ಕೊಚ್ಚಿ (ಡಿಸೆಂಬರ್ 31); ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದ ರೈತರು ಕಳೆದ 35 ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ರೈತ ಹೋರಾಟಕ್ಕೆ ದಿನದಿಂದ ದಿನಕ್ಕೆ ರಾಷ್ಟ್ರವ್ಯಾಪಿ ಬೆಂಬಲ ಹೆಚ್ಚಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಮಸೂದೆಗಳ ವಿರುದ್ಧ ದೆಹಲಿ ಮತ್ತು ಪಂಜಾಬ್ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿರುವ ಬೆನ್ನಿಗೆ ಕೇರಳ ಸರ್ಕಾರವೂ ಸಹ ಇಂದು ನಿರ್ಣಯ ಮಂಡಿಸಿದೆ. ಕೇರಳ ವಿಧಾನಸಭೆಯಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದ್ದಾರೆ. ವಿಶೇಷವೆಂದರೆ ಈ ನಿರ್ಣಯ ಅವಿರೋಧವಾಗಿ ಅಂಗೀಕಾರವಾಗಿದ್ದು, ಕೇರಳದ ಏಕೈಕ ಬಿಜೆಪಿ ಶಾಸಕ ಓ. ರಾಜಗೋಪಾಲ್ ಸಹ ಕೃಷಿ ಕಾಯ್ದೆಗಳ ವಿರುದ್ಧದ ನಿರ್ಣಯವನ್ನು ಬೆಂಬಲಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಕೇರಳ ವಿಧಾನಸಭಾ ಸ್ಫಿಕರ್ ಪಿ ಶ್ರೀರಾಮಕೃಷ್ಣನ್ ಅವರು ಧ್ವನಿ ಮತದಾನದ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಈ ವೇಳೆ ನೆಮೋಮ್ ಕ್ಷೇತ್ರದ ಬಿಜೆಪಿ ಶಾಸಕ ಓ ರಾಜಗೋಪಾಲ್ ರವರು ಕೃಷಿ ಕಾನೂನುಗಳ ಕೆಲವು ಅಂಶಗಳನ್ನು ಸಮರ್ಥಿಸಿಕೊಂಡರು. ಆದರೆ, ಅವರು ನಿರ್ಣಯದ ಮೇಲಿನ ಮತದಾನದ ವೇಳೆ ಕೇರಳ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಬಿಜೆಪಿ ನಾಯಕರಿಗೆ ಆಘಾತ ನೀಡಿದ್ದಾರೆ ಎನ್ನಲಾಗುತ್ತಿದೆ.
Kerala Chief Minister Pinarayi Vijayan moves resolution against Centre's farm laws in the special Session of State Assembly. https://t.co/0PbHgLCIRi pic.twitter.com/LgytHPXib6
— ANI (@ANI) December 31, 2020
ನೀವು ಮತ ಹಾಕಿದ ನಿರ್ಣಯವು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಒತ್ತಾಯಿಸುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು 'ಖಂಡಿತವಾಗಿಯೂ ತಿಳಿದಿದೆ' ಎಂದು ಉತ್ತರಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಹೋರಾಟನಿರತ ರೈತರನ್ನು ಬೆಂಬಲಿಸಲು, ಹೋರಾಟಕ್ಕೆ ಸಹಮತ ವ್ಯಕ್ತಪಡಿಸಲು ಕರೆದ ಒಂದು ತಾಸಿನ ವಿಶೇಷ ಅಧಿವೇಶನದಲ್ಲಿ ಸಿಎಂ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದರು. ದೇಶವು ಈ ಅಪ್ರತಿಮ ರೈತ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಸಂಸತ್ತಿನಲ್ಲಿ ಅಂಗೀಕಾರವಾದ ಕಾಯ್ದೆಗಳು ಕೇವಲ ರೈತ ವಿರೋಧಿಯಷ್ಟೇ ಅಲ್ಲ, ಅವು ಕಾರ್ಪೋರೇಟ್ ಪರವಾಗಿವೆ. ಈಗಾಗಲೇ ಪ್ರತಿಭಟನಾ ನಿರತ 32 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ