ಇಯು (EU) ವೀಸಾ ನೀತಿ ಬದಲಾವಣೆಗಳು ಮತ್ತು ಅಕ್ರಮ ವಲಸಿಗರನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ನಡುವೆಯೇ, ಮಧ್ಯ ಯುರೋಪಿಯನ್ ರಾಷ್ಟ್ರವೊಂದು ಭಾರತದ ನಾಗರಿಕರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುವುದಿಲ್ಲ ಎಂದು ಘೋಷಿಸಿದೆ. ಹೌದು, ಭಾರತೀಯರು ಯಾರಾದರೂ ಆಗ್ನೇಯ-ಮಧ್ಯ ಯುರೋಪ್ಗೆ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ ಅಲ್ಲಿನ ವೀಸಾ ಬದಲಾವಣೆಗಳ ಬಗ್ಗೆ ತಿಳ್ಕೋಬಿಡಿ. ಯುರೋಪ್ ಪ್ರವಾಸ ಹೋಗುವವ ಭಾರತೀಯ ಪ್ರಜೆಗಳಿಗೆ ಅಲ್ಲಿನ ದೇಶವೊಂದು ಕಹಿಸುದ್ದಿ ನೀಡಿದ್ದು, ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ಪ್ರವೇಶವನ್ನು ರದ್ದುಗೊಳಿಸಿದೆ.
ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣ ರದ್ದುಗೊಳಿಸಿದ ಸೆರ್ಬಿಯಾ
ಆಗ್ನೇಯ-ಮಧ್ಯ ಯುರೋಪ್ ದೇಶವಾದ ಸರ್ಬಿಯಾದಲ್ಲಿ ಭಾರತೀಯರಿಗಾಗಿ ಇತ್ತೀಚೆಗೆ ವೀಸಾ-ಸಂಬಂಧಿತ ಬದಲಾವಣೆಯನ್ನು ಜಾರಿಗೆ ತಂದಿದೆ. ಹೊಸ ವೀಸಾ ಸಂಬಂಧಿತ ನಿಯಮದ ಪ್ರಕಾರ ಜನವರಿ 1 ರಿಂದ ಎಲ್ಲಾ ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ಪ್ರವೇಶವನ್ನು ರದ್ದುಗೊಳಿಸುವುದಾಗಿ ದೇಶವು ಘೋಷಿಸಿದೆ. ಅಂದರೆ ಇನ್ನುಮುಂದೆ ಭಾರತೀಯರು ವೀಸಾ ಇಲ್ಲದೆ ಸರ್ಬಿಯಾ ದೇಶಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ
ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಭೂತಾನ್, ಡೊಮಿನಿಕಾ, ಗ್ರೆನೆಡಾ, ಹೈತಿ, ಹಾಂಗ್ ಕಾಂಗ್ ಎಸ್ಎಆರ್, ಸೆನೆಗಲ್, ಸೇಂಟ್ ವಿನ್ಸೆಂಟ್ ಹಾಗೂ ಗ್ರೆನೆಡೀನ್ಸ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ ಸೇರಿ ಕೆಲ ದೇಶಗಳ ಜೊತೆ ಸರ್ಬಿಯಾ ಕೂಡ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಈಗ ನಿಯಮ ಬದಲಾವಣೆಯಾಗಿದ್ದು, ಜನವರಿ 1 ರಿಂದ ಎಲ್ಲಾ ಭಾರತೀಯ ಪ್ರಜೆಗಳಿಗೆ ವೀಸಾ ಮುಕ್ತ ಪ್ರವೇಶವನ್ನು ರದ್ದುಗೊಳಿಸುವುದಾಗಿ ಸರ್ಬಿಯಾ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಸರ್ಬಿಯಾಕ್ಕೆ ಬರಲು ಕಡ್ಡಾಯವಾಗಿ ವೀಸಾ ಪಡೆಯಬೇಕು
ಜನವರಿ 1 ರಂದು ಅಥವಾ ನಂತರ ಸರ್ಬಿಯಾಕ್ಕೆ ಭೇಟಿ ನೀಡಲು ಬಯಸುವ ಭಾರತೀಯರು ಹೊಸ ದೆಹಲಿಯಲ್ಲಿರುವ ಸರ್ಬಿಯಾ ರಾಯಭಾರ ಕಚೇರಿಯಲ್ಲಿ ಅಥವಾ ಅವರು ವಾಸಿಸುವ ದೇಶದಲ್ಲಿ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ, ಸರ್ಬಿಯಾದ ಬೆಲ್ಗ್ರೇಡ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಜನವರಿ 1, 2023 ರಿಂದ ಸರ್ಬಿಯಾಕ್ಕೆ ಭೇಟಿ ನೀಡುವ ಎಲ್ಲಾ ಭಾರತೀಯ ಪ್ರಯಾಣಿಕರು ದೇಶವನ್ನು ಪ್ರವೇಶಿಸಲು ವೀಸಾವನ್ನು ಹೊಂದಿರಬೇಕು ಎಂದು ಪ್ರಯಾಣ ಸಲಹೆಯನ್ನು ನೀಡಿದೆ.
ಯಾರಿಗೆ ಈ ನಿಯಮ ಅನ್ವಯವಾಗುವುದಿಲ್ಲ?
ಆದರೂ ಹೊಸ ಬದಲಾವಣೆಯು ಷೆಂಗೆನ್, ಯುಕೆ ಮತ್ತು ಯುಎಸ್ ವೀಸಾ ಅಥವಾ ಈ ದೇಶಗಳ ನಿವಾಸ ಪರವಾನಗಿಯನ್ನು ಹೊಂದಿರುವ ಭಾರತೀಯರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ: Pakistan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಈಗ ಯಾರ ಪತ್ನಿ ಗೊತ್ತಾ?
ಈ ರಾಷ್ಟ್ರಗಳ ವೀಸಾ ಅಥವಾ ಪರವಾನಗಿ ಹೊಂದಿರುವ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಜನವರಿ 1 ರಂದು ಅಥವಾ ನಂತರ 90 ದಿನಗಳವರೆಗೆ ಸೆರ್ಬಿಯಾಕ್ಕೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ದೇಶಗಳಿಗೂ ವೀಸಾ ಮುಕ್ತ ಪ್ರವೇಶ ರದ್ದು ಮಾಡಿದ ಸರ್ಬಿಯಾ
ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ರದ್ದುಗೊಳಿಸುವ ಮುನ್ನ ಸರ್ಬಿಯಾ ದೇಶ ನವೆಂಬರ್ 2̧0 2022 ರಿಂದ, ಗಿನಿಯಾ-ಬಿಸ್ಸೌ (ಪಶ್ಚಿಮ ಆಫ್ರಿಕಾದಲ್ಲಿ), ಟುನೀಶಿಯಾ (ಉತ್ತರ ಆಫ್ರಿಕಾದಲ್ಲಿ), ಮತ್ತು ಬುರುಂಡಿ (ಪೂರ್ವ ಆಫ್ರಿಕಾದಲ್ಲಿ) ಪ್ರಜೆಗಳಿಗೆ ವೀಸಾ-ಮುಕ್ತ ಪ್ರವೇಶ ಸೇವೆಯನ್ನು ಕೊನೆಗೊಳಿಸಿದೆ.
ಇದನ್ನೂ ಓದಿ: Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ಸರ್ಬಿಯಾ ದೇಶದ ಪರಿಚಯ
ಸರ್ಬಿಯಾ ಗಣರಾಜ್ಯ ಮಧ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಕನ್ ಪ್ರದೇಶದಲ್ಲಿದೆ. ಸೆರ್ಬಿಯಾದ ಉತ್ತರದಲ್ಲಿ ಹಂಗೇರಿ, ಪೂರ್ವದಲ್ಲಿ ರೊಮೇನಿಯ ಮತ್ತು ಬಲ್ಗೇರಿಯ, ದಕ್ಷಿಣದಲ್ಲಿ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ, ಪಶ್ಚಿಮದಲ್ಲಿ ಕ್ರೊಯೇಶಿಯ, ಮಾಂಟೆನೆಗ್ರೊ ಹಾಗೂ ಬಾಸ್ನಿಯ ಮತ್ತು ಹೆರ್ಜೆಗೊವಿನ ದೇಶಗಳಿವೆ. ಸೆರ್ಬಿಯಾ ದೇಶದಲ್ಲಿ ಹಲವಾರು ಆಕರ್ಷಣೀಯ ಸ್ಥಳಗಳಿದ್ದು, ಹಲವರು ಇಲ್ಲಿಗೆ ಭೇಟಿ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ