Afghanistan Crisis- ಕಾಬೂಲ್ ಏರ್​ಪೋರ್ಟ್​ನಲ್ಲಿ ನೂಕುನುಗ್ಗಲು; ಏಳು ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ವಿದೇಶಿಗರ ಮೇಲೆ ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಉಗ್ರರು ದಾಳಿ ಮಾಡುವ ಅಪಾಯ ಇರುವುದರಿಂದ ವಿವಿಧ ದೇಶಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಾಬೂಲ್ ವಿಮಾನ ನಿಲ್ದಾಣ

ಕಾಬೂಲ್ ವಿಮಾನ ನಿಲ್ದಾಣ

 • News18
 • Last Updated :
 • Share this:
  ಕಾಬೂಲ್: ಅಫ್ಘಾನಿಸ್ತಾನದಿಂದ ಹೊರಹೋಗಲು ಹಾತೊರೆಯುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಜನಸಂದಣಿಯೇ ಇದಕ್ಕೆ ಸಾಕ್ಷಿ. ವಿವಿಧ ದೇಶಗಳು ಅಫ್ಘಾನಿಸ್ತಾನದಿಂದ ಜನರನ್ನ ಹೊರಗೆ ಸಾಗಿಸುವ ಕೆಲಸದಲ್ಲಿ ನಿರತವಾಗಿವೆ. ಭಾರತ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಮಂದಿಯನ್ನ ಏರ್ ಲಿಫ್ಟ್ ಮಾಡಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳು ತಮ್ಮ ತಮ್ಮ ದೇಶಗಳ ನಾಗರಿಕರ ಜೊತೆಗೆ ಇತರರನ್ನೂ ಆಫ್ಘಾನ್​ನಿಂದ ಹೊರಗೆ ಕರೆದೊಯ್ಯುತ್ತಿವೆ. ಇದೇ ವೇಳೆ, ಅಫ್ಘಾನಿಸ್ತಾನದಿಂದ ಹೊರಹೋಗಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೆಚ್ಚು ಜನರು ಸೇರಿದ್ದು, ಪರಿಣಾಮವಾಗಿ ಉಂಟಾದ ಗೊಂದಲ ಮತ್ತು ಗದ್ದಲದಲ್ಲಿ ಏಳು ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಸಾವು ಹೇಗೆ ಆಯಿತು ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಬ್ರಿಟನ್ ಸರ್ಕಾರ ಈ ಮಾಹಿತಿ ಹಂಚಿಕೊಂಡಿದೆ.

  ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಸಂಪೂರ್ಣವಾಗಿ ತಾಲಿಬಾನ್ ವಶದಲ್ಲಿದೆ. ದೇಶದಿಂದ ಹೊರಹೋಗುತ್ತಿರುವ ಪ್ರತಿಯೊಬ್ಬರ ಮೇಲೂ ತಾಲಿಬಾನ್ ಹದ್ದಿನಗಣ್ಣು ನೆಟ್ಟಿದೆ. ಇನ್ನು, ಅಫ್ಘಾನಿಸ್ತಾನ್ ಘಟಕದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಕೂಡ ವಿದೇಶೀಯರನ್ನ ಟಾರ್ಗೆಟ್ ಮಾಡಿ ದಾಳಿಗಳನ್ನ ಸಂಯೋಜಿಸುವ ಸಾಧ್ಯತೆ ಇದೆ. ಹೀಗಾಗಿ, ಅಮೆರಿಕ ಮತ್ತು ಇತರ ರಾಷ್ಟ್ರಗಳು ಬಹಳ ಎಚ್ಚರಿಕೆಯ ಹೆಜ್ಜೆಗಳನ್ನ ಇಡುತ್ತಿವೆ. ಅಮೆರಿಕದ ಮಿಲಿಟರಿ ವಿಮಾನಗಳು ತಾಲಿಬಾನ್ ಫೈಟರ್ ವಿಮಾನಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಗಾಳಿಯಲ್ಲಿ ಪಲ್ಟಿ ಹೊಡೆದುಕೊಂಡು ವೇಗವಾಗಿ ಏರ್​ಪೋರ್ಟ್​ಗೆ ಬಂದಿಳಿಯುತ್ತಿವೆ. ತಾಲಿಬಾನಿಗಳ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಳ್ಳಲು ವಿಮಾನಗಳು ಫ್ಲೇರ್ ತಂತ್ರವನ್ನ ಅನುಸರಿಸುತ್ತಿವೆ. ಕ್ಷಿಪಣಿಗಳು ಶಾಖವನ್ನ ಬೆನ್ನತ್ತಿ ಶತ್ರು ವಿಮಾನಗಳನ್ನ ಹೊಡೆದುರುಳಿಸುತ್ತವೆ. ಹೀಗಾಗಿ, ವಿಮಾನಗಳು ಕ್ಷಿಪಣಿಯ ದಾರಿ ತಪ್ಪಿಸಲು ಬೆಂಕಿಯನ್ನ ದೂರ ಚೆಲ್ಲುತ್ತಾ ಹೋಗುತ್ತವೆ. ಇದೇ ಫ್ಲೇರ್ ಟೆಕ್ನಿಕ್. ಕಾಬೂಲ್​ನಲ್ಲಿ ಅಮೆರಿಕದ ವಿಮಾನಗಳು ಇದೇ ತಂತ್ರ ಅನುಸರಿಸಿ ಏರ್​ ಪೋರ್ಟ್​ಗೆ ಬಂದಿಳಿಯುತ್ತಿವೆ.

  ಇದನ್ನೂ ಓದಿ: Afghanistan Crisis: ಅತಿದೊಡ್ಡ ಯುದ್ಧತಂತ್ರದ ತಪ್ಪು ಮಾಡಿದ ಜೋ ಬಿಡೆನ್: ಟ್ರಂಪ್

  ಭಾರತದ ಮಿಲಿಟರಿ ವಿಮಾನಗಳು 380 ಮಂದಿಯನ್ನ ಅಫ್ಘಾನಿಸ್ತಾನದಿಂದ ತನ್ನ ದೇಶಕ್ಕೆ ಸುರಕ್ಷಿತವಾಗಿ ಸಾಗಿಸಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ನೇರವಾಗಿ ದೆಹಲಿಗೆ ಕೆಲವರನ್ನ ಸಾಗಿಸಲಾಗಿದೆ. ಕತಾರ್ ರಾಜಧಾನಿ ದೋಹಾ ಮೂಲಕ ಇನ್ನೂ ಹಲವರನ್ನ ಮತ್ತು ತಜಿಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ಇನ್ನೂ ಕೆಲವರನ್ನ ಭಾರತಕ್ಕೆ ಕರೆತರಲಾಗಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವ ಪ್ರತಿಯೊಬ್ಬರಿಗೂ ಉಚಿತವಾಗಿ ಪೋಲಿಯೋ ಲಸಿಕೆ ಹಾಕಲು ಭಾರತ ನಿರ್ಧರಿಸಿದೆ. ವೈಲ್ಡ್ ಪೋಲಿಯೋ ವೈರಸ್ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಿದೆ. ಹಾಗೆಯೇ, ಅಲ್ಲಿಂದ ಬಂದವರೆಲ್ಲರಿಗೂ ಕೋವಿಡ್ ಪರೀಕ್ಷೆಗಳನ್ನ ನಡೆಸಿ ಅದರಲ್ಲಿ ನೆಗಟಿವ್ ಬಂದವರನ್ನ ಅವರ ಗಮ್ಯ ಸ್ಥಳಗಳಿಗೆ ಕಳುಹಿಸಲು ನಿಶ್ಚಯಿಸಲಾಗಿದೆ.

  ಇದೇ ವೇಳೆ, ತಾಲಿಬಾನ್ ಹಿಡಿತದಿಂದ ಪಾರಾಗಲು ಬಯಸುವ ಅಫ್ಘನ್ ನಾಗರಿಕರಿಗೆ ಭಾರತ ಸೇರಿದಂತೆ ಹಲವು ದೇಶಗಳು ಬಾಗಿಲು ತೆರೆದಿವೆ. ಸಂತ್ರಸ್ತ ಆಫ್ಘನ್ನರು ಸಾಮಾನ್ಯವಾಗಿ ನೆರೆಯ ಪಾಕಿಸ್ತಾನಕ್ಕೆ ದೌಡಾಯಿಸುತ್ತಾರೆ. ಈಗಲೂ ಬಹಳಷ್ಟು ಸಂಖ್ಯೆಯಯಲ್ಲಿ ಪಾಕಿಸ್ತಾನಕ್ಕೆ ಗುಳೆ ಹೋಗುತ್ತಿದ್ಧಾರೆ. ತಾಲಿಬಾನ್ ಅಧಿಕಾರಕ್ಕೆ ಬಂದರೆ ಗಡಿ ಬಂದ್ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ ಇನ್ನೂ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ.

  ಕೆನಡಾ ಸಾಕಷ್ಟು ಸಂಖ್ಯೆಯಲ್ಲಿ ಅಫ್ಘಾನ್ ವಲಸಿಗರನ್ನ ಸ್ವಾಗತಿಸಲು ಅಣಿಯಾಗಿದೆ. ಈಗಾಗಲೇ 20 ಸಾವಿರ ಅಫ್ಘನ್ನರು ಕೆನಡಾಗೆ ಧಾವಿಸಿದ್ದಾರೆ. ಇವರಿಗೆ ಬದುಕಲು ಕೆನಡಾ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಇನ್ನೂ ಹೆಚ್ಚು ಮಂದಿ ಬಂದರೂ ವ್ಯವಸ್ಥೆ ಮಾಡಿಕೊಡಲು ಕೆನಡಾ ಸಿದ್ಧವಿದೆ.

  ಅಮೆರಿಕ, ಬ್ರಿಟನ್, ಭಾರತ, ಇರಾನ್, ಉಜ್ಬೆಕಿಸ್ತಾನ್, ಉತ್ತರ ಮೆಸಿಡೋನಿಯಾ, ಉಗಾಂಡ, ಆಲ್ಬೇನಿಯಾ ಮತ್ತು ಟರ್ಕಿ ದೇಶಗಳೂ ಅಫ್ಘಾನ್ ವಲಸಿಗರಿಗೆ ಆಶ್ರಯ ನೀಡಲು ಸಿದ್ಧವಿವೆ.
  Published by:Vijayasarthy SN
  First published: