ಶಾಹೀನ್​ ಬಾಗ್​ನ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ನಡೆಸಬಹುದು; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

'ಶಾಹೀನ್​ ಬಾಗ್​ನಲ್ಲಿ ಹಬ್ಬಿರುವ ಪ್ರತಿಭಟನೆಯ ಬೆಂಕಿ ನಿಮ್ಮ ಮನೆಯನ್ನೂ ತಲುಪಬಹುದು. ನಿಮ್ಮ ಅಕ್ಕ-ತಂಗಿಯರು, ಮಕ್ಕಳ ಮೇಲೂ ಅವರು  ಅತ್ಯಾಚಾರ ಮಾಡಬಹುದು' ಎನ್ನುವ ಮೂಲಕ ಬಿಜೆಪಿ ಸಂಸದ ಪರ್ವೇಶ್ ವರ್ಮ ವಿವಾದಕ್ಕೀಡಾಗಿದ್ದಾರೆ.

ಬಿಜೆಪಿ ಸಂಸದ ಪರ್ವೇಶ್ ವರ್ಮ

ಬಿಜೆಪಿ ಸಂಸದ ಪರ್ವೇಶ್ ವರ್ಮ

  • Share this:
ನವದೆಹಲಿ (ಜ. 28): 'ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಜಾಗದಲ್ಲಿರುವ ಎಲ್ಲ ಮಸೀದಿಗಳನ್ನು ಧ್ವಂಸ ಮಾಡುತ್ತೇವೆ. ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಿಮ್ಮ ಮನೆಗೆ ನುಗ್ಗಿ, ಮಕ್ಕಳ ಮೇಲೆ ಅತ್ಯಾಚಾರ ನಡೆಸಬಹುದು. ಅವರನ್ನೆಲ್ಲ ಈಗಲೇ ಸಾಯಿಸಿ' ಎನ್ನುವ ಮೂಲಕ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮ ವಿವಾದಕ್ಕೀಡಾಗಿದ್ದಾರೆ.

'ಶಾಹೀನ್​ ಬಾಗ್​ನಲ್ಲಿ ಹಬ್ಬಿರುವ ಪ್ರತಿಭಟನೆಯ ಬೆಂಕಿ ನಿಮ್ಮ ಮನೆಯನ್ನೂ ತಲುಪಬಹುದು. ನಿಮ್ಮ ಅಕ್ಕ-ತಂಗಿಯರು, ಮಕ್ಕಳ ಮೇಲೂ ಅವರು  ಅತ್ಯಾಚಾರ ಮಾಡಬಹುದು. ನಿಮಗೆ ಏನು ಬೇಕೆಂದು ಆಯ್ಕೆ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಈಗ ನೀವು ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಮೋದಿ, ಅಮಿತ್ ಶಾ ಯಾರೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ' ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ  ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ, 'ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ' ಎಂದು ಘೋಷಣೆ ಕೂಗಲು ಪ್ರೇರೇಪಿಸುವ ಮೂಲಕ ಕೇಂದ್ರದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಕ್ಕೀಡಾಗಿದ್ದರು. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಹೇಳಿತ್ತು.ಅದರ ಬೆನ್ನಲ್ಲೇ ದೆಹಲಿಯ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮ, ' ದೆಹಲಿಯ ಶಾಹೀನ್ ಬಾಗ್​ನಲ್ಲಿ ಒಂದೂವರೆ ತಿಂಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಆಂದೋಲನ ನಡೆಯುತ್ತಿದೆ. ಫೆಬ್ರವರಿ 11ರಂದು ನವದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಹೀನ್​ ಬಾಗ್​ನ ಎಲ್ಲ ಪ್ರತಿಭಟನಾಕಾರರನ್ನು 1 ಗಂಟೆಯೊಳಗೆ ಓಡಿಸುತ್ತೇವೆ. ಒಬ್ಬೇ ಒಬ್ಬ ಪ್ರತಿಭಟನಾಕಾರನೂ ಶಾಹೀನ್ ಬಾಗ್​ನಲ್ಲಿ ಉಳಿದಿರುವುದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶವಿರೋಧಿಗಳಿಗೆ ಗುಂಡಿಕ್ಕಿ; ಸಚಿವ ಅನುರಾಗ್ ಠಾಕೂರ್ ರ‍್ಯಾಲಿಯಲ್ಲಿ ವಿವಾದಾತ್ಮಕ ಘೋಷಣೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿರುವ ಪರ್ವೇಶ್ ವರ್ಮ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಹೀನ್ ಬಾಗ್​ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಓಡಿಸುವುದು ಮಾತ್ರವಲ್ಲದೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ತಿಂಗಳಲ್ಲಿ ದೆಹಲಿಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರುವ ಎಲ್ಲ ಮಸೀದಿಗಳನ್ನೂ ನೆಲಸಮ ಮಾಡಲಾಗುವುದು ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿಯ ಶಾಹೀನ್ ಬಾಗ್‌ನಲ್ಲಿ ಒಂದೂವರೆ ತಿಂಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

 
First published: