Sharad Pawar – ಶರದ್ ಪವಾರ್ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು; ಶಸ್ತ್ರಚಿಕಿತ್ಸೆಗೆ ತಯಾರಿ
ಮಾಜಿ ಸಿಎಂ ಶರದ್ ಪವಾರ್ ಹೊಟ್ಟೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಲ್ ಬ್ಲಾಡರ್ನಲ್ಲಿ ಸಮಸ್ಯೆ ಇದ್ದು, ಎಂಡೋಸ್ಕೋಪಿ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಎನ್ಸಿಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಮುಂಬೈ(ಮಾ. 29): ಅಮಿತ್ ಶಾ ಅವರನ್ನ ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿರುವ ಬೆನ್ನಲ್ಲೇ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಭಾನುವಾರ ಸಂಜೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಎನ್ಸಿಪಿ ಮುಖಂಡ ನವಾಬ್ ಮಲಿಕ್ ಹೇಳಿದ್ದಾರೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಪಾಸಣೆ ನಡೆದಿದ್ದು, ಶರದ್ ಪವಾರ್ ಅವರಿಗೆ ಪಿತ್ತಕೋಶ (Gall Bladder) ದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ ಎಂದು ಮಲಿಕ್ ತಮ್ಮ ಟ್ವೀಟ್ನಲ್ಲಿ ಮಾಹಿತಿ ನೀಡಿದ್ಧಾರೆ.
ಶರದ್ ಪವಾರ್ ಅವರು ಬ್ಲಡ್ ಥಿನಿಂಗ್ (ರಕ್ತ ತೆಳುಗೊಳಿಸುವಿಕೆ) ಮೆಡಿಕೇಶನ್ನಲ್ಲಿದ್ದರು. ಈಗ ಅದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಅವರಿಗೆ ಎಂಡೋಸ್ಕೊಪಿ ಮತ್ತು ಸರ್ಜರಿ ನಡೆಯಲಿದೆ. ಮಾರ್ಚ್ 31ರವರೆಗೆ ಆಸ್ಪತ್ರೆಯಲ್ಲಿರುವ ಅವರು ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನ ಅನಿರ್ದಿಷ್ಟ ಕಾಲ ರದ್ದು ಮಾಡಿದ್ದಾರೆ ಎಂದು ನವಾಬ್ ಮಲಿಕ್ ತಿಳಿಸಿದ್ದಾರೆ.
ಗುಜರಾತ್ನ ಅಹ್ಮದಾಬಾದ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಶರದ್ ಪವಾರ್ ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ನಿನ್ನೆಯಿಂದ ಸದ್ದು ಮಾಡುತ್ತಿದೆ. ಇದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಎನ್ಸಿಪಿ ಪಕ್ಷ ಈ ಬೆಳವಣಿಗೆಯನ್ನು ಬಲವಾಗಿ ತಳ್ಳಿಹಾಕಿದ್ದು, ಯಾವುದೇ ಭೇಟಿ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಅಮಿತ್ ಶಾ ಅವರು ಈ ಸುದ್ದಿಯನ್ನು ತಳ್ಳಿಹಾಕಿಲ್ಲ ಎಂಬುದು ಕುತೂಹಲ ಉಳಿಸಿದೆ. ಎಲ್ಲವನ್ನೂ ಬಹಿರಂಗಪಡಿಸಲಾಗದು ಎಂದು ಶಾ ಅವರು ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದ ಮಹಾ ವಿಕಾಸ್ ಆಗಡಿ ಮೈತ್ರಿ ಸರ್ಕಾರದ ಭಾಗವಾಗಿರುವ ಎನ್ಸಿಪಿ ಮತ್ತು ಶಿವಸೇನೆ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯೂ ಇದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಪವಾರ್ ಭೇಟಿಯಾಗಿರುವ ಸುದ್ದಿಗೆ ರೆಕ್ಕೆ ಪುಕ್ಕಗಳು ಸೇರಿಕೊಂಡಿದೆ.
ಇದೇ ವೇಳೆ, ಶರದ್ ಪವಾರ್ ಅವರು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 1ರಿಂದ ಮೂರು ದಿನಗಳ ಕಾಲ ಅವರು ವಿವಿಧೆಡೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೇಳಾಪಟ್ಟಿ ನಿಗದಿಯಾಗಿದೆ. ಆದರೆ, ಪವಾರ್ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಬದಲಾವಣೆ ಆಗುತ್ತದಾ ಎಂದು ಕಾದುನೋಡಬೇಕು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ