ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ ServeInMyLanguage; ಹಿಂದಿ ದಿವಸ್‌ಗೆ ವಿರೋಧ, ಸರ್ಕಾರದ ಸೇವೆ ಕನ್ನಡದಲ್ಲೇ ಬೇಕೆಂದು ಆಗ್ರಹ

ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದಿ ದಿವಸ್ ವಿರುದ್ಧ ಅಪಸ್ವರಗಳು ಹಾಗೂ ಭಾರೀ ವಿರೋಧಗಳು ಕೇಳಿ ಬರುತ್ತಿವೆ. ಅಲ್ಲದೆ, ಹಲವಾರು ಹೋರಾಟಗಾರರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷಣೆಗಳಿಗೆ ಭಾರೀ ಜನಪ್ರಿಯತೆಯನ್ನೂ ತಂದುಕೊಡುವ ಮೂಲಕ ವಿಶೇಷವಾದ ಹೋರಾಟದ ಕಣವೊಂದನ್ನು ರೂಪಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಹಿಂದಿ ದಿವಸ್‌ ಹತ್ತಿರವಾಗುತ್ತಿದ್ದಂತೆ "ಹಿಂದಿ ಗೊತ್ತಿಲ್ಲ ಹೋಗೋ" ಮತ್ತು "ಕೇಂದ್ರ ಸರ್ಕಾರದ ಸೇವೆಗಳು ಕನ್ನಡದಲ್ಲೇ ಸಿಗಬೇಕು" ಎಂದು ಒತ್ತಾಯಿಸುವ #ServeInMyLanguage ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಇಂದು ಭಾರೀ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 14ಅನ್ನು ಹಿಂದಿ ದಿವಸ್ ಎಂದು ಕರೆಯಲಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರವೇ ಹಿಂದಿ ದಿವಸ್‌ಗೆ ಸಂಬಂಧಿಸಿದಂತೆ ಅನೇಕ ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸುತ್ತದೆ. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದಿ ದಿವಸ್ ವಿರುದ್ಧ ಅಪಸ್ವರಗಳು ಹಾಗೂ ಭಾರೀ ವಿರೋಧಗಳು ಕೇಳಿ ಬರುತ್ತಿವೆ. ಅಲ್ಲದೆ, ಹಲವಾರು ಹೋರಾಟಗಾರರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷಣೆಗಳಿಗೆ ಭಾರೀ ಜನಪ್ರಿಯತೆಯನ್ನೂ ತಂದುಕೊಡುವ ಮೂಲಕ ವಿಶೇಷವಾದ ಹೋರಾಟದ ಕಣವೊಂದನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕನ್ನಡಿಗರಲ್ಲಿ ಜನಾಭಿಪ್ರಾಯ ಮೂಡಿದ್ದು ಪರಿಣಾಮ ಇಂದು #ServeInMyLanguage ಎಂಬ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡುವ ಮೂಲಕ ಕನ್ನಡಿಗರು ಒಗ್ಗಟ್ಟಾಗಿ ಹಿಂದಿ ದಿವಸ್ ಅನ್ನು ವಿರೋಧಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತ ಮಾಹಿತಿಯನ್ನು ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅರುಣ್ ಜಾವಗಲ್ ಎಂಬವರು, “ಕನ್ನಡದಲ್ಲಿ ಕೇಂದ್ರ ಸರಕಾರದ ಸೇವೆಗಳು ಸಿಗಬೇಕೆಂದು ಒತ್ತಾಯಿಸುವ #ServeInMyLanguage ಕಳೆದ 2-3 ಗಂಟೆಯಿಂದ trendಆಗುತ್ತಿದೆ.” ಎಂದು ತಿಳಿಸಿದ್ದಾರೆ.“ಮತ್ತೊಂದು ಟ್ವೀಟ್‌ನಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರ ಉದ್ಯೋಗ/ತೆರಿಗೆ ಹಂಚಿಕೆ/ಭಾಷಾ ಹೇರಿಕೆ ಸಮಸ್ಯೆಗಳು ರಾಜಕೀಯ ಸಮಸ್ಯೆಗಳಾಗಬೇಕು, ಚುನಾವಣೆಯ ವಿಚಾರವಾಗಬೇಕು, ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಮಾತನಾಡುವಂತೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.ಇನ್ನೂ ಖ್ಯಾತ ಚಿತ್ರ ನಟ ಚೇತನ್ ಸಹ ಹಿಂದಿ ದಿವಸ್ ಹತ್ತಿರಾಗುತ್ತಿದ್ದಂತೆ “ಹಿಂದಿ ಗೊತ್ತಿಲ್ಲ ಹೋಗೋ. ನಾವು ಕನ್ನಡಿಗರು ನಾವು ದ್ರಾವಿಡರು” ಎಂದು ಟೀ ಶರ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿಂದಿ ದಿವಸ್ ಆಚರಣೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

chetan
ಚಿತ್ರನಟ ಚೇತನ್‌.


ಇತ್ತೀಚೆಗೆ ತಮಿಳುನಾಡಿನ 2003ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ಬಿ. ಬಾಲಮುರುಗನ್ ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ ಆಗಸ್ಟ್ 09 ರಂದು ಬರೆದಿರುವ ಪತ್ರದಲ್ಲಿ, "ಹಿಂದಿ ಸೆಲ್‌ನಲ್ಲಿ ಕೆಲಸದ ಅಧಿಕೃತ ಸಂವಹನ ಭಾಷೆ ಹಿಂದಿ. ಅಧಿಕೃತವಾಗಿ ಎಲ್ಲಾ ಅಧಿಕಾರಿಗಳು ಹಿಂದಿ ಭಾಷೆಯನ್ನೇ ಬಳಸಬೇಕು ಮತ್ತು ಈ ಭಾಷೆಯಲ್ಲೇ ಮೇಲ್ವಿಚಾರಣೆ ಮಾಡಬೇಕು. ಆದರೆ, ನನಗೆ ಹಿಂದಿಯಲ್ಲಿ ABCD ಯೂ ಗೊತ್ತಿಲ್ಲ. ಹಾಗಾಗಿ ಹಿಂದಿ ಕೋಶದಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ.

ನನ್ನನ್ನು ಹಿಂದಿ ಕೋಶಕ್ಕೆ ನೇಮಕ ಮಾಡುವುದು ನನ್ನ ಮೇಲಿನ ಹಿಂದಿ ಹೇರಿಕೆಯಲ್ಲದೇ ಮತ್ತೇನೂ ಅಲ್ಲ. ಇದು ಹೇಗಿದೆ ಎಂದರೆ ಬ್ರಾಹ್ಮಣನಿಗೆ ಬೈಬಲ್ ಅಥವಾ ಕುರಾನ್ ಕೊಟ್ಟು, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ನಿರ್ದೇಶಿಸುವಂತಿದೆ" ಎಂದು ಅಭಿಪ್ರಾಯಪಟ್ಟಿದ್ದರು. ಈ ಪತ್ರ ರಾಷ್ಟ್ರ ಮಟ್ಟದಲ್ಲಿ ಇದೀಗ ದೊಡ್ಡ ಮಟ್ಟದ ಚರ್ಚೆಯೊಂದನ್ನು ಹುಟ್ಟುಹಾಕಿರುವ ಬೆನ್ನಿಗೆ ಇಂದು ಕನ್ನಡಿಗರು ಕ್ರಿಯೇಟ್ ಮಾಡಿರುವ #ServeInMyLanguage ಹ್ಯಾಷ್ ಟ್ಯಾಗ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
Published by:MAshok Kumar
First published: