ನವ ದೆಹಲಿ (ಡಿಸೆಂಬರ್ 08); ಕೇಂದ್ರ ಕೃಷಿ ಕಾನೂನಿನ ವಿರುದ್ಧ ಇಡೀ ದೇಶದ ರೈತ ಸಮುದಾಯ ರಸ್ತೆಗಿಳಿದು ಹೋರಾಟ ನಡೆಸುತ್ತಿವೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, "ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಖಾಸಗೀಕರಣದ ಪರವಾಗಿತ್ತು. ಖಾಸಗಿಯವರ ಪರವಾಗಿ ಅವರು ಇದೇ ಕೃಷಿ ಕಾನೂನನ್ನು ರೂಪಿಸಿದ್ದರು. ಈ ಹಿಂದೆ ಕಾಂಗ್ರೆಸ್ ರೂಪಿಸಿದ್ದ ಅದೇ ಕೃಷಿ ಕಾನೂನನ್ನು ಇಂದು ನಾವು ಜಾರಿಗೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಈ ಕಾನೂನನ್ನು ವಿರೋಧಿಸುತ್ತಿರುವುದೇಕೆ? ಇದು ಇಬ್ಬಂದಿನವಲ್ಲವೇ? ಎಂದು ಪ್ರಶ್ನಿಸಿದ್ದರು. ಇನ್ನೂ ಎನ್ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಅಂದಿನ ದಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಪತ್ರಬರೆದಿದ್ದರು ಎಂದು ಟೀಕಿಸಿದ್ದರು. ಆದರೆ, ಸಚಿವರ ಮಾತಿಗೆ ಎನ್ಸಿಪಿ ಮುಖಂಡ ಶರದ್ ಪವಾರ್ ಇಂದು ತಿರುಗೇಟು ನೀಡಿದ್ದಾರೆ.
ಸಚಿವ ರವಿಶಂಕರ್ ಪ್ರಸಾದ್ ಟೀಕೆಗೆ ಉತ್ತರ ನೀಡಿರುವ ಶರದ್ ಪವಾರ್, "ಎಪಿಎಂಸಿಗೆ ಕೆಲವು ಸುಧಾರಣೆಗಳು ಬೇಕು ಎಂದು ನಾನು ಹೇಳಿದ್ದೆ. ಎಪಿಎಂಸಿ ಕಾಯ್ದೆ ಮುಂದುವರಿಯಬೇಕು ಆದರೆ ಸುಧಾರಣೆಯೂ ಆಗಬೇಕು ಎಂದು ಪತ್ರ ಬರೆದಿದ್ದೆ. ಇದರಲ್ಲಿ ಸಂದೇಹವಿಲ್ಲ. ಆದರೆ ಅವರ ಮೂರು ಕಾಯ್ದೆಗಳು ಎಪಿಎಂಸಿಯನ್ನೂ ಸಹ ಉಲ್ಲೇಖಿಸಿಲ್ಲ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಯಕರು ಇಂತಹ ಅಸಡ್ಡೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ