ಕಾನೂನು ಪ್ರಕಾರ ಲೈಂಗಿಕ ಕಿರುಕುಳವೆಂದರೆ ಏನೇನು? ಏನು ಹೇಳುತ್ತೆ ಕಾಯ್ದೆ?

ದೇಶಾದ್ಯಂತ ಲೈಂಗಿಕ ಕಿರುಕುಳದ ವಿರುದ್ಧ ಜನಜಾಗೃತಿ ಅಭಿಯಾನ ಸ್ವಯಂಚಾಲಿತವಾಗಿ ನಡೆಯುತ್ತಿದೆ. ಮಹಿಳೆಯರು ತಮಗಾದ ದೌರ್ಜನ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ಎಂದರೆ ಏನು ಎಂಬುದರ ವ್ಯಾಖ್ಯಾನ ಇಲ್ಲಿದೆ.

Vijayasarthy SN
Updated:October 11, 2018, 6:35 PM IST
ಕಾನೂನು ಪ್ರಕಾರ ಲೈಂಗಿಕ ಕಿರುಕುಳವೆಂದರೆ ಏನೇನು? ಏನು ಹೇಳುತ್ತೆ ಕಾಯ್ದೆ?
ಪ್ರಾತಿನಿಧಿಕ ಚಿತ್ರ
  • Share this:
- ನ್ಯೂಸ್18 ಕನ್ನಡ

ಬೆಂಗಳೂರು: ಈಗ ಭಾರತ ಸೇರಿ ವಿಶ್ವಾದ್ಯಂತ MeToo ಎಂಬ ಅಭಿಯಾನ ದೊಡ್ಡ ಸದ್ದು ಮಾಡುತ್ತಿದೆ. ಪುರುಷರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದ ಮಹಿಳೆಯರು ಮೀಟೂ ಹೆಸರಲ್ಲಿ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಕೆಲವಾರು ವರ್ಷಗಳಿಂದಲೇ ಈ ಧ್ವನಿ ಜೋರಾಗತೊಡಗಿತಾದರೂ 2017ರಿಂದ #MeToo ಎಂಬ ಹ್ಯಾಷ್​ಟ್ಯಾಗ್ ಮೂಲಕ ಒಂದು ಪಥದಲ್ಲಿ ಈ ಅಭಿಯಾನ ನಡೆಯುತ್ತಿದೆ. ತಮ್ಮ ಜೀವನದ ಯಾವುದೇ ಕಾಲಘಟ್ಟದಲ್ಲಿಯಾದರೂ ಸರಿ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಅದನ್ನು ಧೈರ್ಯವಾಗಿ ಪ್ರಸ್ತಾಪಿಸಿ ತಮ್ಮ ಬಾಳಿಗೆ ಹುಳಿ ಹಿಂಡಿದ ಕೀಚಕರನ್ನು ಬಯಲಿಗೆ ತರುವ ಈ ಅಭಿಯಾನಕ್ಕೆ ಪುರುಷರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಈ ಲೈಂಗಿಕ ಕಿರುಕುಳವನ್ನು ಕಾನೂನು ಹೇಗೆ ವ್ಯಾಖ್ಯಾನಿಸುತ್ತದೆ? ಅತ್ಯಾಚಾರ ಎಸಗುವುದು ಮಾತ್ರವೇ ಅಪರಾಧವಾ?

2013ರಲ್ಲಿ ಕೇಂದ್ರ ಸರಕಾರವು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾಯ್ದೆಯನ್ನು ಜಾರಿಗೆ ತಂದಿದೆ. ಅದಕ್ಕೂ ಮುಂಚೆ ಲೈಂಗಿಕ ಕಿರುಕುಳದ ವಿಚಾರಗಳಲ್ಲಿ ವಿಶಾಖಾ ಮಾರ್ಗದರ್ಶಿ ಸೂತ್ರವನ್ನ ಅನುಸರಿಸಲಾಗುತ್ತಿತ್ತು. ಈಗ ಹೊಸ ಕಾಯ್ದೆಯು ಲೈಂಗಿಕ ಅಪರಾಧ ತಡೆಗಟ್ಟಲು ಪ್ರಬಲ ಕಾನೂನುಗಳನ್ನು ಮುಂದಿಟ್ಟಿದೆ.

ಕಂಪನಿಗಳಿಗೆ ಕಟ್ಟುಪಾಡು:

ಕನಿಷ್ಠ 10 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ಸ್ಥಾಪನೆ ಕಡ್ಡಾಯ. ಈ ಸಮಿತಿಯಲ್ಲಿ ಕನಿಷ್ಠ ಅರ್ಧ ಪ್ರಮಾಣದಷ್ಟು ಮಹಿಳೆಯರಿರಬೇಕು. ಪಕ್ಷಪಾತಿಯಲ್ಲದ ಥರ್ಡ್ ಪಾರ್ಟಿ ಕೂಡ ಸಮಿತಿಯಲ್ಲಿರಬೇಕು.

ಸಂಸ್ಥೆಯಲ್ಲಿ ಒಬ್ಬ ಉದ್ಯೋಗಿ ದೂರು ಸಲ್ಲಿಸಿದ ನಂತರ, ಆರೋಪಿಯು ತಪ್ಪೆಸಗಿರುವುದು ಗೊತ್ತಾದರೆ ಸಮಿತಿ ಸದಸ್ಯರು ಆತನ ಮೇಲೆ ಶಿಸ್ತಿನ ಕ್ರಮ ಜರುಗಿಸಬಹುದು, ಅಥವಾ ಕ್ರಿಮಿನಲ್ ಮೊಕದ್ದಮೆ ಹಾಕಬಹುದು. ಸಂತ್ರಸ್ತೆಯು ಅಪರಾಧಿಯಿಂದ ಪರಿಹಾರ ಕೋರಬಹುದು. ಅಪರಾಧಿಯ ಸಂಬಳ ಕಡಿಮೆ ಮಾಡಿಸುವ ಮತ್ತು ವರ್ಗಾವಣೆ ಮಾಡಿಸುವ ಅವಕಾಶವೂ ಇದೆ.

ಪ್ರತೀ ಜಿಲ್ಲೆಯಲ್ಲೂ ಸ್ಥಳೀಯ ದೂರು ಸಮಿತಿ ಇರುತ್ತದೆ. ಒಂದು ವೇಳೆ ಸಂತ್ರಸ್ತೆಯು ಇರುವ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ಅಸ್ತಿತ್ವದಲ್ಲಿಲ್ಲದೇ ಇದ್ದರೆ ತನ್ನ ಜಿಲ್ಲೆಯಲ್ಲಿರುವ ಸ್ಥಳೀಯ ದೂರು ಸಮಿತಿಯ ಮೊರೆಹೋಗಬಹುದು.ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ:

* ಪುರುಷನೊಬ್ಬ ವ್ಯಕ್ತಪಡಿಸುವ ಲೈಂಗಿಕ ಇಚ್ಛೆಯನ್ನು ಮಹಿಳೆ ತಿರಸ್ಕರಿಸಿದರೂ ಆತ ಬಲವಂತ ಮಾಡತೊಡಗಿದರೆ ಅದು ಅಪರಾಧವಾಗುತ್ತದೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 354(ಎ) ಪ್ರಕಾರ ಆತ ಶಿಕ್ಷಾರ್ಹನಾಗುತ್ತಾನೆ. 3 ವರ್ಷದವರೆಗೆ ಜೈಲುವಾಸ, ಅಥವಾ ದಂಡ ಅಥವಾ ಎರಡನ್ನೂ ಆತನ ಮೇಲೆ ಹಾಕಬಹುದಾಗಿದೆ.

* ಒಬ್ಬ ಮಹಿಳೆಗೆ ದೈಹಿಕವಾಗಿ ಹಾನಿ ಮಾಡಲು, ಅಥವಾ ಆಕೆಗೆ ಕಳಂಕ ತರಲು, ಅಥವಾ ಆಕೆಯ ಆಸ್ತಿಯ ನಾಶ ಮಾಡಲು ಯಾರಾದರೂ ಯತ್ನಿಸಿದರೆ, ಆತನಿಗೆ ಐಪಿಸಿ ಸೆಕ್ಷನ್ 503ರ ಪ್ರಕಾರ ಗರಿಷ್ಠ 2 ವರ್ಷದವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಅವಕಾಶವಿದೆ.

* ಒಬ್ಬ ಮಹಿಳೆಯ ಪೂರ್ವಾನುಮತಿಯಿಲ್ಲದೇ ಆಕೆ ಖಾಸಗಿ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಸೆರೆಯುವುದು, ಫೋಟೋ ತೆಗೆಯುವುದು ಅಥವಾ ಅವುಗಳನ್ನು ಹಂಚಿಕೆ ಮಾಡುವುದು ಅಪರಾಧವೆನಿಸುತ್ತದೆ. ಐಪಿಸಿ ಸೆಕ್ಷನ್ 354(ಸಿ) ಪ್ರಕಾರ ಅಪರಾಧಿಗೆ ದಂಡ ಸಹಿತ 1-3 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ.

* ಮಹಿಳೆಗೆ ಕಳಂಕ ಹಚ್ಚುವ ಉದ್ದೇಶದಿಂದ ಫೋಟೋಗಳನ್ನ ತಿರುಚಿ ಹಂಚುವುದೂ ಐಪಿಸಿ ಸೆಕ್ಷನ್ 499 ಪ್ರಕಾರ ಅಪರಾಧ. ಇದಕ್ಕೆ 2 ವರ್ಷಗಳವರೆಗೆ ಜೈಲುಶಿಕ್ಷೆ ಇದೆ.

* ಮಹಿಳೆಗೆ ಕಿರುಕುಳ ಕೊಡುವ ಉದ್ದೇಶದಿಂದ ಆಕೆಯ ಬಗ್ಗೆ ಸಾರ್ವಜನಿಕವಾಗಿ ಮತ್ತು ಆನ್​ಲೈನ್​ನಲ್ಲಿ ಅಶ್ಲೀಲಕಾರಿ ಅಥವಾ ಅವಮಾನಕಾರಿ ವಿಷಯಗಳನ್ನ ಪೋಸ್ಟ್ ಮಾಡುವುದು ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಪ್ರಕರಣಗಳಲ್ಲಿ ಅಪರಾಧಿಗೆ ದಂಡಸಹಿತ 2 ವರ್ಷಗಳವರೆಗೆ ಜೈಲುಶಿಕ್ಷೆ ಸಿಗಬಹುದು.

* ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕ್ರಿಯೆ ಮಾಡಿದರೆ, ಅಥವಾ ಅಶ್ಲೀಲ ಪದ ಬಳಕೆ ಮಾಡಿದರೆ, ಅಥವಾ ಅಶ್ಲೀಲ ಹಾಡುಗಳನ್ನ ಹಾಡಿದರೆ ಆತನಿಗೆ ಐಪಿಸಿ ಸೆಕ್ಷನ್ 294 ಅಡಿಯಲ್ಲಿ 3 ತಿಂಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು.
First published:October 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading