ಸಾಮಾನ್ಯವಾಗಿ ದೇಶದ ರಾಷ್ಟ್ರಪತಿ ಅಥವಾ ಪ್ರಧಾನಿ ಅವರ ಕಚೇರಿ ಇಲ್ಲವೆ ನಿವಾಸ ಎಂದರೆ ಅಲ್ಲಿನ ಭದ್ರತೆಯ ಬಗ್ಗೆ ಹೇಳುವುದೇ ಬೇಡ, ಒಂದು ಚಿಕ್ಕ ಪಕ್ಷಿಯೂ (Bird) ಸಹ ಹಾರಲಾರದಂತಹ ಕಟುವಾದ ಭದ್ರತೆ ಅಲ್ಲಿರುತ್ತದೆ ಎಂದರೂ ತಪ್ಪಿಲ್ಲ. ಹಾಗಾಗಿ ಸಾಮಾನ್ಯ ಮನುಷ್ಯರಾದವರು ಅಲ್ಲಿರುವ ಫೆನ್ಸ್ ಅಥವಾ ಬೇಲಿಯನ್ನು ಸರಳವಾಗಿ ದಾಟಿ ಹೋಗುವ ಪ್ರಮೆಯವೇ ಇರುವುದಿಲ್ಲ. ಇನ್ನು ಅಮೇರಿಕಾದ ಅಧ್ಯಕ್ಷರ ನಿವಾಸ ಎಂದರೆ ಕೇಳಬೇಕೆ? ಬಹುಶಃ ಜಗತ್ತಿನಲ್ಲಿ (World) ಎಲ್ಲೂ ಕಾಣಲಾಗದಂತಹ ಸುರಕ್ಷತೆ ಅಲ್ಲಿರುತ್ತದೆ ಎಂದರೆ ತಪ್ಪಾಗಲಾರದು. ಅಮೇರಿಕಾದ ಶ್ವೇತ ಭವನವನ್ನು(Whitehouse) ಸುಲಭವಾಗಿ ದಾಟಿಕೊಂಡು ಹೋಗಬಹುದು ಎಂದರೆ ಅದಕ್ಕಿಂತ ದೊಡ್ಡದಾದ ಸವಾಲು ಯಾವುದು ಇರಲಿಕ್ಕಿಲ್ಲ.
ಆದಾಗ್ಯೂ ಕೆಲವೊಮ್ಮೆ ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ. ಕಳೆದ ಮಂಗಳವಾರದಂದು ಸಹ ಅಮೆರಿಕದ ಅಧ್ಯಕ್ಷರು ವಾಸಿಸುವ ವ್ಹೈಟ್ ಹೌಸ್ ನ ಅಂಗಳದಲ್ಲಿ ಪುಟ್ಟ ಮಗುವೊಂದು ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿ ಬಂದಿರುವ ಘಟನೆ ವರದಿಯಾಗಿದೆ.
ನಾನು ನಮ್ಮ ಅಧ್ಯಕ್ಷರನ್ನು ನೋಡಬೇಕು ಎನ್ನುವ ಕುತೂಹಲದಿಂದಲೋ ಏನೋ ಅನ್ನುವಂತೆ ಪುಟ್ಟ ಮಗುವೊಂದು ಉಕ್ಕಿನ ಬೇಲಿಯ ಸರಳುಗಳ ಮೂಲಕ ನಿರಾಯಾಸವಾಗಿ ಜಾರಿ ವ್ಹೈಟ್ ಹೌಸ್ ಅನ್ನು "ಅನಧಿಕೃತವಾಗಿ" ಪ್ರವೇಶಿಸಿ ಅಲ್ಲಿರುವ ಭದ್ರತಾ ಸಿಬ್ಬಂದಿ ಕ್ಷಣಕಾಲ ತಬ್ಬಿಬ್ಬಾಗುವಂತೆ ಮಾಡಿದೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಯ ಬಂಧನ
ಮಗು ಪ್ರವೇಶಿಸಿದ ನಂತರ ಎಚ್ಚೆತ್ತ ಭದ್ರತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಮಗುವನ್ನು ವಶಕ್ಕೆ ಪಡೆದು ತದನಂತರ ಆ ಮಗುವನ್ನು ಅದರ ಪಾಲಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಬಿಸಿ ಮಾಧ್ಯಮ ವರದಿ ಮಾಡಿದೆ.
ಮಗು ಹೀಗೆ ಅಚಾನಕ್ಕಾಗಿ ಶ್ವೇತಭವನವನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಅಲ್ಲಿಯೇ ಕಾರ್ಯನಿರತರಾಗಿದ್ದರು ಎಂದು ತಿಳಿದುಬಂದಿದ್ದು ತಕ್ಷಣ ಭದ್ರತಾ ಸಿಬ್ಬಂದಿ ಈ ಪುಟ್ಟ ಕೂತಹಲಕಾರಿ ಅತಿಥಿಯನ್ನು ವಶಕ್ಕೆ ಪಡೆದು ನಂತರ ಪೆನ್ಸಿಲ್ವೇನಿಯಾ ಅವೆನ್ಯೂನಲ್ಲಿ ಅದರ ಪಾಲಕರಿಗೆ ಹಸ್ತಾಂತರಿಸಿದ್ದಾರೆಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಶ್ವೇತ್ತಭವನದಲ್ಲಿ ಇತರರ ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲ ಕಾಲ ಅಡಚಣೆಯುಂಟಾಗಿತ್ತು. ನಂತರ ಮಗುವಿನ ಪೋಷಕರ ಸಂಕ್ಷಿಪ್ತವಾದ ವಿಚಾರಣೆ ಬಳಿಕ ಅವರಿಗೆ ಮಗುವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ರಹಸ್ಯ ಕಾರ್ಯಾಚರಣೆಯ ವಕ್ತಾರರಾದ ಅಂಥೋನಿ ಗುಗ್ಲಿಯೆಲ್ಮಿ ಅವರು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸುತ್ತ, "ನಾವು ಇಂದು ಆಕಸ್ಮಿಕವಾಗಿ ಕುತೂಹಲಭರಿತ ಚಿಕ್ಕ ಅತಿಥಿಯೊಬ್ಬರು ಉತ್ತರದಲ್ಲಿರುವ ಭದ್ರತಾ ಬೇಲಿಯ ಮೂಲಕ ಶ್ವೇತ ಭವನದ ಆವರಣದ ಹಸಿರು ಹಾಸಿಗೆಯ ಮೇಲೆ ಬರುತ್ತಿರುವುದನ್ನು ಕಂಡೆವು" ಎಂದಿದ್ದಾರೆ.
ಕೂಡಲೇ ಭವನದ ಸುರಕ್ಷತಾ ವ್ಯವಸ್ಥೆ ಸಕ್ರಿಯಗೊಂಡು ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯ ತತ್ಪರಾದರು ಹಾಗೂ ಆ ಪುಟ್ಟ ಅಥಿತಿಯನ್ನು ಜೋಪನಾವಗಿ ವಶಕ್ಕೆ ಪಡೆದು ತದನಂತರ ಸುರಕ್ಷಿತವಾಗಿ ಅದರ ಪೋಷಕರಿಗೆ ಅದನ್ನು ಒಪ್ಪಿಸಲಾಯಿತು ಎಂದು ವಕ್ತಾರರು ಅಸೋಸಿಯೆಟೇಡ್ ಪ್ರೆಸ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹುತಾತ್ಮರ ಕುಟುಂಬಕ್ಕೆ ತಲಾ 1 ಕೋಟಿ ರೂ ಪರಿಹಾರ ಘೋಷಿಸಿದ ಪಂಜಾಬ್ ಸಿಎಂ
ಸುದ್ದಿ ಮಾಧ್ಯಮವೊಂದರ ಪ್ರಕಾರ, ಈ ಪುಟ್ಟ ಮಗುವಿನ ಶ್ವೇತಭವನದಲ್ಲಿನ ಪ್ರವೇಶ ಅಚ್ಚರಿಯ ಸಂಗತಿಯಾಗಿದೆ. ಏಕೆಂದರೆ ಇತ್ತೀಚಿಗಷ್ಟೆ ಶ್ವೇತ ಭವನದ ಫೆನ್ಸ್ ಎತ್ತರವನ್ನು ದ್ವಿಗುಣಗೊಳಿಸಲಾಗಿತ್ತು. ಅಲ್ಲದೆ ಈ ಸಮ್ದರ್ಭದಲ್ಲಿ ಪ್ರತಿ ಕಂಬಗಳ ಮಧ್ಯದ ಅಂತರವೂ ಒಂದಿಂಚಿನಷ್ಟು ಅಗಲವಾಗಿತ್ತು ಎಂದು ಉಲ್ಲೇಖಿಸಿದೆ.
ಸುಮಾರು ಹತ್ತು ವರ್ಷಗಳ ಹಿಂದೆಯೂ ಇದೇ ರೀತಿಯ ಒಂದು ಘಟನೆ ನಡೆದಿತ್ತು ಹಾಗೂ ಪುಟ್ಟ ಮಗುವೊಂದು ಫೆನ್ಸ್ ಮೂಲಕ ಒಳಗೆ ದಾಖಲಾಗಿ ’ಫೆನ್ಸ್ ಬೇಬಿ’ ಎಂಬ ನಾಮಖ್ಯಾತಿಯನ್ನು ಗಳಿಸಿತ್ತು. ಒಟ್ಟಿನಲ್ಲಿ ಪುಟ್ಟ ಮಗು ಅನಧಿಕೃತವಾಗಿ ಪ್ರವೇಶಿಸಿತ್ತಾದರೂ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಮತ್ತೆ ತನ್ನ ಪೋಷಕರ ಮಡಿಲು ಸೇರಿದ್ದೆ ನೆಮ್ಮದಿಯ ವಿಷಯ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ