ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ (National Capital) ಬುಧವಾರ ಮುಂಜಾನೆಯವರೆಗೂ ದಟ್ಟವಾದ ಮಂಜು ಆವರಿಸಿಕೊಂಡಿದ್ದು, ಈ ಕಾರಣದಿಂದ ವಿಮಾನ (Flight) ಸಂಚಾರ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ (Jammu-Kashmir) ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ಇತರೆ ಪ್ರದೇಶಗಳಲ್ಲಿ ತೀವ್ರವಾದ ಚಳಿ ಮತ್ತು ಮತ್ತು ದಟ್ಟವಾದ ಮಂಜು (dense fog ) ಆವರಿಸಿಕೊಂಡಿದೆ.
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿದ್ದು, ಮಂದ ಬಳೆಕಿನ ಪರಿಣಾಮವಾಗಿ ನವದೆಹಲಿಯಿಂದ ಹೊರಡಬೇಕಿದ್ದ ಹಲವು ವಿಮಾನಗಳು ಹಾಗೂ 26 ರೈಲುಗಳು ತಡವಾಗಿ ಸಂಚಾರ ಆರಂಭಿಸಲಿವೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮುಂದಿನ 24 ಗಂಟೆಗಳ ಕಾಲ ದೆಹಲಿ, ಪಂಜಾಬ್, ಹರಿಯಾಣ, ಚಂಢೀಗಡ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎನ್ನಲಾಗಿದ್ದು, ಇದರಿಂದ ರಸ್ತೆ ಸಂಚಾರ, ವಾಯುಯಾನ ಹಾಗೂ ರೈಲು ಸೇವೆಗಳಿಗೆ ಅಡಚಣೆ ಉಂಟಾಗುವ ಸಂಭವವಿದೆ.
ವಿಮಾನ ಸಂಚಾರದಲ್ಲಿ ವಿಳಂಬ
ದಟ್ಟ ಮಂಜು, ಮಂದ ಬೆಳಕಿನ ಕಾರಣ ಮಂಗಳವಾರವೂ ದೆಹಲಿ ವಿಮಾನ ನಿಲ್ದಾಣದಿಂದ 40 ವಿಮಾನಗಳ ಹಾರಾಟ ವಿಳಂಬವಾಗಿತ್ತು. ದೆಹಲಿ-ಕಟ್ಮಂಡು, ದೆಹಲಿ-ಜೈಪುರ್, ದೆಹಲಿ-ಶಿಮ್ಲಾ, ದೆಹಲಿ-ಡಹ್ರಾಡೂನ್, ಡೆಲ್ಲಿ-ಛಂಡೀಗಡ ವಿಮಾನಗಳು ಮಂದಬೆಳಕಿನ ಕಾರಣದಿಂದ ತಡವಾಗಿ ಸಂಚಾರ ಆರಂಭಿಸಿದ್ದವು. ಒಟ್ಟಾರೆ ಸುಮಾರು 50 ವಿಮಾನಗಳು ತಡವಾಗಿ ಸಂಚಾರ ಆರಂಭಿಸಿದರೆ, 18 ವಿಮಾನಗಳು ತಡವಾಗಿ ಆಗಮಿಸಿದ್ದವು ಎಂದು ಎಎನ್ಐ ವರದಿ ಮಾಡಿತ್ತು.
ಬೆಂಕಿ ಕಾಯಿಸಿಕೊಳ್ಳುತ್ತಿರುವ ಜನರು
ಹೊಗೆ ದೆಹಲಿಯನ್ನು ಆವರಿಸಿದ್ದರಿಂದ ಸಫ್ದರ್ಜಂಗ್ನಲ್ಲಿ ಬುಧವಾರ ಬೆಳಿಗ್ಗೆ 6.10 ಗಂಟೆಗೆ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪಾಲಂ ಪ್ರದೇಶದಲ್ಲಿ ಗೋಚರತೆ 100 ಮೀಟರ್ನಲ್ಲಿ ದಾಖಲಾಗಿದ್ದರೆ, ಸಫ್ದರ್ಜಂಗ್ನಲ್ಲಿ 200 ಮೀಟರ್ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಸೇರಿದಂತೆ ಉತ್ತರ ಭಾರತ ಹಲವು ಪ್ರಾಂತ್ಯಗಳಲ್ಲಿ ಗೋಚರತೆ ಸಮಸ್ಯೆ ಉಂಟಾಗಿದೆ. ಹಲವು ಸ್ಥಳಗಳಲ್ಲಿ ಜನರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಉಲನ್ ಬಟ್ಟೆ ಹಾಗೂ ಬೆಂಕಿ ಕಾಯಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
26 ರೈಲುಗಳ ಸಂಚಾರದಲ್ಲಿ ವಿಳಂಬ
ಗೋಚರತೆ ಸಮಸ್ಯೆ ಹಾಗೂ ಮಂದ ಬೆಳಕಿನ ಕಾರಣದಿಂದಲೇ ಉತ್ತರ ರೈಲ್ವೇ ವಲಯದ ಸುಮಾರು 26 ರೈಲಯಗಳ ಸಂಚಾರ ಕೂಡ ವಿಳಂಭವಾಗಿದೆ. ಗೋರಖ್ಪುರ-ಭಟಿಂಡಾ ಗೋರಖ್ಧಾಮ್ ಎಕ್ಸ್ಪ್ರೆಸ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್- ಅಮೃತಸರ ಎಕ್ಸ್ಪ್ರೆಸ್, ಪ್ರತಾಪ್ಗಢ-ದೆಹಲಿ ಪದ್ಮಾವತ್ ಎಕ್ಸ್ಪ್ರೆಸ್, ಮತ್ತು ಡಾ ಅಂಬೇಡ್ಕರ್ ನಗರ- ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾಲ್ವಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ 2 ಗಂಟೆ ತಡವಾಗಿ ಸಂಚಾರ ನಡೆಸಿವೆ.
ಮುಂದಿನ 4 ದಿನಗಳಲ್ಲಿ ಚಳಿಯಿಂದ ಮುಕ್ತಿ
ಚಳಿಗೆ ತತ್ತರಿಸಿರುವ ಉತ್ತರ ಭಾರತದ ಜನರಿಗೆ ಹವಾಮಾನ ಇಲಾಖೆ ಖುಷಿ ಸುದ್ದಿ ನೀಡಿದೆ. ಮುಂದಿನ 4 ದಿನಗಳಲ್ಲಿ ಈ ಭಾಗಗಗಳಲ್ಲಿ ಚಳಿ ತೀವ್ರತೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳ ನಂತರ ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ ಮತ್ತು ಉತ್ತರಪ್ರದೇಶದ ಹಲವು ಭಾಗಗಳಲ್ಲಿ ದಟ್ಟವಾದ/ಅತಿ ದಟ್ಟವಾದ ಮಂಜು ಮತ್ತು ಶೀತಗಾಳಿ ಕ್ರಮೇಣ ಕಡಿಮೆಯಾಗುತ್ತವೆ" ಎಂದು ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಹಳದಿ ಅಲರ್ಟ್
ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಮುಂದಿನ ಐದಾರು ದಿನಗಳಲ್ಲಿ ವಿಪರೀತ ಚಳಿಗಾಲದ ಅಲೆ ಇರಲಿದೆ. ಅದರಲ್ಲೂ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಿದ್ದು, ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ ಒಂದೆರಡು ದಿನಗಳವರೆಗೆ ಮುಸುಕಿನ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ