ದೊಡ್ಡ ಮಹಾನಗರಗಳಲ್ಲಿರುವ ಅಪಾರ್ಟ್ಮೆಂಟ್ಗಳಲ್ಲಿ ವಾಸವಾಗಿರುವ ಜನರ ಭದ್ರತೆಗಾಗಿ ಮತ್ತು ಅಪಾರ್ಟ್ಮೆಂಟ್ನಲ್ಲಿರುವಂತಹ ಚಿಕ್ಕ ಪುಟ್ಟ ಕೆಲಸಗಳನ್ನು ನೋಡಿಕೊಳ್ಳಲು ಭದ್ರತಾ ಸಿಬ್ಬಂದಿಯವರನ್ನು ನೇಮಿಸುವುದು ನಮಗೆಲ್ಲಾ ತಿಳಿದ ವಿಷಯವೇ ಆಗಿದೆ.ಎಷ್ಟೋ ಬಾರಿ ನಮಗೆ ಹೊರಗಿನವರಿಗಿಂತಲೂ ಈ ಭದ್ರತಾ ಸಿಬ್ಬಂದಿಯಿಂದಲೇ ಕಿರಿಕಿರಿ ಆಗುವುದುಂಟು. ಕೆಲವೊಮ್ಮೆ ಇಲ್ಲಿ ವಾಸವಾಗಿರುವಂತಹ ಮನೆಯವರಿಂದಲೇ ಈ ಭದ್ರತಾ ಸಿಬ್ಬಂದಿಗೆ ಚಿಕ್ಕ ಪುಟ್ಟ ವಿಷಯಗಳಿಗೆ ಕಿರಿಕಿರಿ ಆಗುವುದುಂಟು. ಆದರೆ ಯಾವುದೇ ಕಿರಿಕಿರಿ ಮತ್ತು ಮಾತಿನ ಚಕಮಕಿ ಮಿತಿ ಮೀರಿದರೆ ಗಂಭೀರವಾದ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದಕ್ಕೆ ಇಲ್ಲಿ ನಡೆದಂತಹ ನೈಜ ಘಟನೆ ಒಳ್ಳೆಯ ಉದಾಹರಣೆ ಎಂದು ಹೇಳಬಹುದು.
ಒಂದು ಆಘಾತಕಾರಿ ಘಟನೆಯೊಂದರಲ್ಲಿ ನೋಯ್ಡಾದ ಸೆಕ್ಟರ್ 100 ರಲ್ಲಿರುವಂತಹ ಲೋಟಸ್ ಬೌಲೆವಾರ್ಡ್ ಸೊಸೈಟಿಯ ನಿವಾಸಿಯ ಮೇಲೆ ಅಲ್ಲಿನ ಭದ್ರತಾ ಸಿಬ್ಬಂದಿಗಳು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಯಾವುದೋ ಭದ್ರತಾ ವಿಷಯಕ್ಕೆ ಮಾತಿನ ಚಕಮಕಿ ನಡೆದು ನಂತರ ಅದು ಗಂಭೀರ ಸ್ವರೂಪವನ್ನು ಪಡೆದುಕೊಂಡು ಅಲ್ಲಿನ ಭದ್ರತಾ ಸಿಬ್ಬಂದಿ ಒಟ್ಟಿಗೆ ಸೇರಿಕೊಂಡು ನಿವಾಸಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ಅನ್ನು ದಾಖಲಿಸಲಾಗಿದ್ದು, ಇಬ್ಬರು ಭದ್ರತಾ ಸಿಬ್ಬಂದಿಯವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡ ನಿವಾಸಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಪ್ರಥಮ ಚಿಕಿತ್ಸೆ ಪಡೆದ ನಂತರ ಮನೆಗೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ವಹಣೆ ಮತ್ತು ಭದ್ರತಾ ವಿಷಯವಾಗಿ ಸುರೇಶ್ ಕುಮಾರ್ ಭದ್ರತಾ ಸಿಬ್ಬಂದಿಯ ಕಪಾಳಕ್ಕೆ ಹೊಡೆದ ಕಾರಣಕ್ಕಾಗಿ ಭದ್ರತಾ ಸಿಬ್ಬಂದಿಯವರು ಕೋಪಗೊಂಡು ಈ ರೀತಿಯ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳವಾದ ಸ್ವಲ್ಪ ಸಮಯದಲ್ಲಿಯೇ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ನಿವಾಸಿಯನ್ನು ನಿಂದಿಸಿ ಲಾಠಿಯಿಂದ ಹೊಡೆಯುವುದನ್ನು ಕಾಣಬಹುದು. ನಿವಾಸಿಯು ಅಲ್ಲಿನ ಜನರಿಗೆ ವಿಡಿಯೋ ಮಾಡುವಂತೆ, ಮಾಧ್ಯಮದವರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಲು ಹೇಳುತ್ತಿರುವುದು ಸಹ ಇದರಲ್ಲಿ ನೋಡಬಹುದು.
ನಿವಾಸಿಯು ಬಂದು ಸಿಬ್ಬಂದಿಯ ಹತ್ತಿರ ಯಾವುದೋ ಬೀಗದ ಕೈ ನೀಡುವಂತೆ ಕೇಳಿದ್ದಾನೆ, ಅದು ನಮ್ಮ ಬಳಿ ಇಲ್ಲ, ಇದ್ದರೂ ಅದನ್ನು ನಿವಾಸಿಗಳಿಗೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ನಿವಾಸಿ ಮತ್ತು ಆತನ ಮಗ ಸಿಬ್ಬಂದಿಯವರಿಗೆ ನಿಂದಿಸಿದ್ದಾರೆ. ನಂತರ ಕೆಲವು ಭದ್ರತಾ ಸಿಬ್ಬಂದಿಯವರು ಒಟ್ಟುಗೂಡಿ ನಿವಾಸಿಯನ್ನು ಥಳಿಸಿದರು ಎಂದು ಇನ್ನೊಬ್ಬ ಭದ್ರತಾ ಸಿಬ್ಬಂದಿ ಹೇಳಿದರು.
ನಿವಾಸಿಯು ನಿಂದಿಸಿದರೆ ಅದನ್ನು ಶಾಂತ ರೀತಿಯಿಂದ ಬೇರೆ ನಿವಾಸಿಗಳಿಗೆ ವಿಷಯ ತಿಳಿಸಿ ಸಮಾಧಾನ ಪಡಿಸಿ ನಂತರ ನಿವಾಸಿಯ ವಿರುದ್ಧ ದೂರು ದಾಖಲಿಸಬಹುದಾಗಿತ್ತು, ಹೀಗೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡುವುದು ಒಳ್ಳೆಯದಲ್ಲ ಎಂದು ಇನ್ನೊಬ್ಬ ನಿವಾಸಿ ಹೇಳಿದರು.
“ನಾವು ಅಲ್ಲಿನ ಸಿಸಿಟಿವಿ ನೋಡಿದ್ದೇವೆ, ನಮಗೆ ಅದರಲ್ಲಿ ಭದ್ರತಾ ಸಿಬ್ಬಂದಿಯವರು ನಿವಾಸಿಯನ್ನು ಥಳಿಸಿದ್ದು ಕಂಡುಬಂದಿದೆ. ಈ ರೀತಿಯ ಘಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ರಾಣ್ ವಿಜಯ್ ಸಿಂಗ್ ಹೇಳಿದ್ದಾರೆ.