Goa Elections: ಗೋವಾ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಅಮಿತ್ ಪಾಲೇಕರ್ ಹೆಸರು ಘೋಷಣೆ

ಅಮಿತ್ ಪಾಲೇಕರ್ ಅವರು ಗೋವಾದಲ್ಲಿ ಭಂಡಾರಿ ಸಮುದಾಯಕ್ಕೆ ಸೇರಿದವರು. ಭಂಡಾರಿ ಸಮುದಾಯ ಕರಾವಳಿ ರಾಜ್ಯದಲ್ಲಿ ಅತಿದೊಡ್ಡ ಮತದಾರರನ್ನು ಹೊಂದಿದೆ.

ಅಮಿತ್​ ಪಾಲೇಕರ್​

ಅಮಿತ್​ ಪಾಲೇಕರ್​

  • Share this:
ಪಣಜಿ  (ಜ. 19) : ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಗೋವಾದಲ್ಲಿ (Goa) ಅಧಿಕಾರ ಹಿಡಿಯಬೇಕು ಎಂದು ಆಮ್ ಆದ್ಮಿ ಪಕ್ಷದ (Aam Aadmi Party) ಭಾರೀ ಪ್ರಯತ್ನ ಮಾಡಿತ್ತು. ಆದರೆ ತೀವ್ರ ನಿರಾಶೆ ಅನುಭವಿಸಿತ್ತು. ಈ ಭಾರಿ ಇನ್ನೂ ಹೆಚ್ಚಿನ ತಯಾರಿ ನಡೆಸಿದೆ. ಜೊತೆಗೆ ಕಡಲ ತಡಿಯ ರಾಜ್ಯದಲ್ಲಿ ಖಾತೆ ತೆರದೇ ತೀರುತ್ತೇನೆ ಎಂದು ಪಣತೊಟ್ಟಿದೆ. ಈಗಾಗಲೇ ಆಮ್ ಆದ್ಮಿ ಪಕ್ಷದ 'ಮುಖ' ಎಂದೇ ಹೇಳಲಾಗುವ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aam Aadmi Party National Convener and Chief Minister of Delhi Arvind Kejriwal) ಬಹಳಷ್ಟು ಭಾರಿ ಗೋವಾಕ್ಕೆ ಭೇಟಿ ನೀಡಿದ್ದಾರೆ. ಇದೀಗ ಆಮ್ ಆದ್ಮಿ ಪಕ್ಷದ ವತಿಯಿಂದ ಹಿರಿಯ ವಕೀಲ ಅಮಿತ್ ಪಾಲೇಕರ್ (Senior Advocate Amit Palekar) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

ನಿನ್ನೆ ಪಂಜಾಬ್ ಇಂದು ಗೋವಾ

ನಿನ್ನೆ (ಜನವರಿ 18) ಪಂಜಾಬ್ ಘಟಕದ ಅಧ್ಯಕ್ಷ ಹಾಗೂ ಸಂಗ್ರುರ್ ಕ್ಷೇತ್ರದ ಸಂಸದ ಭಗವಂತ್ ಮಾನ್ ಅವರನ್ನು ತಮ್ಮ ಪಕ್ಷದ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಆಮ್ ಆದ್ಮಿ ಪಕ್ಷ ಇಂದು (ಜನವರಿ 19) ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದೆ. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಪಣಜಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲ ಅಮಿತ್ ಪಾಲೇಕರ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಭಂಡಾರಿ ಹಿಂದಿನ ಆಯ್ಕೆಯ ತಂತ್ರ

ಅಮಿತ್ ಪಾಲೇಕರ್ ಅವರು ಗೋವಾದಲ್ಲಿ ಭಂಡಾರಿ ಸಮುದಾಯಕ್ಕೆ ಸೇರಿದವರು. ಭಂಡಾರಿ ಸಮುದಾಯ ಕರಾವಳಿ ರಾಜ್ಯದಲ್ಲಿ ಅತಿದೊಡ್ಡ ಮತದಾರರನ್ನು ಹೊಂದಿದೆ. ವಿಶೇಷ ಏನೆಂದರೆ ಭಂಡಾರಿ ಸಮಾಜವು 'ತನ್ನ ಸಮುದಾಯದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವನ್ನು ನೀಡಲಾಗುವುದು' ಎಂದು ಹೇಳಿತ್ತು. ಇಂದು ಅಮಿತ್ ಪಾಲೇಕರ್ ಅವರನ್ನು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲು ಇದು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಅಮಿತ್ ಪಾಲೇಕರ್ ಹಿನ್ನೆಲೆ

ಅಮಿತ್ ಪಾಲೇಕರ್ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸಿರುವ ಆಮ್ ಆದ್ಮಿ ಪಕ್ಷ ಈ ಮೂಲಕ ಭಂಡಾರಿ ಸಮುದಾಯದ ಮತಗಳನ್ನು ಓಲೈಸಲು ಕಾರ್ಯತಂತ್ರ ನಡೆಸಿದೆ. 2021ರ ಅಕ್ಟೋಬರ್ 21ರಂದು ಅಮಿತ್ ಪಾಲೇಕರ್ ಎಎಪಿಗೆ ಸೇರಿದಾಗ 'ಪಕ್ಷದ ಸಿದ್ಧಾಂತವು ತಾನು ನಂಬಿದ್ದನ್ನು ಹೋಲುತ್ತದೆ ಮತ್ತು ಆದ್ದರಿಂದ ತನ್ನ ಗುರಿಗಳನ್ನು ತಲುಪುವುದು ತುಂಬಾ ಕಷ್ಟಕರವಲ್ಲ' ಎಂದು ಹೇಳಿದ್ದರು. ಪಾಲೇಕರ್ ತಾವು ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ ಎಂದು ಹೇಳಿಕೊಳ್ಳುತ್ತರಾದರೂ ಅವರ ತಾಯಿ 10 ವರ್ಷಗಳಿಂದ ಮರ್ಸೆಸ್ ಗ್ರಾಮದ ಸರಪಂಚ್ ಆಗಿದ್ದಾರೆ. ಎಎಪಿಗೆ ಸೇರಿದ ನಂತರ ಅಮಿತ್ ಪಾಲೇಕರ್ ಅವರು ಹಳೆಯ ಗೋವಾದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಗೋವಾದ ಪ್ರಮುಖ ಪರಂಪರೆ ಮತ್ತು ಪವಿತ್ರ ಸ್ಥಳದ ಸಮೀಪದಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿದೆ ಎಂದು ಆರೋಪಿಸಿ ಅವರು ನಡೆಸಿದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹದಿಂದ ರಾಜಕೀಯ ಜೀವನದಲ್ಲಿ ಇನ್ನಷ್ಟು ಪರಿಚಿತರಾದರು.

ಪಾಲೇಕರ್ ಪರ ಕೇಜ್ರಿವಾಲ್ ಟ್ವೀಟ್

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ಗೋವನ್ನು ನಾಶ ಮಾಡಲು ಯತ್ನಿಸುತ್ತಿರುವವರ ವಿರುದ್ಧ ನಿಂತಿದ್ದಕ್ಕಾಗಿ ಅಮಿತ್ ಪಾಲೇಕರ್ ನಿಮ್ಮ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ. ಹಳೆ ಗೋವನ್ನು ಉಳಿಸಲು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದೀರಿ. ನಾನು ನಿಮಗಾಗಿ ಮತ್ತು ಹಳೆಯ ಗೋವಾದ ಪರಂಪರೆಯ ತಾಣವನ್ನು ಉಳಿಸಲು ಹೋರಾಡುತ್ತಿರುವ ಸಾವಿರಾರು ಜನರಿಗಾಗಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಇದನ್ನು ಓದಿ: ಪಂಜಾಬ್ AAP ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಆಯ್ಕೆ

ಪಾಲೇಕರ್ ಮಗಳ ವಿಡಿಯೋ ವೈರಲ್

ಕಟ್ಟಡವನ್ನು ಇನ್ನೂ ಕೆಡವದಿದ್ದರೂ ಸ್ಥಳೀಯ ಪಂಚಾಯತ್ ನಿರ್ಮಾಣಕ್ಕೆ ನೀಡಿರುವ ಎಲ್ಲಾ ಅಕ್ರಮ ಅನುಮತಿಗಳನ್ನು ಹಿಂಪಡೆಯುವವರೆಗೂ ಪಾಲೇಕರ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು. ಪಾಲೇಕರ್ ಅವರ ಚಿಕ್ಕ ಮಗಳು ತನ್ನ ತಂದೆ ಉಪವಾಸ ಮುರಿದಾಗ ಒಂದು ಲೋಟ ನೀರನ್ನು ನೀಡುವ ವಿಡಿಯೋ ವೈರಲ್ ಆಗಿತ್ತು, ಇದು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧದ ಮೊದಲ ಪ್ರಮುಖ ಗೆಲುವು ಎಂದು ಎಎಪಿ ಪರಿಗಣಿಸಿದೆ.

ಇದನ್ನು ಓದಿ: ಸಮಾಜವಾದಿ ಪಕ್ಷಕ್ಕೆ ಶಾಕ್​ ನೀಡಿದ ಮುಲಾಯಂ ಸಿಂಗ್ ಯಾದವ್​ ಸೊಸೆ; ಬಿಜೆಪಿ ಸೇರಿದ Aparna Yadav

ಜಿಎಂಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ

ಸೇಂಟ್ ಕ್ರೂಜ್ ಕ್ಷೇತ್ರದವರಾದ ಅಮಿತ್ ಪಾಲೇಕರ್ ಇತ್ತೀಚೆಗೆ ಬಾಂಬೋಲಿಮ್‌ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಉದ್ಯೋಗ ನೇಮಕಾತಿ ಹಗರಣವನ್ನು ಬಹಿರಂಗಪಡಿಸಲು ಪ್ರಯತ್ನಿಸಿದರು. ಗೋವಾದ ಆರೋಗ್ಯ ಸಚಿವ ಹಾಗೂ ಬಿಜೆಪಿ ನಾಯಕ ವಿಶ್ವಜೀತ್ ರಾಣೆ ಅವರು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು. GMC ಯಲ್ಲಿ ಸುಮಾರು 90 ಪ್ರತಿಶತದಷ್ಟು ಉದ್ಯೋಗ ನೇಮಕಾತಿಗಳು ಲಂಚದ ಮೂಲಕ ಅಸಮರ್ಥ ಸಿಬ್ಬಂದಿಗಳ ನೇಮಕಾತಿಯನ್ನು ಆಧರಿಸಿವೆ ಎಂದು ಪಾಲೇಕರ್ ಆರೋಪಿಸಿದ್ದರು. ಪಾಲೇಕರ್ ಅವರ ಈ ನಡೆ ಗಮನಾರ್ಹವಾಗಿತ್ತು.

ಕೊರೋನಾ ಕಷ್ಟದಲ್ಲಿ ನೆರವಾಗಿದ್ದ ಪಾಲೇಕರ್

ಕೋವಿಡ್ -19 ರ ಎರಡನೇ ಅಲೆಯ ವೇಳೆ ಆಮ್ಲಜನಕದ ಕೊರತೆಯಿಂದಾಗಿ 47 ಜನರು ಪ್ರಾಣ ಕಳೆದುಕೊಂಡಾಗ ಬಾಂಬೆ ಹೈಕೋರ್ಟ್ (ಗೋವಾ ಬೆಂಚ್) ಅನ್ನು ಸಂಪರ್ಕಿಸಿದ ದಾವೆದಾರರಲ್ಲಿ ಅಮಿತ್ ಪಾಲೇಕರ್ ಕೂಡ ಒಬ್ಬರು. ಸ್ವಲ್ಪ ಸಮಯದ ನಂತರ ಸರ್ಕಾರವು ಮಧ್ಯಪ್ರವೇಶಿಸಲು ಒತ್ತಾಯಿಸಲಾಯಿತು. ಅವರು ದತ್ತಿ ಸಂಸ್ಥೆಯೊಂದಿಗೆ, 185 ವೈದ್ಯಕೀಯ ಹಾಸಿಗೆಗಳನ್ನು GMCಗೆ ದಾನ ಮಾಡಿದ್ದರು.

ಫೆಬ್ರವರಿ 14ರಂದು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
Published by:Seema R
First published: