ದಕ್ಷಿಣ ಕಾಶ್ಮೀರದಲ್ಲಿ ಮುಂದುವರೆದ ಸೇನಾ ಕಾರ್ಯಾಚರಣೆ; ಇಬ್ಬರು ಉಗ್ರರ ಭೀಕರ ಹತ್ಯೆ

ಹಿಜ್ಬ್ ಕಮಾಂಡರ್ ರಿಯಾಜ್ ನಾಯ್ಕೊ ಅವರ ಮರಣದ ನಂತರ, ದಕ್ಷಿಣ ಕಾಶ್ಮೀರದ ಭದ್ರತಾ ಪಡೆಗಳು ತಮ್ಮ ಉಗ್ರ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಹಲವಾರು ಹಿರಿಯ ಕಮಾಂಡರ್ಗಳು ಸೇರಿದಂತೆ ಡಜನ್ ಗಟ್ಟಲೆ ಉಗ್ರರು ವಿವಿಧ ಕಾರ್ಯಾಚರಣೆಗಳಲ್ಲಿ ಸೇನಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ.

ಭಾರತೀಯ ಸೇನಾಪಡೆ (ಸಾಂದರ್ಭಿಕ ಚಿತ್ರ)

ಭಾರತೀಯ ಸೇನಾಪಡೆ (ಸಾಂದರ್ಭಿಕ ಚಿತ್ರ)

  • Share this:
ಅನಂತ್‌ನಾಗ್‌ (ಜೂನ್‌ 13): ದಕ್ಷಿಣ ಕಾಶ್ಮೀರದಲ್ಲಿ ಗಡಿ ಸೇನಾಪಡೆಗಳು ಮತ್ತು ಉಗ್ರರ ನಡುವಿನ ಭೀಕರ ಗುಂಡಿನ ಚಕಮಕಿ ನಿರಂತರವಾಗಿ ನಡೆಯುತ್ತಲೇ ಇದೆ. ಪರಿಣಾಮ ಇಂದು ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕಚ್ಪುರ ಖಡೋರಾ ಪ್ರದೇಶದಲ್ಲಿ ಸೇನೆಯ 19 ರಾಷ್ಟ್ರೀಯ ರೈಫಲ್ಸ್, ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್‌ ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಕಚ್ಪುರ ಖಡೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭಾರತೀಯ ಸೇನಾ ಪಡೆ ಇಂದು ಬೆಳಗ್ಗೆಯೇ ಈ ಭಾಗದಲ್ಲಿ ಉಗ್ರರ ಶೋಧ ಕಾರ್ಯವನ್ನು ಆರಂಭಿಸಿತ್ತು. ಈ ವೇಳೆ ಉಗ್ರರು ಮನೆಗಳಲ್ಲಿ ಆಶ್ರಯ ಪಡೆದಿರುವುದು ಖಚಿತವಾಗಿದೆ. ಹೀಗಾಗಿ ಉಗ್ರರನ್ನು ಶರಣಾಗುವಂತೆ ಸೇನಾಪಡೆ ಮತ್ತು ಪೊಲೀಸರು ತಿಳಿಸಿದ್ದಾರೆ. ಆದರೆ, ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿರುವ ಪರಿಣಾಮ ಸೈನಿಕರು ಸಹ ಪ್ತತ್ಯುತ್ತರವಾಗಿ ಗುಂಡಿ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಕಾರಣಗಳಿಗಾಗಿ ಪೊಲೀಸರು ಇನ್ನೂ ಇಬ್ಬರು ಉಗ್ರರ ಗುರುತುಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಭಾರತೀಯ ಸೇನೆ ಮಾತ್ರ “ಮೃತಪಟ್ಟ ಇಬ್ಬರು ಉಗ್ರರಿಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಂಪರ್ಕವಿದೆ. ಅಲ್ಲದೆ, ಮೃತಪಟ್ಟವರಿಂದ ಎರಡು ಪಿಸ್ತೂಲ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ” ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಮೂಲಗಳ ಪ್ರಕಾರ ಮೃತಪಟ್ಟ ಇಬ್ಬರೂ ಉಗ್ರರು ಕಣಿವೆ ರಾಜ್ಯದ ಕುಲ್ಗಂ ಜಿಲ್ಲೆಯವರಾಗಿದ್ದು, ಇತ್ತೀಚೆಗೆ ಉಗ್ರಗಾಮಿ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊರೋನಾ ಆರ್ಭಟ; ಸಿಎಂ ಕೇಜ್ರಿವಾಲ್‌-ಲೆಫ್ಟಿನೆಂಟ್‌ ಗವರ್ನರ್‌ ಜೊತೆ ನಾಳೆ ಅಮಿತ್‌ ಶಾ ಸಭೆ

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕೊ ಅವರ ಮರಣದ ನಂತರ, ದಕ್ಷಿಣ ಕಾಶ್ಮೀರದ ಭದ್ರತಾ ಪಡೆಗಳು ತಮ್ಮ ಉಗ್ರ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಹಲವಾರು ಹಿರಿಯ ಕಮಾಂಡರ್ಗಳು ಸೇರಿದಂತೆ ಡಜನ್ ಗಟ್ಟಲೆ ಉಗ್ರರು ವಿವಿಧ ಕಾರ್ಯಾಚರಣೆಗಳಲ್ಲಿ ಸೇನಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಇಂತಹ ಸೇನಾ ಕಾರ್ಯಾಚರಣೆಗಳಿಂದಾಗಿ ದಕ್ಷಿಣ ಕಾಶ್ಮೀರ ಭಾಗದಲ್ಲಿ ಉಗ್ರರ ಚಟುವಟಿಕೆ ತಹಬಂದಿದೆ ಬಂದಿದೆ ಎನ್ನಲಾಗುತ್ತಿದೆ.
First published: