Subramanian Swamy: ಎಲ್ಲಿಗೆ ಬಂತು ತಮಿಳುನಾಡಿನ ಬಿಜೆಪಿಯ ಸ್ಥಿತಿ?; ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ

ಸ್ವತಃ ಅರ್ಥಶಾಸ್ತ್ರಜ್ಞರೂ ಆಗಿರುವ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನೂ ನೀಡುತ್ತಲೇ ಇದ್ದಾರೆ. ಈ ನಡುವೆ ಇಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದದ ಸುದ್ದಿ ಕೇಂದ್ರದಲ್ಲಿದ್ದಾರೆ. 

ಸುಬ್ರಮಣಿಯನ್ ಸ್ವಾಮಿ.

ಸುಬ್ರಮಣಿಯನ್ ಸ್ವಾಮಿ.

  • Share this:
    ಚೆನ್ನೈ (ಮಾರ್ಚ್​ 15); ತಮಿಳುನಾಡಿನ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಕಳೆದ ಹಲವು ವರ್ಷಗಳಿಂದ ಆಡಳಿತರೂಢ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಲೇ ಇದ್ದಾರೆ. ಆರ್​ಎಸ್​ಎಸ್​ ಸಂಘ ಪರಿವಾರದ ಹಿನ್ನೆಲೆ ಇರುವ ಸುಬ್ರಮಣಿಯನ್ ಸ್ವಾಮಿ ತೀವ್ರ ಬಲಪಂಥೀಯ ಚಿಂತಕರು ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರು. ಆರಂಭದಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪರವಾಗಿದ್ದರು. ಆದರೆ, ನೋಟ್​ ಬ್ಯಾನ್, ಜಿಎಸ್​ಟಿ ಜಾರಿ ನಂತರ ಭಾರತದ ಆರ್ಥಿಕತೆ ಕುಸಿತ ಕಂಡಿತ್ತು. ಅಂದಿನಿಂದ ಆಗಿಂದಾಗ್ಗೆ ಕೇಂದ್ರ ಸರ್ಕಾರವನ್ನು ಕುಟುಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಸ್ವತಃ ಅರ್ಥಶಾಸ್ತ್ರಜ್ಞರೂ ಆಗಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನೂ ನೀಡುತ್ತಲೇ ಇದ್ದಾರೆ. ಈ ನಡುವೆ ಇಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದದ ಸುದ್ದಿ ಕೇಂದ್ರದಲ್ಲಿದ್ದಾರೆ.



    ಅಸಲಿಗೆ ತಮಿಳುನಾಡಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಚುನಾವಣಾ ಆಯೋಗ ಈಗಾಗಲೇ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಬಿಜೆಪಿ ಪಕ್ಷ ಆಡಳಿತರೂಢ ಎಐಎಡಿಎಂಕೆ (AIADMK) ಪಕ್ಷದ ಜೊತೆಗೆ ಮೈತ್ರಿ ಸಾಧಿಸಿದ್ದು, ಟಿಕೆಟ್​ ಹಂಚಿಕೆಯಲ್ಲಿ 20 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ. ತಮಿಳುನಾಡಿನಲ್ಲಿ ಕಮಲವನ್ನು ಅರಳಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ನಾಯಕರು ಬೇರೆ ಪಕ್ಷದಲ್ಲಿ ಸೀಟು ವಂಚಿತ ನಾಯಕರನ್ನು ಕರೆದು ಬಿಜೆಪಿಯಿಂದ ಟಿಕೆಟ್​ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ, ಬಿಜೆಪಿ ನಾಯಕರು ಈ ನಡೆಯನ್ನು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

    ಈ ಕುರಿತು ಟ್ವೀಟ್​ ಮೂಲಕ ವ್ಯಂಗ್ಯವಾಡಿರುವ ಸುಬ್ರಮಣಿಯನ್ ಸ್ವಾಮಿ, "ಬಿಜೆಪಿಯ ಪರಿಸ್ಥಿತಿ ಇಲ್ಲಿಗೆ ಬಂದಿದೆ: ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಯ 20 ಅಭ್ಯರ್ಥಿಗಳಲ್ಲಿ 18 ಜನರು ಇತರೆ ಪಕ್ಷಗಳಿಂದ ಬಂದವರು ಮತ್ತು ಆರ್‌ಎಸ್‌ಎಸ್‌ ಅಥವಾ ಜನಸಂಘದೊಂದಿಗೆ ಯಾವುದೇ ಸಂಪರ್ಕ ಇಲ್ಲದವರು. ಎಐಎಡಿಎಂಕೆಯು (All india anna dravida munnetra kazhagam) ಸಿಎಎ ಅನ್ನು ರದ್ದುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ" ಎಂದು ವ್ಯಂಗ್ಯವಾಡಿದ್ದಾರೆ.

    ಈ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಅರುಣ್ ಕೊಂಡಪಲ್ಲೆ ಎಂಬುವವರು "ಪಕ್ಷದಲ್ಲಿ ನೀವಿರಬೇಕಾದರೆ ಬಿಜೆಪಿಗೆ ವಿರೋಧ ಪಕ್ಷದ ಅಗತ್ಯವೇ ಇಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ "ಇಂದು ದೇಶದಲ್ಲಿ ಬೇರೆ ಆರೋಗ್ಯಕರ ವಿರೋಧ ಪಕ್ಷಗಳಿಲ್ಲ. ನಾನು ಹಿಂದುತ್ವವನ್ನು ಆಧರಿಸಿದ ಬಿಜೆಪಿಯ ನವೋದಯಕ್ಕಾಗಿ ಕೆಲಸ ಮಾಡುತ್ತೇನೆ" ಎಂದು ಉತ್ತರಿಸಿದ್ದಾರೆ.

    ಇದನ್ನೂ ಓದಿ: Yashwant Sinha: ಮೊನ್ನೆಯಷ್ಟೇ ಟಿಎಂಸಿ ಸೇರಿದ ಬಿಜೆಪಿ ನಾಯಕ ಯಶವಂತ್​ ಸಿನ್ಹಾಗೆ ಎರಡು ಉನ್ನತ ಹುದ್ದೆ

    ಇನ್ನು ಬಿಜೆಪಿ ಮೈತ್ರಿ ಪಕ್ಷವಾದ ಎಐಎಡಿಎಂಕೆ ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, "ನಾವು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಉಭಯ ಪೌರತ್ವ ಮತ್ತು ವಸತಿ ಪರವಾನಗಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಸಿಎಎಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ" ಎಂದು ಘೋಷಿಸಿದೆ. ಆದರೆ, ಇದು ಬಿಜೆಪಿ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ನಡೆಯಾಗಿದ್ದು, ಆದರೂ ಅದನ್ನು ತಮಿಳುನಾಡು ಬಿಜೆಪಿ ಈವರೆಗೆ ಪ್ರಶ್ನೆ ಮಾಡಿಲ್ಲ.

    ಈ ನಡುವೆ ಮಾಜಿ ಬಿಜೆಪಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಇತ್ತೀಚೆಗೆ ಟಿಎಂಸಿ ಸೇರ್ಪಡೆಯಾಗಿದ್ದು ಪಶ್ಚಿಮ ಬಂಗಾಳದ ಚುನಾವಣೆ ಬೆನ್ನಿಗೆ ಬಿಜೆಪಿ ಹೈಕಮಾಂಡ್​ಗೆ ದೊಡ್ಡ ಆಘಾತವಾಗಿದೆ. ಸುಬ್ರಮಣಿನ್ ಸ್ವಾಮಿ ಸಹ ಕೇಂದ್ರದ ವಿರುದ್ಧ ಮುನಿಸಿಕೊಂಡಿದ್ದು, ಅವರೂ ಸಹ ಪಕ್ಷಾಂತರ ಮಾಡಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡು ದಿನಗಳಿಂದ ಟ್ರೆಂಡ್ ಆಗುತ್ತಿದೆ. ಹೀಗಾಗಿ ಸುಬ್ರಮಣಿಯನ್ ಸ್ವಾಮಿ ಅವರ ಮುಂದಿನ ನಡೆ ಏನಾಗಲಿದೆ? ಎಂಬುದು ಸಹ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡು ಚುನಾವಣೆಯು ಏಪ್ರಿಲ್ 06 ರಂದು ನಡೆಯಲಿದ್ದು, ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.
    Published by:MAshok Kumar
    First published: