ಬೇಸಿಗೆ ಬಂದ್ರೆ ಸಾಕು ಕೇರಳದ (Kerala) ಪತ್ತನಂತಿಟ್ಟದ ಜೆಸ್ಸಿ ಸಾಬು (45) ಎಂಬುವರು ಒಬ್ಬರೇ ಕುಳಿತು ಕಣ್ಣೀರೇ ಹಾಕುತ್ತಿದ್ದರು. ಯಾಕಾದ್ರೂ ಈ ಬೇಸಿಗೆ (Summer Season) ಬರುತ್ತಪ್ಪಾ ಅಂತಾ ದೇವರನ್ನೇ ಬೈತಿದ್ರು. ಬೇಸಿಗೆ ಕಾಲ ಬರೋ ಬದಲು ನಮ್ಮ ಪ್ರಾಣವನ್ನೇ ಕಿತ್ಕೊಂಬಿಡಪ್ಪಾ ದೇವ್ರೇ ಅಂತಾ ಮನಸ್ಸಲ್ಲೇ ಗೊಣಗುತ್ತಿದ್ರು. ಅಷ್ಟಕ್ಕೂ ಜೆಸ್ಸಿ ಸಾಬು ಅವರು ಬೇಸಿಗೆ ಕಾಲ ಅಂದ್ರೆ ಭಯ ಪಡೋಕೆ ಕಾರಣ ನೀರಿನ ಸಮಸ್ಯೆ.. ಹೌದು.. ಜೆಸ್ಸಿ ಸಾಬು ಅವರು ಬೇಸಿಗೆ ಕಾಲದಲ್ಲಿ ಕುಡಿಯೋಕೆ ಒಂದು ಹನಿ (Water) ನೀರಿಲ್ಲದೆ ಕಳೆದ ಮೂರು ದಶಕಗಳಿಂದ ಸಂಕಷ್ಟ ಪಡುತ್ತಿದ್ರು.
ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ ಬದುಕಿ ಸಾಧಿಸಿ ತೋರಿಸುವ ಛಲ ಹೊಂದಿದ್ದ ಜೆಸ್ಸಿ ಸಾಬು ಅವರು ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರದಾಡುವ ಸಮಸ್ಯೆಗೆ ಏನಾದ್ರೂ ಪರಿಹಾರ ಕಂಡ್ಕೊಳ್ಳಲೇಬೇಕು ಅಂತಾ ಕನಸು ಕಂಡಿದ್ರು. ಆಗಲೇ ಅವರಿಗೆ ಹೊಳೆದದ್ದು ತನ್ನ ಮನೆಯ ಮುಂದೆ ಬಾವಿ ತೋಡುವ ಐಡಿಯಾ.. ಕಳೆದ ಮೂರು ದಶಕಗಳಿಂದ ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದ ಜೆಸ್ಸಿ ಸಾಬು ತನ್ನ ಸ್ನೇಹಿತೆಯರ ಸಹಾಯದಿಂದ ಬಾವಿ ತೋಡಿದ ಅಪರೂಪದ ಸಾಧನೆಯೇ ಈಗ ಎಲ್ಲೆಡೆ ಬಿಸಿಬಿಸಿ ಸುದ್ದಿ.
ಇದನ್ನೂ ಓದಿ: ChatGPT-4 ಯುವಜನತೆಗಾಗಿ 20 ವೃತ್ತಿ ಸಲಹೆಗಳನ್ನು ನೀಡಿದ್ದು, ಇದನ್ನು ಫಾಲೋ ಮಾಡಿದ್ರೆ ಸಕ್ಸಸ್ ಪಕ್ಕಾ ಅಂತೆ
ದುಡಿದ ಹಣ ನೀರಿಗೆ ವ್ಯಯ!
ಅಂದಹಾಗೆ ಜೆಸ್ಸಿ ಮತ್ತು ಅವರ ಪತಿ ಸಾಬು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ರು. ಅವರಿಗೆ ಮಳೆಗಾಲದಲ್ಲೇನೋ ನೀರಿನ ಸಮಸ್ಯೆ ಉಂಟಾಗುತ್ತಿರಿಲಿಲ್ಲ. ಆದ್ರೆ ಬೇಸಿಗೆ ಕಾಲ ಬಂದ್ರೆ ಪ್ರತಿದಿನ ಅಡುಗೆಗೂ, ಕುಡಿಯೋಕೂ ನೀರು ಇಲ್ಲದೆ ಪರದಾಟ ನಡೆಸ್ತಾ ಇದ್ರು. ಕೂಲಿ ಕೆಲಸದಿಂದ ಸಂಪಾದಿಸಿದ ಅಷ್ಟೋ ಇಷ್ಟೋ ಹಣ ಬಾಡಿಗೆಯ ನೀರಿಗೆ ಕೊಟ್ಟು ಖಾಲಿ ಆಗ್ತಿತ್ತು. ಆರು ಜನರ ಆ ಕುಟುಂಬಕ್ಕೆ ಪ್ರತೀ ವಾರ 2000 ಲೀಟರ್ ನೀರು ತಂದರೆ ಅದಕ್ಕೆ 750 ರೂಪಾಯಿ ಹಣ ವ್ಯಯವಾಗುತ್ತಿತ್ತು. ಇಷ್ಟೇ ಅಲ್ಲದೇ ಬಟ್ಟೆ ತೊಳೆಯೋಕೆ ಸುಮಾರು 7 ಕಿಮೀ ದೂರದಲ್ಲಿರುವ ಅತ್ತಿಕ್ಯಾಯಂನಲ್ಲಿರುವ ಪಂಪಾ ನದಿಗೆ ಹೋಗಬೇಕಾಗಿತ್ತು. ಇದಕ್ಕೆ ಆಟೋ ಚಾರ್ಜ್ ಕನಿಷ್ಟ ಅಂದರೂ 400 ರೂಪಾಯು ಖರ್ಚಾಗುತ್ತಿತ್ತು. ಹೀಗಾಗಿ ದುಡಿದ ಹಣವೆಲ್ಲಾ ಇದಕ್ಕೆ ಖಾಲಿಯಾಗುತ್ತಿತ್ತು.
ಇದಕ್ಕೆಲ್ಲ ಬಾವಿ ತೋಡೋದೆ ಪರಿಹಾರ ಅಂದುಕೊಂಡರೂ ಅದಕ್ಕೆ ಕೂಲಿ ಕಾರ್ಮಿಕರಿಗೆ 1ರಿಂದ 2 ಲಕ್ಷದ ತನಕ ಹಣ ಬೇಕಾಗಿದ್ದರಿಂದ ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ಪ್ರತೀ ವರ್ಷ ಸಪ್ಟೆಂಬರ್‌ನಿಂದ ಜೂನ್ ತಿಂಗಳವರೆಗೆ ಇದೇ ರೀತಿ ಸಂಕಷ್ಟದಲ್ಲೇ ಜೀವನ ಎದುರಿಸುತ್ತಿದ್ದರು. ಈ ಮಧ್ಯೆ ಪತಿ ಪತ್ನಿ ತಾವೇ ಮನೆಯ ಮುಂದೆ ಬಾವಿ ತೋಡಲು ನಿರ್ಧರಿಸಿದ್ದು, ಕಳೆದ ಮಾರ್ಚ್2 ರಂದು ಕೆಲಸ ಆರಂಭಿಸಿದ ಜೆಸ್ಸಿ ಸಾಬು ತಮ್ಮ ಕನಸಿನ ಗುರಿಯನ್ನು ಬೆನ್ನತ್ತಲು ಶುರು ಮಾಡಿದ್ದಾರೆ.
ಸ್ನೇಹಿತರ ಸಾಥ್‌ನಿಂದ ಮಿಷನ್ ಸಕ್ಸಸ್
ಇದನ್ನು ಗಮನಿಸಿದ ಜೆಸ್ಸಿಯ ಸ್ನೇಹಿತೆಯರಾದ ಮರಿಯಮ್ಮ ಥಾಮಸ್(52), ಲೀಲಮ್ಮ ಜೋಸ್(50), ಉಷಾಕುಮಾರಿ (51), ಲಿಲ್ಲಿ ಕೆಕೆ(51), ಕೊಚುಮೋಲ್(49), ರೆಜಿಮೋಲ್(42), ಮತ್ತು ಅನು ಥಾಮಸ್(34) ಅವರು ಜೆಸ್ಸಿ ಸಹಾಯಕ್ಕೆ ಬಂದು ಉಚಿತವಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಇದನ್ನು ಆ ತಂಡದ ಪೈಕಿಯೇ ಮಹಿಳೆಯೊಬ್ಬರು ತಮ್ಮ ಸ್ಟೇಟಸ್ ಹಾಕಿದ್ದು, ಆ ಫೋಟೋವನ್ನು ಗಮನಿಸಿದ ವಾರ್ಡ್ ಸದಸ್ಯರು ಮತ್ತು ಪಂಚಾಯತಿ ಅಧಿಕಾರಿ MGNREGA ಮೂಲಕ ಬಾವಿಯ ಕೆಲಸ ಪೂರ್ಣಗೊಳ್ಳುವವರೆಗೆ ಪ್ರತಿಯೊಬ್ಬರಿಗೂ 311 ರೂಪಾಯಿ ಸಂಬಳ ಕೊಡಲು ನಿರ್ಧರಿಸಿದ್ದಾರೆ.
ಕೊನೆಗೂ ಬರೋಬ್ಬರಿ 21 ದಿನಗಳ ನಂತರ ಬಾವಿಯಲ್ಲಿ ನೀರು ಕಾಣಿಸಿಕೊಂಡಿದ್ದು, ಆಗ ಜೆಸ್ಸಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಶಬರಿಮಲೆ ಸಮೀಪದ ನಾರಣಮ್ಮೂಜಿ ಪಂಚಾಯತ್‌ನ ತೊಂಬಿಕ್ಕನಡಂನಲ್ಲಿ ಇರುವ ತನ್ನ ಜಮೀನಿನಲ್ಲಿ ತೋಡಿದ ಬಾವಿಯಲ್ಲಿ ನೀರು ಒಸರಿದ್ದನ್ನು ಕಂಡು ಜೆಸ್ಸಿ ದಂಪತಿ ಖುಷಿಯಿಂದ ಕಣ್ಣಿರು ಹಾಕಿದ್ದಾರೆ. ಅಲ್ಲದೇ, ತಮ್ಮ ನೆರವಿಗೆ ಧಾವಿಸಿದ ಸ್ನೇಹಿತೆಯರಿಗೆ ಹೇಗೆ ಧನ್ಯವಾದ ಹೇಳಲಿ ಅಂತಾ ಗೊತ್ತಾಗುತ್ತಿಲ್ಲ ಎಂದು ಧನ್ಯತೆಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ