Sharad Pawar| ಕಾಂಗ್ರೆಸ್ ಹಿಂದಿನ ಕಾಲದ ವೈಭವವನ್ನು ನೆನಪಿಸುವ ಹಳೆಯ ಜಮೀನ್ದಾರರಂತೆ; ಶರದ್ ಪವಾರ್
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಗೆದ್ದ ಕಾಲವೊಂದಿತ್ತು. ಈಗ ಅದು ಸಾಧ್ಯವಿಲ್ಲ. ಈ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಮಿತ್ರಪಕ್ಷಗಳೊಂದಿಗೆ ಆಪ್ತತೆ ಹೆಚ್ಚುತ್ತದೆ ಎಂದು ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ (ಸೆಪ್ಟೆಂಬರ್ 10); ಕಳೆದ ಎರಡೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಹೀನಾಯ ಸೋಲನುಭವಿಸಿದೆ. ಮುಂದಿನ ಚುನಾವಣೆ ಯಲ್ಲೂ ಬಿಜೆಪಿಗೆ (BJP) ಪರ್ಯಾಯವಾಗಿ ಬೆಳೆಯುವ ಯಾವ ವಿಶ್ವಾಸವೂ ಕಾಣಿಸುತ್ತಿಲ್ಲ. ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿರುವ ಎನ್ಸಿಪಿ (NCP) ಪಕ್ಷದ ಮುಖಂಡ ಶರದ್ ಪವಾರ್ (Sharad Pawar), "ಕಾಶ್ಮೀರದಿಂದ (Kashmir) ಕನ್ಯಾಕುಮಾರಿವರೆಗೆ (Kanyakumari) ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಗೆದ್ದ ಕಾಲವೊಂದಿತ್ತು. ಈಗ ಅದು ಸಾಧ್ಯವಿಲ್ಲ. ಈ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಮಿತ್ರಪಕ್ಷಗಳೊಂದಿಗೆ ಆಪ್ತತೆ ಹೆಚ್ಚುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದು, ಶರದ್ ಪವಾರ್ ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಾಯಕತ್ವದ ವಿಷಯಕ್ಕೆ ಬಂದಾಗ ಕಾಂಗ್ರೆಸ್ನಲ್ಲಿರುವ ನನ್ನ ಸಹದ್ಯೋಗಿಗಳೂ ವಿಭಿನ್ನ ಅಭಿಪ್ರಾಯ ತಾಳಲಾರದ ಸ್ಥಿತಿಯಲ್ಲಿದ್ದಾರೆ ಎಂದು ಇಂಡಿಯಾ ಟುಡೇ ಗುಂಪಿನ ಮರಾಠಿ ಡಿಜಿಟಲ್ ವೇದಿಕೆಯಾದ ತಕ್ನೊಂದಿಗೆ ಪವಾರ್ ಹೇಳಿಕೊಂಡಿದ್ದಾರೆ.
2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿದಾಗ, ಕಾಂಗ್ರೆಸ್ ನಾಯಕರು ನಾವು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಮುನ್ನುಗ್ಗುತ್ತೇವೆ ಎಂದರು. ಎಲ್ಲ ಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ನಲ್ಲಿರುವ ನನ್ನ ಸ್ನೇಹಿತರು ನಾಯಕತ್ವದ ಕುರಿತು ವಿಭಿನ್ನ ನಿಲುವು ತಾಳಲು ಸಿದ್ಧರಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಸ್ಥಿತಿಯನ್ನು ಜಮೀನ್ದಾರಿಕೆಯ ರೂಪಕವನ್ನು ಬಳಸಿ ವಿವರಿಸಿರುವ ಪವಾರ್, "ಉತ್ತರ ಪ್ರದೇಶದ ಜಮೀನುದಾರರು ದೊಡ್ಡ ಮಟ್ಟದ ಭೂಮಿಯನ್ನು ಹಾಗೂ ಹವೇಲಿಗಳನ್ನು ಹೊಂದಿದ್ದರು. ಮುಂದೆ ಕಾನೂನುಗಳು ಬಂದ ಮೇಲೆ ಅವರ ಭೂಮಿಯ ಒಡೆತನ ಕಡಿಮೆಯಾಗಿದೆ. ಹವೇಲಿಗಳು ಈಗಲೂ ಇವೆ. ಆದರೆ ಅವುಗಳನ್ನು ಬಳಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಜಮೀನುದಾರರ ಆದಾಯ ಕೂಡ ಮೊದಲಿನಂತಿಲ್ಲ. ಸಾವಿರಾರು ಎಕರೆ ಭೂಮಿಯನ್ನು ಅವರು ಈ ಹಿಂದೆ ಹೊಂದಿದ್ದರು. ಈಗ 15ರಿಂದ 20 ಎಕರೆ ಭೂಮಿನ್ನು ಹೊಂದಿದ್ದಾರೆ. ಮುಂಜಾನೆ ಎದ್ದ ಜಮೀನುದಾರ, ಸುತ್ತಲಿನ ಹಸಿರು ಪರಿಸರವನ್ನು ನೋಡುತ್ತಾ, ಈ ಭೂಮಿಯೆಲ್ಲ ನನ್ನದು ಎನ್ನುತ್ತಾನೆ. ಹಿಂದೊಮ್ಮೆ ಇದೆಲ್ಲ ಜಮೀನಿದಾರನಿಗೇ ಸೇರಿತ್ತು. ಆದರೆ ಅದು ಆತನದಲ್ಲ ಎಂದು ಶರದ್ ಪವಾರ್ ತಿಳಿಸಿದ್ದಾರೆ.