Four Terrorists Killed in Kashmir| ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 4 ಉಗ್ರರ ಹತ್ಯೆ!

ಉಗ್ರರು ತಾವು ಅಡಗಿದ್ದ ಪ್ರದೇಶದಿಂದ ಮೊದಲು ಅವರೇ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಸೇನೆ ನಡೆಸಿದ ಪ್ರತಿದಾಳಿಗೆ ಉಗ್ರರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯ ನಂತರ  ಅವರ ಮೃತ ದೇಹಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ, AK-47 ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಕುಲ್ಗಾಮ್​ (ಶ್ರೀನಗರ): ಕಳೆದ ಎರಡು ವಾರದಿಂದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ (Jammu-Kashmir) ಉಗ್ರರ ಚಟುವಟಿಕೆ (Terrorist Attack) ಅಧಿಕವಾಗುತ್ತಲೇ ಇದೆ. ಉಗ್ರ ದಾಳಿಗೆ ಈವರೆಗೆ 11 ಜನ ಸ್ಥಳೀಯ ನಾಗರೀಕರು ಮತ್ತು 9 ಜನ ಸೈನಿಕರು ಮೃತರಾಗಿದ್ದಾರೆ. ಹೀಗಾಗಿ ಭಯೋತ್ಪಾದಕರನ್ನು ಸದೆಬಡಿಯಲು ಭಾರತೀಯ ಸೇನೆ (Indian Army) ಸಹ ಕಟಿಬದ್ಧವಾಗಿದ್ದು, ಮಂಗಳವಾರ ವಲಸೆ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ (LET) ಸಂಘಟನೆಯ ಇಬ್ಬರು ಕಮಾಂಡರ್​ಗಳು ಸೇರಿದಂತೆ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಬುಧವಾರ ತಡರಾತ್ರಿ ಹೊಡೆದು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಒಂದೇ ದಿನ ಎರಡು ಎನ್​ಕೌಂಟರ್​ 4 ಉಗ್ರರು ಮಟಾಶ್:

  ಶೋಪಿಯಾನ್‌ ಭಾಗದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರೆ, ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಇದರೊಂದಿಗೆ ಕಳೆದ ಎರಡು ವಾರದಲ್ಲಿ 15 ಉಗ್ರರನ್ನು ಜಮ್ಮು-ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಶೋಪಿಯಾನ್ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಪ್ರಾಣ ಕಳೆದುಕೊಂಡಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

  ಬಿಹಾರದ ಬಡ ಕಾರ್ಮಿಕರನ್ನು ಕೊಂದಿದ್ದ ಉಗ್ರನ ಹತ್ಯೆ:

  ಈ ಕಾರ್ಯಾಚರಣೆ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಕಾಶ್ಮೀರ ವಲಯದ ಐಜಿಪಿ ವಿಜಯ ಕುಮಾರ್​, "ಪೋಲಿಸ್ ಮತ್ತು ಸೇನೆಯು ಕುಲ್ಗಾಂನ ಎಲ್ಇಟಿ ಜಿಲ್ಲಾ ಕಮಾಂಡರ್ ಗುಲ್ಜಾರ್ ಅಹ್ಮದ್ ರೇಶಿ ಹಾಗೂ ಮತ್ತೊಬ್ಬನನ್ನು ಹತ್ಯೆ ಮಾಡಿದೆ. ಇವರು ಬಿಹಾರದ ಇಬ್ಬರು ಬಡ ಕಾರ್ಮಿಕರ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದರು. ಇದರ ನಂತರ ಸೇನೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಕೊಂದಿದೆ" ಎಂದು ತಿಳಿಸಿದ್ದಾರೆ.

  ಸೇನೆಗಿತ್ತು ಖಚಿತ ಮಾಹಿತಿ:

  ಕುಲ್ಗಾಮ್ ಜಿಲ್ಲೆಯ ಅಶ್ಮುಜಿ-ದೇವಸಾರ್ ರಸ್ತೆಯಲ್ಲಿ ಇಬ್ಬರು ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಪಡೆದ ನಂತರ ಬುಧವಾರ ಸಂಜೆ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಅನುಮಾನಿತ ಪ್ರದೇಶವನ್ನು ಸುತ್ತುವರಿಯಲಾಯಿತು ಮತ್ತು ಸಂಜೆ 07.40 ಕ್ಕೆ ಉಗ್ರರಿಗೆ ಶರಣಾಗುವಂತೆ ತಿಳಿಸಲಾಯಿತು. ಆದರೆ, ಅವರು ಪದೇ ಪದೇ ಶರಣಾಗತಿಯ ಮನವಿಯನ್ನು ತಿರಸ್ಕರಿಸಿದ ಕಾರಣ ಸೈನಿಕ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊಡೆದುರುಳಿಸಲಾಗಿದೆ" ಎಂದು ರಕ್ಷಣಾ ಇಲಾಖೆ ತಿಳಿಸಿದೆ.

  ಉಗ್ರರು ತಾವು ಅಡಗಿದ್ದ ಪ್ರದೇಶದಿಂದ ಮೊದಲು ಅವರೇ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಸೇನೆ ನಡೆಸಿದ ಪ್ರತಿದಾಳಿಗೆ ಉಗ್ರರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯ ನಂತರ  ಅವರ ಮೃತ ದೇಹಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ, AK-47 ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿದುಬಂದಿದೆ.

  ಇದನ್ನೂ ಓದಿ: Final Assault: ಭಾರತೀಯ ಸೇನಾ ಪಡೆಯಿಂದ ಉಗ್ರರ ಅಂತಿಮ ಬೇಟೆ: ಅಡಗಿ ಕುಳಿತವರ ವಿರುದ್ಧ ಅಂತಿಮ ಕಾರ್ಯಾಚರಣೆ

  ಎನ್​ಕೌಂಟರ್​ಗೆ ತಿರುಗಿದ ಶೋಧ ಕಾರ್ಯ:

  ಇದಲ್ಲದೆ,  ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಪ್ರದೇಶದಲ್ಲೂ ಸಹ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಬುಧವಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು. ಪರಿಣಾಮ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಪಡೆಯ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಯೋಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: Terrorist Attack in Kashmir| ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ; ಉಗ್ರರ ಗುಂಡೇಟಿಗೆ ಬಿಹಾರಿ ಕಾರ್ಮಿಕರು ಬಲಿ!

  ಮುಂದುವರೆಯಲಿರುವ ಸೇನಾ ಕಾರ್ಯಾಚರಣೆ:

  ಕಳೆದ ಕೆಲ ದಿನಗಳಿಂದ ಪಾಕಿಸ್ತಾನದಿಂದ ಭಾರತಕ್ಕೆ ಒಳ ನುಸುಳುತ್ತಿರುವ ಉಗ್ರಗಾಮಿಗಳ ಸಂಖ್ಯೆ ಅಧಿಕವಾಗುತ್ತಿದೆ. ಪಾಕ್ ಸಹಾಯದಿಂದ ದೇಶಕ್ಕೆ ಒಳ ನುಸುಳುತ್ತಿರುವ ಉಗ್ರರಿಗೆ ಸ್ಥಳೀಯರು ಆಶ್ರಯ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಸೇನೆ 700ಕ್ಕೂ ಅಧಿಕ ಸ್ಥಳೀಯರ ವಿಚಾರಣೆ ನಡೆಸಿದೆ. ಆದರೆ, ಉಗ್ರರ ಚಟುವಟಿಕೆ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ  ಹೀಗಾಗಿ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ ಎನ್ನಲಾಗಿದೆ.
  Published by:MAshok Kumar
  First published: