ಮುಂಬೈ(ಮಾ. 06): ಯೆಸ್ ಬ್ಯಾಂಕ್ ಹಣಕಾಸು ದುಸ್ಥಿತಿಗೆ ಬಹಿರಂಗವಾಗುತ್ತಿದ್ದಂತೆಯೇ ಭಾರತದ ಷೇರುಪೇಟೆ ಜರ್ಝರಿತಗೊಂಡಿದೆ. ಮೊದಲೇ ಹಿನ್ನಡೆಯಲ್ಲಿರುವ ಭಾರತದ ಆರ್ಥಿಕತೆಯ ಮೇಲೆ ಇದು ಇನ್ನೊಂದು ಪೆಟ್ಟು ಕೊಟ್ಟಿದೆ. ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಎರಡೂ ಕೂಡ ಭಾರೀ ನಷ್ಟ ಮಾಡಿಕೊಂಡಿವೆ. ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,400 ಪಾಯಿಂಟ್ ಕಳೆದುಕೊಂಡಿದೆ. ನಿಫ್ಟಿ ಕೂಡ 11 ಸಾವಿರ ಅಂಕಗಳ ಗಡಿಯೊಳಗೆ ಇಳಿದಿದೆ. ಯೆಸ್ ಬ್ಯಾಂಕ್ ಷೇರುಗಳು ಅಕ್ಷರಶಃ ಪ್ರಪಾತಕ್ಕೆ ಜಿಗಿದಿವೆ. ಶೇ. 25ರಷ್ಟು ಮೌಲ್ಯ ಕುಸಿತ ಕಂಡಿವೆ. ಇದರ ಜೊತೆಗೆ ಡಾಲರ್ ಎದುರು ರೂಪಾಯಿ ದರ 53 ಪೈಸೆ ಹೆಚ್ಚಾಗಿದೆ. ಪ್ರತೀ ಡಾಲರ್ಗೆ ಈಗ 73.86 ರೂಪಾಯಿ ದರ ಇದೆ.
ಸೆನ್ಸೆಕ್ಸ್ ಸದ್ಯಕ್ಕೆ 37,418.28 ಅಂಕಗಳ ಮಟ್ಟಕ್ಕೆ ಬಂದು ನಿಂತಿದೆ. ನಿಪ್ಟಿ 10,950.70 ಮಟ್ಟಕ್ಕೆ ಇಳಿದಿದೆ. ಯೆಸ್ ಬ್ಯಾಂಕ್ ಜೊತೆಗೆ ಇನ್ನೂ ಕೆಲ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಇಂಡಸ್ಲ್ಯಾಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕುಗಳು ಹೆಚ್ಚು ನಷ್ಟ ಮಾಡಿಕೊಂಡಿವೆ. ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗಳ ಷೇರುಗಳ ಬೆಲೆಯೂ ಕುಸಿದಿದೆ.
ಇದೇ ವೇಳೆ, ಕೊರೊನಾ ವೈರಸ್ ಭೀತಿಯಲ್ಲಿ ಜಾಗತಿಕವಾಗಿಯೂ ಷೇರುಪೇಟೆ ಕುಸಿತ ಮುಂದುವರಿದಿವೆ. ವೈರಸ್ ಸೋಂಕು ಸುಲಭಕ್ಕೆ ನಿಗ್ರಹಿಸಲು ಅಸಾಧ್ಯವೆಂಬುದು ಸ್ಪಷ್ಟವಾಗುತ್ತಿರುವಂತೆಯೇ ವಿಶ್ವದೆಲ್ಲೆಡೆ ಷೇರು ಪೇಟೆ ಕುಸಿತದ ವೇಗ ಹೆಚ್ಚಾಗುತ್ತಿದೆ. ಮುಂಬರುವ ದಿನಗಲ್ಲಿ ಇದು ಇನ್ನೂ ಆತಂಕಕಾರಿ ಸ್ಥಿತಿಗೆ ದೂಡುವ ಸಾಧ್ಯತೆ ಇದೆ.
ಇದನ್ನೂ ಓದಿ: YES Bank: ಕೆಟ್ಟ ಸಾಲದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯೆಸ್ ಬ್ಯಾಂಕ್ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಆರ್ಬಿಐ
ಯೆಸ್ ಬ್ಯಾಂಕ್ ಸಂಕಷ್ಟ:
ಕೆಟ್ಟ ಸಾಲಗಳಿಂದಾಗಿ (ಎನ್ಪಿಎ) ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ಬಿಐ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮತ್ತು ಬ್ಯಾಂಕ್ ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರದವರೆಗೆ ಮಾತ್ರ ಹಣ ಹಿಂಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ.
ಗುರುವಾರ 'ನಿಷೇಧದ ಆದೇಶ' ಹೊರಡಿಸಿರುವ ಆರ್ಬಿಐ ತೊಂದರೆಗೆ ಒಳಗಾಗಿರುವ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಯೆಸ್ ಬ್ಯಾಂಕ್ನ ಎಲ್ಲಾ ಕಾರ್ಯ ಚಟುವಟಿಕೆಗಳ ಪ್ರಾರಂಭ ಅಥವಾ ಮುಂದುವರಿಕೆ ಮೇಲೆ ತಡೆಯಾಜ್ಞೆ ನೀಡಿದೆ. ಈ ಸಂಬಂಧ ನಿನ್ನೆ ಗುರುವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿರುವ ಆರ್ಬಿಐ, ಯೆಸ್ ಬ್ಯಾಂಕ್ ಮಂಡಳಿಯನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ವಶಕ್ಕೆ ಪಡೆಯಲಾಗಿದೆ. ಮತ್ತು ಎಸ್ಬಿಐನ ಮಾಜಿ ಸಿಇಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.
ಪಿಎಂಸಿ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳ ಬಳಿಕ ಅದೇ ಮಾದರಿಯ ಮತ್ತೊಂದು ಬ್ಯಾಂಕ್ ಹಗರಣ ಇದಾಗಿದೆ. ಅತಿ ಕೆಟ್ಟ ಸಾಲದಿಂದಾಗಿ ಯೆಸ್ ಬ್ಯಾಂಕ್ ತೀರಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಬ್ಯಾಂಕ್ನಲ್ಲಿ ಹಣ ಹೂಡಿದ ಗ್ರಾಹಕರು ಸಹ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹಣಕಾಸು ಸಂಸ್ಥೆಗಳು ದುರ್ಬಲಗೊಂಡಿರುವುದು ಭಾರತದ ಆರ್ಥಿಕತೆಯ ಚೇತರಿಕೆಯ ವೇಗಕ್ಕೆ ಪುಷ್ಟಿ ಸಿಗುತ್ತಿಲ್ಲ. ಈಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿರುವುದು ಆರ್ಥಿಕತೆ ಮಟ್ಟಿಗೆ ತೀವ್ರ ಚಿಂತಾಜನಕದ ವಿಚಾರವಾಗಿದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ