ಪಾಟ್ನಾ (ಜ. 29): ದೇವಸ್ಥಾನ ಲೂಟಿ (Temple Robbery) ಮಾಡಲು ಮುಂದಾದ ವ್ಯಕ್ತಿಯೊಬ್ಬ 7 ಬೀದಿ ನಾಯಿಗಳನ್ನು ವಿಷವಿಕ್ಕಿ ಕೊಂದ ಅಮಾನುಷ ಘಟನೆ ಬಿಹಾರದ ಕೈಮೂರ್ನಲ್ಲಿ (Kaimur) ನಡೆದಿದೆ. ದೇವಸ್ಥಾನ ಲೂಟಿಗೆ ಸಂಚು ಮಾಡಿದ್ದ ಖದೀಮ ತನ್ನ ಕಾರ್ಯಕ್ಕೆ ಬೀದಿ ನಾಯಿಗಳು (Street Dogs) ಅಡ್ಡ ಬರಬಾರದು ಎಂದು ಈ ಕೃತ್ಯ ಎಸಗಿದ್ದಾನೆ. ದೇವರ ದುಡ್ಡು ಕದ್ದ ಬಳಿಕ ಬೀದಿಯ ನಾಯಿಗಳು ಬೊಗಳಿದರೆ ಜನರಿಗೆ ಸಿಕ್ಕಿ ಬೀಳುತ್ತೇನೆ ಎಂದು ಅರಿತು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಖದೀಮನ ನಿಜ ಅರಿಯದ ಅಮಾಯಕ ಮೂಕ ಪ್ರಾಣಿಗಳು ಆತ ಇಟ್ಟ ವಿಷದ ಆಹಾರ (Poison) ಉಂಡು ಸಾವನ್ನಪ್ಪಿದೆ.
ಏನಿದು ಘಟನೆ?
ಬಿಹಾರದ ಕೈಮೂರ್ನ ಮೊಹಾನಿಯಾ ಪ್ರದೇಶದ ರೈಲ್ವೆ ಮಾಲ್ ಗೋಡೌನ್ ರಸ್ತೆಯ ಜಿಆರ್ಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಹೊಂಚು ಹಾಕಿದ ಖದೀಮ ದೇಗುಲದ ಬಾಗಿಲು ಮುರಿದು ಅದರಲ್ಲಿದ್ದ 15 ಸಾವಿರ ಹಣವನ್ನು ದೋಚಿದ್ದಾರೆ.
ಬೆಳಗ್ಗೆ ಪುರೋಹಿತರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ
ಬೆಳಗ್ಗೆ ಎಂದಿನಂತೆ ದೇಗುಲದ ಪುರೋಹಿತರು ಬಂದು ದೇವಾಲಯ ತೆರೆಯಲು ಮುಂದಾದಾಗ, ಬಾಗಿಲು ಒಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ದೇಗುದ ರಸ್ತೆಯಲ್ಲಿ ಓಡಾಡುತ್ತಿದ್ದ ಬೀದಿ ನಾಯಿಗಳು ಸತ್ತು ಬಿದ್ದಿರುವ ಘಟನೆ ಕಂಡು ಕಂಗಾಲಾದರು. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಗರ್ಭಿಣಿಯರು ಕೆಲಸ ಮಾಡಲು ಅನರ್ಹರು ಎಂದ SBI; Delhi ಮಹಿಳಾ ಆಯೋಗದಿಂದ ನೋಟಿಸ್
ಆರೋಪಿ ಶೋಧಕ್ಕೆ ಮುಂದಾದ ಪೊಲೀಸರು
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಗುಲದ ಕಳ್ಳತನ ಹಾಗೂ ಬೀದಿ ನಾಯಿಗಳ ಮಾರಾಣ ಹೋಮ ಎರಡು ಘಟನೆ ಖದೀಮರಿಂದಲೇ ನಡೆದಿರುವುದು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಸಂಬಂಧ ತನಿಖೆ ನಡೆಸಿದ್ದಾರೆ.
ಆರೋಪಿ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಭಂಧ ತನಿಖೆಗೆ ಮುಂದಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: NeoCoV ವೈರಸ್ ಬಗ್ಗೆ ಎಚ್ಚರಿಸಿದ ವುಹಾನ್ ವಿಜ್ಞಾನಿಗಳು; ಕೋವಿಡ್ಗಿಂತಲೂ ಮಾರಾಣಾಂತಿಕ
ದೇಗುಲದಲ್ಲಿ ಪ್ರತಿನಿತ್ಯ ಪ್ರಸಾದ ಸೇವಿಸುತ್ತಿದ್ದ ನಾಯಿಗಳು
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೇಗುಲದ ಕಾರ್ಯದರ್ಶಿ ದಿರೇಂದ್ರ ಪ್ರತಾಪ್ ಸಿಂಗ್, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ದೇಗುಲದ ಬಾಗಿಲು ಮುರಿದು ದರೋಡೆ ಮಾಡಿದ್ದಲ್ಲದೇ ಮುಗ್ದ ಜೀವಗಳನ್ನು ಬಲಿ ಪಡೆಯಲಾಗಿದೆ. ದೇಗುಲದಲ್ಲಿ ಪ್ರತಿನಿತ್ಯ ಆರತಿ ಆದ ಬಳಿಕ ಈ ಬೀದಿ ನಾಯಿಗಳು ಪ್ರಸಾದ ಪಡೆಯಲು ಬರುತ್ತಿದ್ದವು. ಇಂತಹ ಅಮಾಯಕ ಜೀವಿಗಳನ್ನು ಯಾಕೆ ಈ ರೀತಿ ಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಒಡಿಶಾದಲ್ಲೂ ನಡೆದಿತ್ತು ಇದೇ ರೀತಿ ಘಟನೆ
ಕಳೆದ ನಾಲ್ಕು ತಿಂಗಳ ಹಿಂದೆ ಕೂಡ ಒಡಿಶಾದಲ್ಲಿ ಇದೇ ರೀತಿ ಅಮಾಯಕ ನಾಯಿಗಳಿಗೆ ವಿಷ ಹಾಕಿ ಕೊಂದ ಘಟನೆ ನಡೆದಿತ್ತು. ಒಡಿಶಾದ ಕಟಕ್ ಜಿಲ್ಲೆಯಲ್ಲಿ ಮಾಂಸ ಮಾರಾಟಗಾರನೊಬ್ಬ 20 ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದ. ರಾತ್ರಿ ನಾಯಿಗಳು ಬೊಗಳುವುದರಿಂದ ನಿದ್ದೆಗೆ ಕಿರಿಕಿರಿ ಆಗುತ್ತಿತತು. ಈ ಹಿನ್ನಲೆ ಅವುಗಳಿಗೆ ವಿಷ ಹಾಕಿ ಕೊಂದಿರುವುದಾಗಿ ಆತ ತಿಳಿಸಿದ್ದ. ಸತ್ತ ನಾಯಿಗಳ ಮೃತ ದೇಹವನ್ನು ಸಮೀಪದ ಹಳ್ಳದ ಬಳಿ ಬಿಸಾಡುತ್ತಿದ್ದ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿದ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ