ಮುಂಬೈ (ಡಿಸೆಂಬರ್ 28): ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರ ಪತ್ನಿ ವರ್ಷಾ ರೌತ್ ಅವರನ್ನು ಜಾರಿ ನಿರ್ದೇಶನಾ ಇಲಾಖೆ (Enforcement Department) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಂದು ಸಮನ್ಸ್ ಜಾರಿ ಮಾಡಿದೆ. ಹೀಗಾಗಿ ಅವರು ಡಿಸೆಂಬರ್ 29 ರಂದು ಏಜೆನ್ಸಿಯ ಮುಂಬೈ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಣೆಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ವರ್ಷಾ ರೌತ್ ಮತ್ತು ಪ್ರವೀಣ್ ರೌತ್ ನಡುವಿನ ಹಣಕಾಸಿನ ವಹಿವಾಟಿನ ಬಗ್ಗೆ ತನಿಖಾ ಸಂಸ್ಥೆ ವಿಚಾರಣೆಗ ನಡೆಸುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನಲ್ಲಿ ಸಾಲ ವಂಚನೆ ಪ್ರಕರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರ ಪತ್ನಿ ವರ್ಷಾ ರೌತ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಇದು ಮೂರನೇ ಬಾರಿ.
ಆದರೆ, ಈ ಹಿಂದೆ ಜಾರಿ ನಿರ್ದೇಶನಾಲಯ ನೀಡಿದ್ದ ಎರಡೂ ಸಮನ್ಸ್ ವೇಳೆ ವರ್ಷಾ ರೌತ್ ವಿಚಾರಣೆಗೆ ಹಾಜರಾಗಿರಲಿಲ್ಲ. ಆರೋಗ್ಯದ ಕಾರಣ ನೀಡಿ ವಿಚಾರಣೆಯಿಂದ ಅವರು ವಿನಾಯಿತಿ ಪಡೆದಿದ್ದರು. ಆದರೆ, ಇದು ಮೂರನೇ ಸಮನ್ಸ್ ಆಗಿದ್ದು, ಈ ಭಾರಿ ಅವರು ವಿಚಾರಣೆಗೆ ಹಾಜರಾಗಲೇಬೇಕು ಎಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಆದರೆ, ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ. ಇದೇ ಕಾರಣಕ್ಕೆ ಸೇಡಿನ ಕ್ರಮವಾಗಿ ಶಿವಸೇನೆ ನಾಯಕರ ಮೇಲೆ ರಾಜಕೀಯ ಪ್ರೇರಿತ ದಾಳಿ ಸಂಘಟಿಸಲಾಗುತ್ತಿದೆ. ವರ್ಷಾ ರೌತ್ ಮೇಲಿನ ದಾಳಿಯೂ ಸಹ ಇಂತಹ ಒಂದು ಸೇಡಿನ ದಾಳಿಯೇ ಆಗಿದೆ ಎಂದು ಮೈತ್ರಿ ಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಎನ್ಸಿಪಿಗೆ ಇತ್ತೀಚೆಗೆ ಪಕ್ಷಾಂತರ ಮಾಡಿದ್ದ ನಾಯಕ ಏಕನಾಥ ಖಡ್ಸೆ ಅವರನ್ನು ಡಿಸೆಂಬರ್ 30 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಈ ಕುರಿತು ಭಾನುವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಶಿವಸೇನೆ ನಾಯಕ ಸಂಜಯ್ ರೌತ್, ಮಹಾರಾಷ್ಟ್ರ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೆ, "ಬನ್ನಿ, ಯಾರು ಹೆಚ್ಚು ಶಕ್ತಿ ಹೊಂದಿದ್ದಾರೆಂದು ನೋಡೋಣ" ಎಂದು ಕಿಡಿಕಾರಿದ್ದರು.
ಇದನ್ನೂ ಓದಿ : FarmersProtest: 32ನೇ ದಿನಕ್ಕೆ ಕಾಲಿಟ್ಟ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ!
ಆದರೆ, ಸಂಜಯ್ ರೌತ್ ಅವರ ಟ್ವೀಟ್ಗೆ ಮಾಧ್ಯಮದವರ ಬಳಿ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, "ನಾನೇನು ಜಾರಿ ನಿರ್ದೇಶನಾಲಯದ ವಕ್ತಾರ ಅಲ್ಲ. ಸಂಜಯ್ ರೌತ್ ಮತ್ತು ಅವರ ಪತ್ನಿ ವರ್ಷ ರೌತ್ ಯಾವ ತಪ್ಪು ಮಾಡಿಲ್ಲ ಎಂದ ಮೇಲೆ ಏಕೆ ಚಿಂತಿಸಬೇಕು? ಇಡಿ ವಿಚಾರಣೆಗೆ ಭಯಪಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ