Pakistan: ಪಾಕಿಸ್ತಾನಕ್ಕೆ ಇಂದು ನೂತನ ಪ್ರಧಾನಿ; ಶಹಬಾಜ್ ಷರೀಫ್‌ಗೆ ಅಧಿಕಾರ ಫಿಕ್ಸ್!

ಶಹಬಾಜ್ ಷರೀಫ್

ಶಹಬಾಜ್ ಷರೀಫ್

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 172 ಆಗಿದ್ದು 174 ಸಂಸದರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ಸುಲಭವಾಗಿ ಪ್ರಧಾನ ಮಂತ್ರಿ ಆಗಬಹುದು. ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಮುಂದೆ ಓದಿ ...
  • Share this:

ನವದೆಹಲಿ, ಏ. 11: ಪಾಕಿಸ್ತಾನದಲ್ಲಿ (Pakistan) ಹೊಸ ಸರ್ಕಾರ (New Government) ಅಸ್ಥಿತ್ವಕ್ಕೆ ಬರಲಿದೆ. ಖ್ಯಾತ ಕ್ರಿಕೆಟ್ ಆಟಗಾರರೂ (Cricketer) ಆಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಅವರನ್ನು ಪದಚ್ಯುತಿಗೊಳಿಸುವುದರಲ್ಲಿ ಕಡೆಗೂ ಯಶಸ್ವಿ ಆಗಿರುವ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ (Shahbaz Sharif) ಇಂದು ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ (New PM) ಪ್ರಮಾಣವಚನ ಸ್ವೀಕರಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಈಗಾಗಲೇ ಶಹಬಾಜ್ ಷರೀಫ್ ಅವರು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಪಿಪಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಭೇಟಿಯಾಗಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ.


ಇಂದು ಮಧ್ಯಾಹ್ನ 2:30ಕ್ಕೆ ಮತದಾನ


ಇಮ್ರಾನ್ ಖಾನ್ ಪದಚ್ಯುತಿ ನಂತರ ಜಂಟಿ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ರಾಷ್ಟ್ರೀಯ ಅಸೆಂಬ್ಲಿ ಸೆಕ್ರೆಟರಿಯೇಟ್‌ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪಿಟಿಐನ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.


ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯವು ಉಭಯ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿ ಅವುಗಳನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದೆ. ಮುಂದಿನ ಪ್ರಧಾನಿ ಆಯ್ಕೆಗೆ ಇಂದು ಮಧ್ಯಾಹ್ನ 2:30ಕ್ಕೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದೆ.


ಬಹುಮತ ಹೊಂದಿರುವ ಶಹಬಾಜ್ ಷರೀಫ್


ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 172 ಆಗಿದ್ದು 174 ಸಂಸದರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ಸುಲಭವಾಗಿ ಪ್ರಧಾನ ಮಂತ್ರಿ ಆಗಬಹುದು. ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.


ಶಹಬಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರದಲ್ಲಿ ಪಿಪಿಪಿಗೆ ಕೆಲವು ಪ್ರಮುಖ ಸಚಿವಾಲಯಗಳು ಸಿಗುವ ಹಾಗೂ ಬಿಲಾವಲ್ ಭುಟ್ಟೋ ಜರ್ದಾರಿ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Explained: ಪಾಕಿಸ್ತಾನ ಪ್ರಧಾನಿಗಳ ಇತಿಹಾಸ ಗೊತ್ತಾ? ಇಲ್ಲಿದೆ ಹತ್ತು ಹಲವು ಕುತೂಹಲಕಾರಿ ಮಾಹಿತಿ


 ಶಹಬಾಜ್ ಷರೀಫ್‌ಗೆ ಅಭಿನಂದನೆ


ಇಮ್ರಾನ್ ಖಾನ್ ಪದಚ್ಯುತಗೊಳಿಸಿದ ಕೆಲವೇ ಗಂಟೆಗಳ ನಂತರ ಇಲ್ಲಿನ ಬಿಲಾವಲ್ ಹೌಸ್‌ನಲ್ಲಿ ಸಂಭವನೀಯ ಪ್ರಧಾನಿ ಶಹಬಾಜ್ ಷರೀಫ್, ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಶಹಬಾಜ್ ಷರೀಫ್ ದಾರಿಯನ್ನು ಸುಗಮಗೊಳಿಸಿದೆ.


ಈ ಮಾತುಕತೆ ವೇಳೆ ಪ್ರತಿಪಕ್ಷದ ನಾಯಕರಾಗಿ ಶಹಬಾಜ್ ಷರೀಫ್ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು.


ಇಮ್ರಾನ್ ಖಾನ್ ಪರ ರ್‍ಯಾಲಿ


ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೂಲಕ ಮಾಜಿ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿರುವುದನ್ನು ಪ್ರತಿಭಟಿಸಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸದಸ್ಯರು ಇಸ್ಲಾಮಾಬಾದ್, ಕರಾಚಿ, ಪೇಶಾವರ, ಮಲಕಾಂಡ್, ಮುಲ್ತಾನ್ ಖನೇವಾಲ್, ಖೈಬರ್, ಜಾಂಗ್ ಮತ್ತು ಕ್ವೆಟ್ಟಾ ಮುಂತಾದ ನಗರಗಳಲ್ಲಿ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದ್ದಾರೆ. ಪ್ರತಿಭಟನಾಕಾರರು ವಿರೋಧ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಇದೆ.


ಇದನ್ನೂ ಓದಿ: Imran Khan: ಕೊನೆಗೂ 'Out' ಆದ ಇಮ್ರಾನ್‌ ಖಾನ್! 'ವಿಶ್ವಾಸ' ಕಳೆದುಕೊಂಡಿದ್ದಕ್ಕೆ ಪಾಕ್ ಪ್ರಧಾನಿ ಪದಚ್ಯುತಿ


“ಹೊಸ ಸ್ವತಂತ್ರ ಹೋರಾಟ ಆರಂಭ“


ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದಲ್ಲಿ "ಆಡಳಿತ ಬದಲಾವಣೆ ಆಗಿರುವುದು ವಿದೇಶಿ ಪಿತೂರಿ. ಇದರ ವಿರುದ್ಧ ‘ಸ್ವಾತಂತ್ರ್ಯ ಹೋರಾಟ’ದ ಆರಂಭ ಆಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ತನ್ನ ಬೆಂಬಲಿಗರನ್ನು ಹುರಿದುಂಬಿಸುವ ಪ್ರಯತ್ನದಲ್ಲಿ, "ಯಾವಾಗಲೂ ಜನರು ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

First published: