ಮುಂಬೈ (ಅಕ್ಟೋಬರ್ 20); ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಒಂದು ಪತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಮೇಲೆ ಇಂದು ನೇರ ವಾಗ್ದಾಳಿ ನಡೆಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್, “ಸ್ವಾಭಿಮಾನ ಹೊಂದಿರುವ ಯಾರಾದರೂ ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕುವಂತೆ ನಾವು ಬೇಡಿಕೆ ಇಡುವುದಿಲ್ಲ. ಆದರೆ, ಅವರೇ ತಮ್ಮ ಹುದ್ದೆಯನ್ನು ತ್ಯಜಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಾ ಪೂಜಾ ಸ್ಥಳ ದೇವಾಲಯಗಳನ್ನೂ ಮುಚ್ಚಲಾಗಿತ್ತು. ಆದರೆ, ಇತ್ತೀಚೆಗೆ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಬರೆದಿದ್ದ ಪತ್ರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸ್ವತಃ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಸಹ ಈ ಪತ್ರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದರು.
“ಈ ಪತ್ರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಕೆಲವು ಪದಗಳ ಬಳಕೆಯನ್ನು ನಿಯಂತ್ರಿಸಬೇಕಿತ್ತು” ಎಂದು ಅಮಿತ್ ಶಾ ಆಕ್ರೋಶ ಹೊರಹಾಕಿದ್ದರು. ತದನಂತರ ಈ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಬಿಜೆಪಿ ಸಹ ಇಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗಿತ್ತು.
ಆದರೆ, ಅಮಿತ್ ಶಾ ಅವರ ಹೇಳಿಕೆ ಬೆನ್ನಿಗೆ ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, “ಸ್ವಾಭಿಮಾನ ಇರುವ ಯಾವುದೇ ವ್ಯಕ್ತಿ ರಾಜ್ಯಪಾಲ ಹುದ್ದೆಯಲ್ಲಿ ಮುಂದುವರೆಯಾರರು. ಭಗತ್ ಸಿಂಗ್ ಕೋಶ್ಯರಿ ಈಗಲೂ ಈ ಹುದ್ದೆಯಲ್ಲಿ ಮುಂದುವರೆಯಬೇಕೆ?” ಎಂದು ಕಿಡಿಕಾರಿದ್ದಾರೆ. ಇದಲ್ಲದೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಹ ಪತ್ರ ಬರೆಯುವ ಮೂಲಕ ರಾಜ್ಯ ಪಾಲರ ನಡೆಯನ್ನು ಶರದ್ ಪವಾರ್ ಖಂಡಿಸಿದ್ದರು.
ಶಿವಸೇನೆ ಮುಖ್ಯ ವಕ್ತಾರ ಮತ್ತು ಸಂಸದ ಸಂಜಯ್ ರಾವತ್, ಅಮಿತ್ ಶಾ ಅವರ ಹೇಳಿಕೆಗಳನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಹೆಲ್ಮೆಟ್ ಧರಿಸದೆ ವಾಹನ ಚಾಲನೆ; ಚಾಲಕನ ಡಿಎಲ್ ಮೂರು ತಿಂಗಳು ಅಮಾನತು!
ರಾಜ್ಯದ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ವಿಷಯದ ಬಗ್ಗೆ ಕೊಶಾರಿ ಅಕ್ಟೋಬರ್ 12 ರಂದು ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಠಾಕ್ರೆಯ ಹಿಂದುತ್ವ ರುಜುವಾತುಗಳನ್ನು ಪ್ರಶ್ನಿಸಿದ್ದರು. ಅಲ್ಲದೆ, “ಸಿಎಂ ಇದ್ದಕ್ಕಿದ್ದಂತೆ ಜಾತ್ಯತೀತವಾಗಿದ್ದಾರೆಯೇ” ಎಂದು ಪ್ರಶ್ನಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ