ಮುಂಬೈ (ಡಿಸೆಂಬರ್ 04); ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಹೊರತಾಗಿಯೂ ಅಧಿಕಾರದ ಗದ್ದುಗೆಗೆ ಏರಲಾಗದೆ ಮುಖಭಂಗ ಅನುಭವಿಸಿದ್ದ ಬಿಜೆಪಿಗೆ ಇದೀಗ ಮತ್ತೊಂದು ಮುಖಭಂಗ ಎದುರಾಗಿದೆ. ಇಂದು ಮಹಾರಾಷ್ಟ್ರದ 6 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 6 ಸ್ಥಾನಗಳ ಪೈಕಿ 4ರಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮಹಾಮೈತ್ರಿ ಕೂಟ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಅಲ್ಲದೆ, ಸೋಲಿನ ನಂತರ ಮಾತನಾಡಿರುವ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸಹ "ನಾವು ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟವನ್ನು ಲಘುವಾಗಿ ಪರಿಗಣಿಸಿದೆವು" ಎಂದು ಹೇಳುವ ಮೂಲಕ ಸೋಲೊಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಒಕ್ಕೂಟ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಉಳಿದ ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಪಡೆದುಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಮತದಾನ ನಡೆದಿತ್ತು.
ಆಡಳಿತರೂಢ ಮಹಾವಿಕಾಸ್ ಅಘಾಡಿ ಮೈತ್ರಿ ನಾಲ್ಕು ಸ್ಥಾನ ಗಳಿಸಿದ್ದರೂ ಕೂಡ, ಶಿವಸೇನೆ ಒಂದೇ ಒಂದು ಸ್ಥಾನವನ್ನು ಗೆದಿಲ್ಲ. ಶಿವಸೇನೆಯ ಏಕೈಕ ಅಭ್ಯರ್ಥಿ ಅಮರಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ ಎಂಬುದು ಉಲ್ಲೇಖಾರ್ಹ. ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲಿಯೂ ಗೆಲುವು ಸಾಧಿಸಿವೆ.
ಬಿಜೆಪಿ ತನ್ನ ಭದ್ರಕೋಟೆಗಳೆಂದು ಗ್ರಹಿಸಿದ್ದ ಪದವೀಧರ ಕ್ಷೇತ್ರಗಳಲ್ಲಿ ಕಮಲ ಸೋತಿದೆ. ಬಿಜೆಪಿಯ ದೊಡ್ಡ ನಷ್ಟವೆಂದರೆ ಪಕ್ಷದ ಭದ್ರಕೋಟೆಯಾದ ನಾಗ್ಪುರದಲ್ಲೂ ಸೋಲನುಭವಿಸಿರುವುದು. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತಂದೆ ಗಂಗಾಧರ್ ರಾವ್ ಫಡ್ನವೀಸ್ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1989 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರವನ್ನು ಗೆದ್ದಿದ್ದ ಗಡ್ಕರಿ, 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಇಲ್ಲಿಂದಲೇ ನಾಲ್ಕು ಬಾರಿ ವಿಜಯ ಸಾಧಿಸಿದ್ದರು. ಆ ಗೆಲುವೇ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಬಿಜೆಪಿ ನಾಯಕರು ಪುಣೆಯಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಆದರೂ, ಅಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಗೆದ್ದಿದ್ದಾರೆ.
The results of Maharashtra Legislative Council polls are not as per our expectations. We were expecting more seats but won only one. We miscalculated the combined power of the three parties (Maha Vikas Aghadi): Devendra Fadnavis, BJP leader & former Maharashtra CM pic.twitter.com/KtzuS7OwQn
— ANI (@ANI) December 4, 2020
ಇದನ್ನೂ ಓದಿ : Farmers Protest: ಡಿ.8ರ ಮಂಗಳವಾರ ಭಾರತ್ ಬಂದ್ಗೆ ಕರೆ ನೀಡಿದ ರೈತರು
ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಪಕ್ಷಗಳ ಮಹಾ ವಿಕಾಸ್ ಅಘಾಡಿಯನ್ನು ಬಿಜೆಪಿ ಅಸ್ಥಿರ ಘಟಕವೆಂದು ಪದೇ ಪದೇ ಅಪಹಾಸ್ಯ ಮಾಡಿತ್ತು. ಈ ಒಕ್ಕೂಟಕ್ಕೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದ್ದು, ಇದರಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವು ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ