ಜಲ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡುವ ರಮೇಶ್ಚಂದ್ರ ಫೆಫರ್ ಎಂಬವರು, ತನ್ನ ಒಂದು ವರ್ಷದ ಸಂಬಳ ಮತ್ತು ಗ್ರಾಚ್ಯುಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ, ತನ್ನ ದೈವಿಕ ಶಕ್ತಿಯನ್ನು ಬಳಸಿ ಭೂಮಿಯಲ್ಲಿ ಭಯಾನಕ ಬರ ಪರಿಸ್ಥಿತಿಯನ್ನು ಸೃಷ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಾವಿಷ್ಣುವಿನ ದಶಾವತಾರ ಕಲ್ಕಿ ಭಗವಾನ್ ಭೂಮಿಯ ಮೇಲೆ ಇದ್ದಾರೆಯೇ? ಅಸಲಿ ದೇವರ ಬಗ್ಗೆ ಗೊತ್ತಿಲ್ಲ. ಆದರೆ ಸ್ವಯಂ ಘೋಷಿತ ಕಲ್ಕಿ ಅವತಾರವಂತೂ ಇದೆ. ಈಗ ಆ ದೇವರಿಗೆ ಗ್ರಾಚ್ಯುಟಿ ಹಣ ಬೇಕಂತೆ! ಗುಜರಾತ್ ಸರಕಾರ ಏನು ಮಾಡುತ್ತದೆ? ತಾನು ಮಹಾವಿಷ್ಣುವಿನ ಕಲ್ಕಿ ಅವತಾರವೆಂದು ಘೋಷಿಸಿಕೊಂಡಿರುವ , ಗುಜರಾತ್ ಸರಕಾರದ ಮಾಜಿ ಉದ್ಯೋಗಿಯೊಬ್ಬರು, ತನ್ನ ಬೇಡಿಕೆ ಈಡೇರಿಸದಿದ್ದರೆ, ಇಡೀ ಜಗತ್ತಿನಲ್ಲಿ ಬರ ಬರುವಂತೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡುವ ರಮೇಶ್ಚಂದ್ರ ಫೆಫರ್ ಎಂಬವರು, ತನ್ನ ಒಂದು ವರ್ಷದ ಸಂಬಳ ಮತ್ತು ಗ್ರಾಚ್ಯುಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ, ತನ್ನ ದೈವಿಕ ಶಕ್ತಿಯನ್ನು ಬಳಸಿ ಭೂಮಿಯಲ್ಲಿ ಭಯಾನಕ ಬರ ಪರಿಸ್ಥಿತಿಯನ್ನು ಸೃಷ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ , “ಸರಕಾರದಲ್ಲಿ ಕೂತಿರುವ ಅಸುರರು” ತನ್ನ “16 ಲಕ್ಷ ರೂ. ಗ್ರಾಚ್ಯುಟಿ ಹಣ ಮತ್ತು ಒಂದು ವರ್ಷದ ಸಂಬಳ”ವನ್ನು ತಡೆ ಹಿಡಿದಿದ್ದಾರೆ ಎಂದು ಫೆಫೆರ್ ಉಲ್ಲೇಖಿಸಿದ್ದಾರೆ.
“ದೇಶದಲ್ಲಿ ವರ್ಷಕ್ಕೆ ಒಮ್ಮೆಯೂ ಬರಗಾಲ ಬಂದಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಉತ್ತಮ ಮಳೆಯಾದ ಕಾರಣ, ಭಾರತ 20 ಲಕ್ಷ ಕೋಟಿ ಲಾಭ ಗಳಿಸಿದೆ. ಹಾಗಿದ್ದು ಕೂಡ, ಸರಕಾರದಲ್ಲಿ ಕುಳಿತಿರುವ ಅಸುರರು ನನಗೆ ಹಿಂಸೆ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ, ಈ ವರ್ಷ ನಾನು ಇಡೀ ಜಗತ್ತಿನಲ್ಲಿ ಭೀಕರ ಬರ ಉಂಟಾಗುವಂತೆ ಮಾಡುತ್ತೇನೆ. ಏಕೆಂದರೆ ನಾನು ಮಹಾವಿಷ್ಣುವಿನ 10ನೇ ಅವತಾರ ಮತ್ತು ಸತ್ಯಯುಗದಲ್ಲಿ ಭೂಮಿಯನ್ನು ನಾನು ಆಳಲಿದ್ದೇನೆ” ಎಂದು ಅವರು ಬರೆದಿದ್ದಾರೆ.
ತನ್ನನ್ನು ಕಲ್ಕಿ ಅವತಾರವೆಂದು ಘೋಷಿಸಿಕೊಂಡು, ಸೇವೆಗೆ ದೀರ್ಘಕಾಲ ಗೈರು ಹಾಜರಾದ ಕಾರಣ, ಫೆಫರ್ ಅವರಿಗೆ ಅವಧಿ ಪೂರ್ವ ನಿವೃತ್ತಿಯನ್ನು ನೀಡಲಾಗಿತ್ತು. ಎಂಟು ತಿಂಗಳಲ್ಲಿ ಕೇವಲ 16 ದಿನ ಮಾತ್ರ ಕಚೇರಿಗೆ ಬಂದಿದ್ದಕ್ಕಾಗಿ ಅವರಿಗೆ 2018ರಲ್ಲಿ ಶೋಕಾಸ್ ನೋಟೀಸ್ ನೀಡಲಾಗಿತ್ತು.
ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರು, ಈ ಸ್ವಯಂ ಘೋಷಿತ ಕಲ್ಕಿ ಅವತಾರದ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಆತನೊಬ್ಬ ಅಸಂಬದ್ಧ ವ್ಯಕ್ತಿ ಎಂದು ಟೀಕಿಸಿದ್ದಾರೆ.
“ಕಚೇರಿಗೆ ಹಾಜರಾಗದೆಯೇ , ಅವರು ಸಂಬಳ ಕೇಳುತ್ತಿದ್ದಾರೆ. ಅವರು ‘ಕಲ್ಕಿ’ ಅವತಾರವಾಗಿರುವುದಕ್ಕಾಗಿ ಹಾಗೂ ಭೂಮಿಯ ಮೇಲೆ ಮಳೆ ಬರಿಸಲು ಕೆಲಸ ಮಾಡುತ್ತಿರುವುದಕ್ಕಾಗಿ ಸಂಬಳ ನೀಡಬೇಕೆಂದು ಅವರು ಕೇಳುತ್ತಿದ್ದಾರೆ” ಎಂದು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಎಂ ಕೆ ಜಾಧವ್ ಪಿಟಿಐಗೆ ತಿಳಿಸಿದ್ದಾರೆ.
“ಆತ ಪೂರ್ಣ ಅಸಂಬದ್ಧ ವ್ಯಕ್ತಿ. ಗ್ರಾಚ್ಯುಟಿ ಮತ್ತು ಒಂದು ವರ್ಷದ ಸಂಬಳ ನೀಡುವಂತೆ ಆತನಿಂದ ನನಗೆ ಪತ್ರ ಬಂದಿತ್ತು. ಆತನ ಗ್ರಾಚ್ಯುಟಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿದೆ. ಕಳೆದ ಬಾರಿ ಆತನ ಘೋಷಣೆಯ (ತಾನು ಕಲ್ಕಿ ಅವತಾರವೆಂದು) ನಂತರ ಒಂದು ವಿಚಾರಣೆ ನಡೆಯಿತು. ಆತನ ಮಾನಸಿಕ ಸ್ಥಿತಿಯನ್ನು ಒಂದು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ, ಸರಕಾರ ಅವರಿಗೆ ಅಕಾಲಿಕ ನಿವೃತ್ತಿಯನ್ನು ಅಂಗೀಕರಿಸಿತು. ಸಾಮಾನ್ಯವಾಗಿ ವಿಚಾರಣೆಯನ್ನು ಎದುರಿಸುತ್ತಿರುವ ವ್ಯಕ್ತಿಗೆ ನಿವೃತ್ತಿ ನೀಡಲಾಗುವುದಿಲ್ಲ.” ಎಂದು ಜಾಧವ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ