ನವ ದೆಹಲಿ; ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಖಾಸಗೀಕರಣದ ಪರವಾಗಿತ್ತು. ಖಾಸಗಿಯವರ ಪರವಾಗಿ ಅವರು ಇದೇ ಕೃಷಿ ಕಾನೂನನ್ನು ರೂಪಿಸಿದ್ದರು. ಈ ಹಿಂದೆ ಕಾಂಗ್ರೆಸ್ ರೂಪಿಸಿದ್ದ ಅದೇ ಕೃಷಿ ಕಾನೂನನ್ನು ಇಂದು ನಾವು ಜಾರಿಗೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಈ ಕಾನೂನನ್ನು ವಿರೋಧಿಸುತ್ತಿರುವುದೇಕೆ? ಇದು ಇಬ್ಬಂದಿನವಲ್ಲವೇ? ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ದೇಶದಾದ್ಯಂತ ಭಾರತ್ ಬಂದ್ ಆಚರಿಸಲಾಗುತ್ತಿದೆ. ಕಾರ್ಮಿಕ ಸಂಘಟನೆಗಳು ಹಾಗೂ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಈ ಬಂದ್‌ಗೆ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್ನವರ ಇಬ್ಬಂದಿತನ ಎಂದು ಸಚಿವ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಎಪಿಎಂಸಿ ಕಾಯ್ದೆಯು 2019ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಹಲವು ರಾಜ್ಯಗಳು ಗುತ್ತಿಗೆ ಕೃಷಿ ಪದ್ದತಿಗೆ ಅನುಮೋದನೆ ನೀಡಿವೆ. ಆದರೆ ಈಗ ಮಾತ್ರ ಅವರು ನಮ್ಮ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ" ಎಂದು ಹೇಳುವ ಮೂಲಕ ತಾವು ತಂದಿರುವ ಕಾಯ್ದೆಗಳು ಖಾಸಗೀಕರಣದ ಪರವಾಗಿವೆ ಎಂದು ಕೇಂದ್ರ ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಎಪಿಎಂಸಿ ಕಾಯ್ದೆಯನ್ನು ಮರುತರುವುದಾಗಿ ಮತ್ತು ಯಾವುದೇ ಅಡೆತಡೆಯಿಲ್ಲದ ಅಂತರ್‌ರಾಜ್ಯ ವ್ಯಾಪಾರಕ್ಕೆ ಅವಕಾಶ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಬರೆದಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆ ಆರು ತಿಂಗಳಲ್ಲಿ ಕೊನೆಗೊಳ್ಳಲಿದೆ. ಕೇಂದ್ರ ಸರ್ಕಾರವು ಯೋಜನಾ ಆಯೋಗದ ಶಿಫಾರಸ್ಸಿನ ಮೇರೆ ಅಂತರ ರಾಜ್ಯ ಕೃಷಿ ವ್ಯಾಪಾರ ಕಾಯ್ದೆಯನ್ನು ಜಾರಿಗೆ ತರಬಹುದು ಎಂದು ಯುಪಿಎ ಸರ್ಕಾರದ ಅವಧಿಯಲ್ಲಿ ಶರದ್ ಪವಾರ್ ಹೇಳಿದ್ದರು. ಈ ಸುಧಾರಣೆಗಳನ್ನು ಒಪ್ಪಿಕೊಳ್ಳದಿದ್ದರೆ ಅನುದಾನ ನೀಡಲಾಗುವುದಿಲ್ಲ ಎಂದು ಅವರು ಹೇಳುತ್ತಿದ್ದಾಗ ಎಸ್‌ಪಿ, ಟಿಡಿಪಿ, ಎಡಪಂಥೀಯರೆಲ್ಲರೂ ಮನಮೋಹನ್ ಸರ್ಕಾರವನ್ನು ಬೆಂಬಲಿಸುತ್ತಿದ್ದರು. ಇದು ಇಮ್ಮ ದ್ವಿಮುಖ ನೀತಿ. ನೀವು ಯಾವ ಮಿತಿಗೂ ಹೋಗಲು ಸಿದ್ದರಿರುವರು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರದಿಂದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಶಿರೋಮಣಿ ಅಕಾಲಿ ದಳ, ಎನ್.ಸಿ.ಪಿ, ಆರ್.ಜೆ.ಡಿ, ಡಿಎಂಕೆ, ಸಮಾಜವಾದಿ ಪಕ್ಷ, ಬಿಎಸ್‌ಪಿ ಸೇರಿ ಹಲವು ವಿರೋಧ ಪಕ್ಷಗಳು ರೈತರ ಭಾರತ್ ಬಂದ್‌ಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿವೆ. ಆದಾಗಿನಿಂದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ಮುಗಿಬಿದ್ದಿದೆ.
2022ರ ವೇಳೆಗೆ ರೈತರ ಆದಾಯ ಡಬಲ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ ಈಗ ಅದರ ಬದಲು ಮೂರು ಕಾಯ್ದೆಗಳನ್ನು ಜಾರಿಗೊಳಿಸಿದ್ದಾರೆ. ಆರಂಭದಿಂದಲು ಈ ಕಾಯ್ದೆ ರೈತರ ಒಳಿತಿಗಾಗಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಮೋದಿ ಸರ್ಕಾರ ಯಾವುದೇ ರೈತರೊಂದಿಗೆ ಚರ್ಚಿಸದೇ ಸುಗ್ರೀವಾಜ್ಞೆಗಳ ಮೂಲಕ ಈ ಕಾನೂನುಗಳನ್ನು ತಂದಿದ್ದಲ್ಲದೇ ವಿರೋಧ ಪಕ್ಷಗಳ ಮತ್ತು ರೈತರ ಭಾರೀ ವಿರೋಧದ ನಡುವೆಯೂ ಚರ್ಚೆ ನಡೆಸದೆ ಅಂಗೀಕರಿಸಿದೆ.
ಇನ್ನು ಆರಂಭದಲ್ಲಿ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ ಅವರನ್ನು ಖಾಲಿಸ್ತಾನ್‌ಗಳು, ಭಯೋತ್ಪಾದಕರು ಎಂದು ಬಿಂಬಿಸಿದ್ದಲ್ಲದೇ ಅವರ ಮೇಲೆ ಲಾಠೀ ಪ್ರಹಾರ, ಟಿಯರ್ ಗ್ಯಾಸ್, ಜಲಫಿರಂಗಿಗಳನ್ನು ಪ್ರಯೋಗ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸಿತು. ಆದರೆ ರೈತರು ಎದೆಗುಂದದೆ ದಿಟ್ಟ ಹೋರಾಟ ನಡೆಸಿದ ನಂತರ ಅನಿವಾರ್ಯವಾಗಿ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ