ಇದು ಗೋವಾ ಅಲ್ಲ, ಮಹಾರಾಷ್ಟ್ರ, ಪಾಠ ಹೇಗೆ ಮಾಡಬೇಕು ಎಂದು ನಮಗೆ ಹೇಳಿಕೊಡಬೇಕಾಗಿಲ್ಲ; ಬಿಜೆಪಿಗೆ ಶರದ್ ಪವಾರ್ ಎಚ್ಚರಿಕೆ

ನಾವು ಎಲ್ಲರೂ ಜೊತೆಯಾಗಿದ್ದೇವೆ. 162 ನಮ್ಮ ಶಾಸಕರು ಮೊದಲ ಬಾರಿಗೆ ಜೊತೆಯಾಗಿರುವುದನ್ನು ನೋಡಿ. ರಾಜ್ಯಪಾಲರು ಸ್ವತಃ ಅವರೇ ಬಂದು ನೋಡಲಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

HR Ramesh | news18-kannada
Updated:November 25, 2019, 8:57 PM IST
ಇದು ಗೋವಾ ಅಲ್ಲ, ಮಹಾರಾಷ್ಟ್ರ, ಪಾಠ ಹೇಗೆ ಮಾಡಬೇಕು ಎಂದು ನಮಗೆ ಹೇಳಿಕೊಡಬೇಕಾಗಿಲ್ಲ; ಬಿಜೆಪಿಗೆ ಶರದ್ ಪವಾರ್ ಎಚ್ಚರಿಕೆ
ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್.
  • Share this:
ಮುಂಬೈ: ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಬೇಕು ಎನ್ನುವಷ್ಟರಲ್ಲಿ ಬಿಜೆಪಿಯೂ ಅಜಿತ್ ಪವಾರ್ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಬಿಜೆಪಿ ಬಹುಮತ ಇಲ್ಲದೆ, ಸರ್ಕಾರ ರಚಿಸಿದೆ. ನಮ್ಮ ಬಳಿ ಮೂರು ಪಕ್ಷಗಳಿಂದ ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲವಿದೆ ಎಂದು ಶಿವಸೇನೆ ಆರೋಪಿಸಿದೆ. ಏತನ್ಮಧ್ಯೆ, ಮೂರು ಪಕ್ಷಗಳು ತಮ್ಮ ಶಾಸಕರನ್ನು ಗ್ರ್ಯಾಂಡ್ ಹಯಾಟ್ ಹೋಟೆಲ್​ನಲ್ಲಿ ಸೇರಿಸಿ, ಒಗ್ಗಟ್ಟು ಪ್ರದರ್ಶಿಸಿದೆ.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಮಗಳು ಸುಪ್ರಿಯಾ ಸುಳೆ, ಕಾಂಗ್ರೆಸ್​ನ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಚೌಹಾಣ್, ಶಿವಸೇನೆಯ ಉದ್ಧವ್ ಠಾಕ್ರೆ, ಸಂಜಯ್ ರಾವತ್ ಸೇರಿ ಮೂರು ಪಕ್ಷಗಳ ಶಾಸಕರು ಗ್ರಾಂಡ್ ಹಯಾತ್ ಹೋಟೆಲ್​ಗೆ ಆಗಮಿಸಿದ್ದಾರೆ.

ಬಳಿಕ ಸರಿಯಾಗಿ ಏಳು ಗಂಟೆಗೆ ಮೂರು ಪಕ್ಷಗಳ ಶಾಸಕರು ಒಟ್ಟಿಗೆ ಸೇರಿ, ನಾವು 162 ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ಕಾರ ರಚನೆಗೆ ಬೇಕಾದ ಬಹುಮತ  ನಮ್ಮ ಬಳಿ ಇದೆ ಎಂದು ಮಾಧ್ಯಮದ ಎದುರು ಘೋಷಿಸಿದರು. ಮಹಾವಿಕಾಸ್ ಅಗ್ಹಾಡಿ ದೀರ್ಘ ಕಾಲ ಉಳಿಯಲಿ ಎಂದು ಘೋಷಣೆ ಮೊಳಗಿಸಿದರು.

ನಾವು ಎಲ್ಲರೂ ಜೊತೆಯಾಗಿದ್ದೇವೆ. 162 ನಮ್ಮ ಶಾಸಕರು ಮೊದಲ ಬಾರಿಗೆ ಜೊತೆಯಾಗಿರುವುದನ್ನು ನೋಡಿ. ರಾಜ್ಯಪಾಲರು ಸ್ವತಃ ಅವರೇ ಬಂದು ನೋಡಲಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.


ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಅಶೋಕ್ ಚವಾನ್, ನಾವು 162ಕ್ಕೂ ಹೆಚ್ಚು ಶಾಸಕರಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. 162 ಶಾಸಕರ ಸಹಿ ಇರುವ ಪತ್ರವನ್ನು ರಾಜಭವನಕ್ಕೆ ಕಳುಹಿಸಿದ್ದೇವೆ. ನಮ್ಮ ಬಳಿ ಬಹುಮತವಿದೆ. ನಮಗೆ ಅವಕಾಶ ಸಿಗಬೇಕು ಎಂದು ಹೇಳಿದರು.

ಬಾಳಸಾಹೇಬ್ ಥರೋಟ್ ಮಾತನಾಡಿ, ಮಹಾವಿಕಾಸ್ ಅಗ್ಹಾಡಿಯ ಮೊದಲ ಸಭೆ ಇದು. ಅಲ್ಪಮತದಲ್ಲಿ ಸರ್ಕಾರ ರಚಿಸಿರುವವರ ರಾಜೀನಾಮೆಯನ್ನು ಈ ಸಭೆ ಕೇಳುತ್ತಿದೆ. 162 ಶಾಸಕರ ಸಹಿವುಳ್ಳ ಪತ್ರವನ್ನು ರಾಜ್ಯಪಾಲರ ಕಚೇರಿಗೆ ನೀಡಿದ್ದೇವೆ. ನಮ್ಮ ಶಕ್ತಿಯನ್ನು ನೋಡಿದ ಮೇಲಾದರೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಾಸಕರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಮೈತ್ರಿಯ ಬಲವನ್ನು ಸೆರೆ ಹಿಡಿಯುವಂತಹ ಕ್ಯಾಮೆರಾ ಲೆನ್ಸ್ ಇಲ್ಲ. ನಾವು ಬಂದಿದ್ದೇವೆ, ನಮ್ಮ ಹಾದಿ ಸುಗಮವಾಗಿದೆ. ಶಿವಸೇನೆ ಏನು ಎಂಬುದು ಗೊತ್ತಿಲ್ಲದೇ ಅಡ್ಡಹಾದಿಯಲ್ಲಿ ನುಗ್ಗಲು ಯತ್ನಿಸಿದರೆ ಶಿವಸೇನೆ ಏನು ಎಂಬುದನ್ನು ತೋರಿಸಬೇಕಾಗುತ್ತದೆ. ನಾವು ಕೇವಲ ಐದು ವರ್ಷಗಳಿಗಾಗಿ ಮಾತ್ರ ಇಲ್ಲಿ ಇಲ್ಲ. ನಾವು ಮಹಾರಾಷ್ಟ್ರದಿಂದ ಆರಂಭಿಸುತ್ತಿದ್ದೇವೆ. ಮತ್ತು ಆನಂತರ ಮುಂದುವರೆಯುತ್ತೇವೆ ಎಂದು ಹೇಳಿದರು.

ಇದೇ ಸೇರಿದ್ದ ಎಲ್ಲ ಶಾಸಕರು ಪ್ರಮಾಣವಚನ ಬೋಧಿಸಿದರು. ನಾನು, ಶರದ್ ಪವಾರ್, ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪ್ರಮಾಣ ಮಾಡುತ್ತೇನೆ, ನಾನು ನನ್ನ ಪಕ್ಷಕ್ಕೆ ಪ್ರಾಮಾಣಿಕವಾಗಿ ಇರುತ್ತೇನೆ. ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಬಿಜೆಪಿಯ ಅನುಕೂಲವಾಗುವ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಪ್ರಮಾಣವಚನ ಬೋಧಿಸಿದರು.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ನಮ್ಮ ಬಹುಮತ ಸಾಬೀತು ಮಾಡಲು ಯಾವುದೇ ಸಮಸ್ಯೆಯಿಲ್ಲ. ಪಕ್ಷದಿಂದ ಅಮಾನತುಗೊಂಡವರು ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಬಹುಮತ ಸಾಬೀತು ಮಾಡುವ ದಿನ ನಾನು 162ಕ್ಕೂ ಹೆಚ್ಚು ಶಾಸಕರನ್ನು ಕರೆತರುತ್ತೇನೆ. ಇದು ಗೋವಾ ಅಲ್ಲ, ಮಹಾರಾಷ್ಟ್ರ. ಪಾಠ ಹೇಗೆ ಮಾಡಬೇಕು ಎಂಬುದನ್ನು ನಮಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು. 
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading