ ಮಹಿಳೆಗೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲೇಬೇಕು ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯರಿಗಾಗಿ ತೆರೆಯಲಾಗಿರುವ  ಪಿಂಕ್​ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಾಜೇ, ಯುವಕರಿಗೆ ಮಾದರಿಯಾಗಿರಬೇಕಾದ ಹಿರಿಯ ನಾಯಕರೇ ಈ ರೀತಿ ಮಹಿಳೆಯರ ದೇಹದ ಬಗ್ಗೆ ಗೇಲಿ ಮಾಡಿದರೆ ಹೇಗೆ? ಇದೇ ಅವರು ಯುವಕರಿಗೆ ನೀಡುವ ಸಂದೇಶವಾ? ಕಾಂಗ್ರೆಸ್​ ಮತ್ತು ಅದರ ಮಿತ್ರಪಕ್ಷಗಳ ನಾಯಕರು ತಮ್ಮ ಭಾಷೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಕ್​ ಮಾಡಿದ್ದು ಎಂದ ಯಾದವ್​!:

ತಮ್ಮ ಹೇಳಿಕೆಯ ವಿಡಿಯೋ ಎಲ್ಲ ಕಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶರದ್ ಯಾದವ್, ನನಗೂ ವಸುಂಧರಾ ರಾಜೇ ಅವರಿಗೂ ಬಹಳ ಹಳೆಯ ಪರಿಚಯ. ಆ ಸಲುಗೆಯಲ್ಲಿ ಜೋಕ್​ ಮಾಡಿದ್ದೆ. ಅದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಅದರಲ್ಲಿ ಅವರಿಗೆ ಅವಮಾನ ಮಾಡುವ ಉದ್ದೇಶವೇನೂ ಇರಲಿಲ್ಲ. ನಾನು ಅವರನ್ನು ಭೇಟಿಯಾದಾಗಲೂ ಅವರು ಇತ್ತೀಚೆಗೆ ಬಹಳ ದಪ್ಪ ಆಗುತ್ತಿದ್ದಾರೆ ಎಂಬುದನ್ನು ಹೇಳಿದ್ದೆ. ಅದನ್ನೇ ವೇದಿಕೆಯಲ್ಲಿ ಹೇಳಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ