HOME » NEWS » National-international » SHARAD PAWAR EMERGES FRONTRUNNER TO BE NEXT UPA CHAIRPERSON AS SONIA GANDHI LOOKS SET FOR RETIREMENT MAK

ಯುಪಿಎ ನಾಯಕಿ ಸ್ಥಾನದಿಂದ ಸೋನಿಯಾ ಗಾಂಧಿ ನಿವೃತ್ತಿ ಸಾಧ್ಯತೆ?; ಶರದ್​ ಪವಾರ್​ ಹೆಸರು ಮುಂಚೂಣಿಯಲ್ಲಿ!

ಯುಪಿಎ ಮೈತ್ರಿಕೂಟದಲ್ಲಿ ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿ, ಡಿಎಂಕೆ ಪಕ್ಷದ ಸ್ಟಾಲಿನ್​ ಅತ್ಯಂತ ಪ್ರಬಲ ನಾಯಕರು. ಹೀಗಾಗಿ ಮೈತ್ರಿಕೂಟದಲ್ಲಿ ಇವರೊಂದಿಗೆ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್. ಅಲ್ಲದೆ, ಮಮತಾ ಬ್ಯಾನರ್ಜಿ ರಾಹುಲ್ ಗಾಂಧಿಯ ಜೊತೆಗೆ ವ್ಯವಹರಿಸುವುದನ್ನು ಇಷ್ಟಪಡಲಾರರು ಎನ್ನಲಾಗುತ್ತಿದೆ.

news18-kannada
Updated:December 10, 2020, 4:09 PM IST
ಯುಪಿಎ ನಾಯಕಿ ಸ್ಥಾನದಿಂದ ಸೋನಿಯಾ ಗಾಂಧಿ ನಿವೃತ್ತಿ ಸಾಧ್ಯತೆ?; ಶರದ್​ ಪವಾರ್​ ಹೆಸರು ಮುಂಚೂಣಿಯಲ್ಲಿ!
ಶರದ್ ಪವಾರ್.
  • Share this:
ನವ ದೆಹಲಿ (ಡಿಸೆಂಬರ್​ 10); ನಿನ್ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ದಿನಿದಿಂದ ದಿನಕ್ಕೆ ಹದಗೆಡುತ್ತಿದೆ. ಇದೇ ಕಾರಣಕ್ಕೆ ವೈದ್ಯರು ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ತಮ್ಮ ಕೆಲಸಗಳನ್ನು ಬದಿಗಿಟ್ಟು ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್​ ಪಕ್ಷದಲ್ಲಿ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಯುಪಿಎ ಮೈತ್ರಿಕೂಟದ ನಾಯಕಿ ಸ್ಥಾನದಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಸ್ಥಾನಕ್ಕೆ ಎನ್​ಸಿಪಿ ಪಕ್ಷದ ಅಧ್ಯಕ್ಷ ಹಾಗೂ ಮಹಾರಾಷ್ಟ್ರದ ಹಿರಿಯ ನಾಯಕ ಶರದ್​ ಪವಾರ್​ ಹೆಸರು ಮುಂಚೂಣಿಯಲ್ಲಿದ್ದು, ಅವರೇ ನೇಮಕವಾಗುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ. 

ಅಸಲಿಗೆ ಯುಪಿಎ ಅಧ್ಯಕ್ಷರ ಸ್ಥಾನದಲ್ಲಿ ರಾಹುಲ್ ಗಾಂಧಿ ಮುಂದುವರೆಯಬೇಕು ಎಂಬುದು ಅನೇಕ ನಾಯಕರ ಒತ್ತಾಯ. ಆದರೆ, ಈ ಕುರಿತು ರಾಹುಲ್ ಗಾಂಧಿ ಆಸಕ್ತಿ ಹೊಂದಿಲ್ಲ. ಹೀಗಾಗಿ ಯುಪಿಎ ಅಧ್ಯಕ್ಷರ ಸ್ಥಾನಕ್ಕೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತಿದ್ದ ರಾಹುಲ್ ಗಾಂಧಿ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೋನಿಯಾ ಗಾಂಧಿ ಅವರನ್ನು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಕಳೆದ ಬಾರಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರೂ ಯುಪಿಎ ಅಧ್ಯಕ್ಷರಾಗಿ ಮತ್ತು ಸಂಸದೀಯ ಪಕ್ಷದ ನಾಯಕಿಯಾಗಿ ಮುಂದುವರಿದಿದ್ದರು. ಆದರೆ, ಈ ಬಾರಿ ಅವರ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್​ ಪಕ್ಷದ ಉನ್ನತ ಮೂಲಗಳು ನ್ಯೂಸ್​18ಗೆ ಮಾಹಿತಿ ನೀಡಿವೆ.

ಯುಪಿಎ ಮೈತ್ರಿಕೂಟದಲ್ಲಿ ಸೋನಿಯಾ ಗಾಂಧಿ ವರ್ಚಸ್ವಿ ನಾಯಕಿ. ಅವರ ಮಾತನ್ನು ಇತರೆ ಮಿತ್ರಪಕ್ಷಗಳ ನಾಯಕರು ಗೌರವಿಸುತ್ತಾರೆ. ಅವರ ಅನುಭವ ಮತ್ತು ಚುರುಕಾದ ರಾಜಕಾರಣ ಯುಪಿಎ ಮೈತ್ರಿಕೂಟಕ್ಕೆ ಅಗತ್ಯವಿದೆ, ಹೀಗಾಗಿ ಮಿತ್ರಪಕ್ಷದ ನಾಯಕರು ಅವರನ್ನೇ ಈ ಸ್ಥಾನದಲ್ಲಿ ಮುಂದುವರೆಯುವಂತೆ ಮನವಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಯುಪಿಎ ಮೈತ್ರಿಕೂಟದಲ್ಲಿ ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿ, ಡಿಎಂಕೆ ಪಕ್ಷದ ಸ್ಟಾಲಿನ್​ ಅತ್ಯಂತ ಪ್ರಬಲ ನಾಯಕರು. ಹೀಗಾಗಿ ಮೈತ್ರಿಕೂಟದಲ್ಲಿ ಇವರೊಂದಿಗೆ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಸೋನಿಯಾ ಗಾಂಧಿ ಅವರ ನಾಯಕತ್ವ ಗುಣ ಎಲ್ಲವನ್ನೂ ಸರಿದೂಗಿಸಿತ್ತು. ಇದೀಗ ಕಾಂಗ್ರೆಸ್​ ಸಹ ರಾಷ್ಟ್ರೀಯ ಮಟ್ಟದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಕಾರಣ ಮೈತ್ರಿಯನ್ನು ನಿಭಾಯಿಸುವುದು ಇನ್ನೂ ಕಷ್ಟದ ಕೆಲಸ. ಹೀಗಾಗಿ ಸೋನಿಯಾ ಗಾಂಧಿಯಂತಹದ್ದೇ ಗುಣ ಹೊಂದಿರುವ ಮತ್ತು ನರೇಂದ್ರ ಮೋದಿ ವರ್ಚಸ್ಸಿನ ಎದುರು ಬಲವಾಗಿ ನಿಲ್ಲಬಲ್ಲ ನಾಯಕತ್ವ ಇದೀಗ ಯುಪಿಎ ಗೆ ಅಗತ್ಯವಿದೆ.

ಇದನ್ನೂ ಓದಿ : Farmers Protest: ರೈತ ಹೋರಾಟದ ಹಿಂದೆ ಪಾಕ್-ಚೀನಾ ಕೈವಾಡವಿದೆ; ಕೇಂದ್ರ ಸಚಿವ ರಾವ್​​​ಸಾಹೇಬ್ ಧನ್ವೆ ವಿವಾದಾತ್ಮಕ ಹೇಳಿಕೆ

ಹೀಗಾಗಿ ಈ ಪಟ್ಟಿಯಲ್ಲಿ ಶರದ್​ ಪವಾರ್​ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಮರಾಠ ಸಮಾಜದ ಪ್ರಬಲ ವ್ಯಕ್ತಿಯಾಗಿರುವ ಶರದ್​ ಪವಾರ್​ ಇತರೆ ಪಕ್ಷಗಳ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಘಾತ ನೀಡುವಲ್ಲಿ ಅವರು ಸಫಲರಾಗಿದ್ದರು. ಆ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದ ಶಿವಸೇನೆ-ಕಾಂಗ್ರೆಸ್-ಎನ್​​ಸಿಪಿ ಮೈತ್ರಿ ಸರ್ಕಾರದ ಹಿಂದಿನ ಮಾಸ್ಟರ್​ ಮೈಂಡ್​ ಸಹ ಪವಾರ್ ಅವರೇ ಎಂಬುದನ್ನು ಅಲ್ಲಗೆಳೆಯಲಾಗದು.​ ಈ ಮೂಲಕ ತಾನು ಎಂತಹ ರಾಜಕೀಯ ನಿಪುಣ ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು.
Youtube Video

ಸ್ನೇಹಿತರು ಮತ್ತು ರಾಜಕೀಯ ಎದುರಾಳಿಗಳ ವಿರುದ್ಧ ಸಮಾನವಾಗಿ ಮೇಲುಗೈ ಸಾಧಿಸುವ ಆಕರ್ಷಕ ಗುಣವನ್ನು ಪವಾರ್ ಹೊಂದಿದ್ದಾರೆ. ಇದು ಯುಪಿಎ ಮುಖ್ಯಸ್ಥರಾಗಿ ಮೈತ್ರಿಗಳನ್ನು ನಿರ್ವಹಿಸುವಾಗ ನಿರ್ಣಾಯಕವಾಗಿರುತ್ತದೆ. ಯುಪಿಎ ಹಿರಿಯರ ಪಟ್ಟಿಯಲ್ಲೂ ಅವರದ್ದೇ ಮೊದಲ ಹೆಸರು. ಅಲ್ಲದೆ, ಮಮತಾ ಬ್ಯಾನರ್ಜಿಯಂತಹ ಹಿರಿಯ ನಾಯಕರು ರಾಹುಲ್​ ಗಾಂಧಿಯ ಜೊತೆಗೆ ವ್ಯವಹರಿಸುವುದನ್ನು ಈಗಲೂ ಇಷ್ಟಪಡುವುದಿಲ್ಲ. ಈ ನಡುವೆ ಕಾಂಗ್ರೆಸ್​ ಸಹ ಸತತ ಸೋಲಿನಿಂದ ಕಂಗೆಟ್ಟಿದ್ದು ಈ ಸ್ಥಾನಕ್ಕೆ ಶರದ್​ ಪವಾರ್​ ಅವರೇ ಹೆಚ್ಚು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಎಲ್ಲಾ ಊಹಾಪೋಹ-ಸಾಧ್ಯಾಸಾಧ್ಯತೆಗಳಿಗೆ ಶೀಘ್ರದಲ್ಲೇ ಉತ್ತರ ಲಭಿಸಲಿದೆ.
Published by: MAshok Kumar
First published: December 10, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories