Jammu & Kashmir: ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ!; ಸ್ಕೂಲ್ ಮೇಲೆ ಅಟ್ಯಾಕ್, ಇಬ್ಬರು ಶಿಕ್ಷಕರ ಹತ್ಯೆ!

ಇಲ್ಲಿನ ಬಾಲಕರ ಹೈಯರ್‌ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸತಿಂದರ್ ಕೌರ್‌ ಮತ್ತು ಶಿಕ್ಷಕ ದೀಪಕ್‌ ರಕ್ಕಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಶಿಕ್ಷಕರನ್ನ ಗುಂಡಿಕ್ಕಿ ಕೊಂದು ರಣಹೇಡಿಗಳಂತೆ ಉಗ್ರರು ಪರಾರಿಯಾಗಿದ್ದಾರೆ.

ಶಾಲೆಯ ಬಳಿ ಪೊಲೀಸರು

ಶಾಲೆಯ ಬಳಿ ಪೊಲೀಸರು

 • Share this:
  ಕಾಶ್ಮೀರದಲ್ಲಿ(Jammu and Kashmir) ಮತ್ತೆ ಕೆಲದಿನಗಳಿಂದ ಉಗ್ರರು(Militants) ಅಟ್ಟಹಾಸ ಮೆರೆಯುತ್ತಿದ್ದಾರೆ. ಇಲ್ಲಿ ಕೆಲದಿನಗಳಿಂದ ತಣ್ಣಗಾಗಿದ್ದ ಗುಂಡಿನ ಮೊರೆತ, ಈಗ ಮತ್ತೆ ಜೋರಾಗಿದೆ. ಅಫ್ಘಾನಿಸ್ತಾನ(Afghanistan)ದ ಮೇಲೆ ತಾಲಿಬಾನ್(Taliban) ಹಿಡಿತ ಸಾಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ(Jammu Kashmir)ದಲ್ಲಿ ಪಾಕಿಸ್ತಾನ(Pakistan) ಮೂಲದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ.

  ಅಕ್ಟೋಬರ್ 5ರಂದು ಕಾಶ್ಮೀರದಲ್ಲಿ ಉಗ್ರರು ಕ್ರೌರ್ಯ ಮೆರೆದಿದ್ದರು. ಉಗ್ರರ ದಾಳಿಗೆ ಮೂವರು ಅಮಾಯಕರು ಬಲಿಯಾಗಿದ್ದರು. ಮತ್ತೆ ಇಂದು ಬೆಳಗ್ಗೆ ಶ್ರೀನಗರದ ಸರ್ಕಾರಿ ಶಾಲೆಗೆ ನುಗ್ಗಿದ ಭಯೋತ್ಪಾದಕರು, ಇಬ್ಬರು ಹಿಂದೂ ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈಡ್ಗಾ ಸಂಗಮ್‌ ಪ್ರದೇಶದಲ್ಲಿರುವ ಶಾಲೆಯಲ್ಲಿ ಉಗ್ರರ ದಾಳಿ ನಡೆದಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಬಾಲಕರ ಹೈಯರ್‌ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸತಿಂದರ್ ಕೌರ್‌ ಮತ್ತು ಶಿಕ್ಷಕ ದೀಪಕ್‌ ರಕ್ಕಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಶಿಕ್ಷಕರನ್ನ ಗುಂಡಿಕ್ಕಿ ಕೊಂದು ರಣಹೇಡಿಗಳಂತೆ ಉಗ್ರರು ಪರಾರಿಯಾಗಿದ್ದಾರೆ. ಶಾಲೆಯಲ್ಲಿ ಮೀಟಿಂಗ್ ಮಾಡುತ್ತಿದ್ದ ಶಿಕ್ಷಕರನ್ನ ಹೊರಗೆ ಕರೆತಂದು, ಶಾಲೆಯ ಮುಂಭಾಗದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

  ಮೀಟಿಂಗ್ ಮಾಡುತ್ತಿದ್ದವರ ಹತ್ಯೆ!

  ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕರ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ 5ರಿಂದ 6 ಶಿಕ್ಷಕರು ಮೀಟಿಂಗ್ ಮಾಡುತ್ತಿದ್ದರು. ಪ್ರಿನ್ಸಿಪಲ್ ಕಚೇರಿಯಲ್ಲಿ ಶಾಲೆ ಬಗ್ಗೆ ಚರ್ಚೆಯಾಗುತ್ತಿತ್ತು. ಏಕಾಏಕಿ ಶಾಲೆಗೆ ಎಂಟ್ರಿಯಾದ ಇಬ್ಬರು ಉಗ್ರರು , ಪ್ರಿನ್ಸಿಪಾಲ್ ಕಚೇರಿ ಒಳಗೆ ನುಗ್ಗಿದ್ದಾರೆ. ಅಲ್ಲಿದ್ದ ಮುಸ್ಲಿಮ್ ಶಿಕ್ಷಕರನ್ನು ಬೇರೆ ಮಾಡಿದ್ದಾರೆ. ಬಳಿಕ ಆ ಮುಸ್ಲಿಮ್ ಶಿಕ್ಷಕರನ್ನು ಹೊರಹೋಗುವಂತೆ ತಿಳಿಸಿ, ಇಬ್ಬರು ಹಿಂದೂ ಶಿಕ್ಷಕರನ್ನು ತಮ್ಮ ವಶಪಡಿಸಿಕೊಂಡಿದ್ದಾರೆ. ಬಳಿಕ ಅವರನ್ನ ಕಚೇರಿಯಿಂದ ಹೊರ ಕರೆದುಕೊಂಡು ಬಂದು, ಶಾಲೆಯ ಕಾಂಪೌಂಡ್ ಒಳಗೆ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಮುಖ್ಯೋಪಾಧ್ಯಾಯ ಸತಿಂದರ್ ಕೌರ್‌ ಮತ್ತು ಶಿಕ್ಷಕ ದೀಪಕ್‌ ಸ್ಥಳದಲ್ಲೇ ಅಸುನೀಗಿದ್ದಾರೆ.

  "ಭಯ ಸೃಷ್ಟಿಸಲು ಉಗ್ರರಿಂದ ದಾಳಿ"

  ಇನ್ನೂ ಘಟನೆ ನಡೆದ ಸ್ಥಳಕ್ಕೆ ಡಿಜಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. "ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಈ ದಾಳಿ ಹಿಂದೆ ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಶ್ಮೀರಿ ಮುಸ್ಲಿಮರ ಮಾನಹಾನಿ ಮಾಡುವ ಪಿತೂರಿಯಾಗಿದೆ. ಕೋಮುಗಲಭೆ ಸೃಷ್ಟಿಸಲು ಈ ರೀತಿಯ ಕೃತ್ಯಗಳನ್ನು ಉಗ್ರರು ಮಾಡುತ್ತಿದ್ದಾರೆ. ಪಾಕಿಸ್ತಾನದ ಏಜೆನ್ಸಿಗಳ ಸೂಚನೆ ಮೇರೆಗೆ ಉಗ್ರರು ಈ ದಾಳಿ ನಡೆಸಿದ್ದಾರೆ" ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

  ಉಗ್ರ ಕೃತ್ಯಕ್ಕೆ ಹಲವರ ಆಕ್ರೋಶ

  ಉಗ್ರರ ಕೃತ್ಯ ಖಂಡಿಸಿ ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಟ್ವೀಟ್ ಮಾಡಿದೆ. ಶ್ರೀನಗರಕ್ಕೆ ನುಗ್ಗಿ ಶಿಕ್ಷಕರನ್ನ ಕೊಂದಿರುವುದು ನಿಜಕ್ಕೂ ಭಯಾನಕವಾಗಿದೆ ಭಯ ಹುಟ್ಟಿಸಿದೆ.ಸಾವಿನ ಈ ನೃತ್ಯ ಯಾವಾಗ ಕೊನೆಗೊಳ್ಳುತ್ತದೆ.ಶಿಕ್ಷಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದೆ.ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಕೂಡ ಟ್ವಿಟರ್‌ನಲ್ಲಿ ಈ ದಾಳಿಯನ್ನು ಖಂಡಿಸಿದ್ದಾರೆ.ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದು ಬೇಡ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವರು ಘಟನೆಯನ್ನು ಖಂಡಿಸಿ ಕೂಡಲೇ ಉಗ್ರರನ್ನ ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.

  3 ದಿನ , 4 ಅಟ್ಯಾಕ್, 5 ಸಾವು!

  ಅಕ್ಟೋಬರ್ 5ರಂದು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಸಿದ್ದರು. ದಾಳಿಯಲ್ಲಿ ಖ್ಯಾತ ಕಾಶ್ಮೀರ ಪಂಡಿತ್​ ಉದ್ಯಮಿ ಮಖನ್​ ಲಾಲ್​ ಬಿಂದ್ರೂ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಇಂದು ಮತ್ತೆ ಶಾಲೆಗೆ ನುಗ್ಗಿದ ಶಿಕ್ಷಕರನ್ನು ಕೊಂದಿದ್ದಾರೆ. ಮೂರು ದಿನದ ಅಂತರದಲ್ಲಿ ನಾಲ್ಕು ಕಡೆ ದಾಳಿ ನಡೆಸಿರುವ ಭಯೋತ್ಪಾದಕರು, ಒಟ್ಟು ಐವರನ್ನು ಬಲಿ ಪಡೆದಿದ್ದಾರೆ.

  ವರದಿ - ವಾಸುದೇವ್. ಎಂ
  Published by:Latha CG
  First published: