ISROದ ನೂತನ ಮುಖ್ಯಸ್ಥರಾಗಿ ನೇಮಕವಾಗಿರುವ ಎಸ್‌. ಸೋಮನಾಥ್ ಬಗ್ಗೆ ನಿಮಗೆಷ್ಟು ಗೊತ್ತು..?

ISRO New Chief: ಸೋಮನಾಥ್ ಉಡಾವಣಾ ವಾಹನಗಳ ವಿನ್ಯಾಸದಲ್ಲಿನ ಕೊಡುಗೆಗೆ ಹೆಸರಾಗಿದ್ದಾರೆ. ಮುಖ್ಯವಾಗಿ, ಉಡಾವಣಾ ವಾಹನ ವ್ಯವಸ್ಥೆಯ ತಾಂತ್ರಿಕತೆ, ರಚನಾತ್ಮಕ ವಿನ್ಯಾಸ, ರಚನಾತ್ಮಕ ಡೈನಾಮಿಕ್ಸ್ ಹಾಗೂ ಪೈರೋಟೆಕ್ನಿಕ್‌ ವಿಭಾಗಗಳಿಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ

ಎಸ್‌. ಸೋಮನಾಥ್

ಎಸ್‌. ಸೋಮನಾಥ್

  • Share this:
ಬುಧವಾರ ಕೇಂದ್ರ ಸರ್ಕಾರವು(Central Government) ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ(Vikram sarabhai space centre) ನಿರ್ದೇಶಕ ಹಾಗೂ ಕ್ಷಿಪಣಿ ವಿಜ್ಞಾನಿ ಎಸ್. ಸೋಮನಾಥ್‌ರನ್ನು(S.Somanath) ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅವರನ್ನು ಬಾಹ್ಯಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಬಾಹ್ಯಾಕಾಶ ಆಯೋಗದ ಅಧ್ಯಕ್ಷರನ್ನಾಗಿ(Chief) 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಶಿವನ್‌(K.Shivan) ಅವರ ಅಧಿಕಾರಾವಧಿ ಮುಗಿದ ನಂತರ ಸೋಮನಾಥ್‌ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಿಂದ ಚಿನ್ನದ ಪದಕ

ಕೇರಳದ ಕೊಲ್ಲಂನ ಟಿಕೆಎಂ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿರುವ ಎಸ್.ಸೋಮನಾಥ್ ಮಲಯಾಳಿ ವಿಜ್ಞಾನಿಯಾಗಿದ್ದು, 1985ರಲ್ಲಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಸೇರ್ಪಡೆಯಾಗಿದ್ದರು. ಅವರು ಜೂನ್ 2010ರಿಂದ 2014ರವರೆಗೆ ಜಿಎಸ್‌ಎಲ್‌ವಿ ಎಂಕೆ-III ಉಡಾವಣಾ ವಾಹನ ತಯಾರಿಕೆಯ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಬಾರಿಗೆ ಸಂಸ್ಕೃತದಲ್ಲಿ ವೈಜ್ಞಾನಿಕ ಸಾಕ್ಷ್ಯಚಿತ್ರ ಬರಲಿದೆಯಂತೆ....ಇಲ್ಲಿದೆ ನೋಡಿ ಡಿಟೈಲ್ಸ್

ಅವರು ಪಿಎಸ್‌ಎಲ್‌ವಿ ಉಡಾವಣಾ ವಾಹನ ಹಾಗೂ ಜಿಎಸ್‌ಎಲ್‌ವಿ ಉಡಾವಣಾ ವಾಹಕ ತಯಾರಿಕಾ ಯೋಜನೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ತೊಡಗಿಕೊಂಡಿದ್ದರು. ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಹಂತಗಳನ್ನು ಒಳಗೊಂಡಿದ್ದ ಜಿಎಸ್‌ಎಲ್‌ವಿ ಯೋಜನೆ ಹಾಗೂ ಹನ್ನೊಂದು ಬಾರಿ ಎಲ್‌ಪಿಎಸ್‌ಸಿಯಿಂದ ಸಾಕಾರಗೊಂಡಿದ್ದ ದ್ರವೀಕೃತ ಹಂತಗಳನ್ನು ಒಳಗೊಂಡಿದ್ದ ಪಿಎಸ್‌ಎಲ್‌ವಿಯ ಯಶಸ್ವಿ ಉಡ್ಡಯನಗಳಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.

ಉಡಾವಣಾ ವಾಹನಗಳ ವಿನ್ಯಾಸಕ್ಕೂ ಕೊಡುಗೆ

ಸೋಮನಾಥ್ ಉಡಾವಣಾ ವಾಹನಗಳ ವಿನ್ಯಾಸದಲ್ಲಿನ ಕೊಡುಗೆಗೆ ಹೆಸರಾಗಿದ್ದಾರೆ. ಮುಖ್ಯವಾಗಿ, ಉಡಾವಣಾ ವಾಹನ ವ್ಯವಸ್ಥೆಯ ತಾಂತ್ರಿಕತೆ, ರಚನಾತ್ಮಕ ವಿನ್ಯಾಸ, ರಚನಾತ್ಮಕ ಡೈನಾಮಿಕ್ಸ್ ಹಾಗೂ ಪೈರೋಟೆಕ್ನಿಕ್‌ ವಿಭಾಗಗಳಿಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರ ನೇತೃತ್ವದಲ್ಲಿ ಡಿಸೆಂಬರ್ 18, 2014ರಂದು 'ಕೇರ್' ಯೋಜನೆಯ ಪ್ರಾಯೋಗಿಕ ವಿಮಾನ ಯಶಸ್ವಿಯಾಗಿ ತನ್ನ ಹಾರಾಟ ಪೂರ್ಣಗೊಳಿಸಿತ್ತು.

ಅತ್ಯುತ್ತಮ ತಂಡ ಪ್ರಶಸ್ತಿ

ಜೂನ್ 2015ರಲ್ಲಿ ತಿರುವನಂತಪುರದಲ್ಲಿರುವ ಇಸ್ರೋದ ಎಲ್‌ಪಿಎಸ್‌ಸಿ ಯೋಜನೆಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಜನವರಿ 2018ರಿಂದ ಎಸ್.ಸೋಮನಾಥ್ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಭಾರತೀಯ ಬಾಹ್ಯಾಕಾಶ ಸಮಾಜವು ಕೊಡಮಾಡುವ ಅಂತರಿಕ್ಷ ಚಿನ್ನದ ಪದಕ, ಇಸ್ರೋದಿಂದ 2014ರಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಹಾಗೂ ಜಿಎಸ್‌ಎಲ್‌ವಿ ಎಂಕೆ-III ಯೋಜನೆ ಸಾಕಾರಗೊಂಡಿದ್ದಕ್ಕೆ ಅತ್ಯುತ್ತಮ ತಂಡ ಪ್ರಶಸ್ತಿ ದೊರೆತಿದೆ.

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ಸಂಕೀರ್ಣ ಕಾಲಘಟ್ಟದಲ್ಲಿದ್ದು, ಭಾರಿ ಸುಧಾರಣಾ ಕ್ರಮಗಳು ಹಾಗೂ ದಂತಕತೆಯಾಗಿರುವ ಈ ಸಂಸ್ಥೆಯ ಭವಿಷ್ಯದ ಪ್ರಯಾಣವನ್ನು ವ್ಯಾಖ್ಯಾನಿಸಲಿರುವ ಕ್ಲಿಷ್ಟ ಯೋಜನೆಗಳು ಮುಂದಿರುವಾಗ ಎಸ್. ಸೋಮನಾಥ್ ಅದರ ಸಾರಥ್ಯ ವಹಿಸಿಕೊಂಡಿದ್ದಾರೆ. ತಮ್ಮ ಆದ್ಯತೆಗಳ ಕುರಿತು ಪ್ರತಿಕ್ರಿಯಿಸಿರುವ ಎಸ್. ಸೋಮನಾಥ್, ಖಾಸಗಿ ವಲಯಗಳು ಹಾಗೂ ಹೊಸದಾಗಿ ಶುರುವಾಗಿರುವ ಉದ್ಯಮಗಳನ್ನು ಬಾಹ್ಯಾಕಾಶ ವಲಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು, ಬಾಹ್ಯಾಕಾಶ ವಲಯದಲ್ಲಿ ಸುಧಾರಣೆ ತರುವುದು ನನ್ನ ಆದ್ಯತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಗ್ರಹದಲ್ಲಿ 16 ಗಂಟೆಗೆ ಒಂದು ವರ್ಷ! NASA ಹುಡುಕಿದ ಹೊಸಾ ಗ್ರಹದಲ್ಲಿ ಇನ್ನೇನಿದೆ?

"ನಾವು ಅವರ ಕೈ ಹಿಡಿದು ಅವರು ಮೇಲೆ ಬರಲು ನೆರವು ನೀಡಬೇಕಿದೆ. ಇದರ ಹಿಂದಿರುವ ಉದ್ದೇಶವೇನೆಂದರೆ, ಬಾಹ್ಯಾಕಾಶ ನಿಸರ್ಗ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು, ಆರ್ಥಿಕ ಯೋಗ್ಯಗೊಳಿಸುವುದು ಹಾಗೂ ಸ್ವಯಂ ಸಮರ್ಥಗೊಳಿಸುವುದಾಗಿದೆ. ಇನ್-ಸ್ಪೇಸ್ ಹೊಸ ಮಾದರಿ ಕುರಿತು ವ್ಯಾಖ್ಯಾನಿಸುತ್ತಿದ್ದು, ಅದನ್ನು ನಮ್ಮ ಬಾಹ್ಯಾಕಾಶ ಆರ್ಥಿಕತೆ ವಿಸ್ತರಿಸಲೂ ವಿನ್ಯಾಸಗೊಳಿಸಬಹುದಾಗಿದೆ. ನಮ್ಮ ಭಾರತದಲ್ಲಿ ನಾವೀಗ 60,000 ಕೋಟಿ ರೂ. ಮೌಲ್ಯದವರೆಗೆ ಬಾಹ್ಯಾಕಾಶ ಆರ್ಥಿಕತೆಯನ್ನು ವೃದ್ಧಿಸಬೇಕಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
Published by:ranjumbkgowda1 ranjumbkgowda1
First published: