ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ

ದಿಢೀರ್​​​ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಮೂರು ಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​​ನಲ್ಲಿ ನಡೆಯಲಿದೆ.

news18-kannada
Updated:November 24, 2019, 1:07 PM IST
ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ
ಸುಪ್ರೀಂ ಕೋರ್ಟ್​.
  • Share this:
ನವದೆಹಲಿ(ನ.24): ಶೀಘ್ರ ಬಹುಮತ ಸಾಬೀತಿಗೆ ಆದೇಶಿಸಿ ಎಂದು ಶಿವಸೇನೆ ಮತ್ತು ಕಾಂಗ್ರೆಸ್​-ಎನ್​​ಸಿಪಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದವು. ದಿಢೀರ್​​​ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಮೂರು ಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಕೀಲರ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ಅಂತಿಮ ತೀರ್ಪು ನಾಳೆಗೆ ಮುಂದೂಡಿದೆ. ಅಲ್ಲದೇ ರಾಜ್ಯಾಪಲರು ದೇವೇಂದ್ರ ಫಡ್ನವೀಸ್​​​​ಗೆ ಸಿಎಂ ಆಗುವುದಕ್ಕೆ ಅವಕಾಶ ಮಾಡಿಕೊಟ್ಟ ನಿರ್ಧಾರ ಪರಿಶೀಲಿಸಲಿದೆ. ಹಾಗೆಯೇ ಈ ಸಂಬಂಧ ದೇವೇಂದ್ರ ಫಡ್ನವೀಸ್​ ಹಾಗೂ ಎನ್​​ಸಿಪಿ ಅಜಿತ್​ ಪವಾರ್​​ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂಕೋರ್ಟ್​ ಸೂಚಿಸಿದೆ. ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸೇರಿದಂತೆ ಸಿಎಂ ಪ್ರಮಾಣ ವಚನ ಸಹಿತ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್​  ಗವರ್ನರ್​​ಗೆ ಆದೇಶಿಸಿದೆ. ಇದರಿಂದ ಸಿಎಂ ದೇವೇಂದ್ರ ಫಡ್ನವೀಸ್​​​ ನೇತೃತ್ವದ ಬಿಜೆಪಿ ತಾತ್ಕಲಿಕ ರಿಲೀಫ್​​ ಸಿಕ್ಕಂತಾಗಿದೆ.

ಮೊದಲಿಗೆ ಶಿವಸೇನೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂಭಾಗ ಕಪಿಲ್​​ ಸಿಬಲ್​​ ಮಹಾರಾಷ್ಟ್ರದ ಸಂಖ್ಯಾಬಲ ವಿವರಿಸಿದರು. ರಾಜ್ಯಪಾಲರು ಬಿಜೆಪಿಗೆ 48 ದಿನ ಅವಕಾಶ ನೀಡಿದ್ದರು. ಎನ್​​​ಸಿಪಿ ಮತ್ತು ಶಿವಸೇನೆಗೆ ಸಮಯಾವಕಾಶ ನೀಡಲಿಲ್ಲ. ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಇದ್ದದೇ ಬೇರೆ. ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೋತ್ತರ ಮೈತ್ರಿಯಾಗಿದೆ. ಶಿವಸೇನೆ-ಕಾಂಗ್ರೆಸ್​​ ಮತ್ತು ಎನ್​​ಸಿಪಿ ಮೈತ್ರಿ ಮಾಡಿಕೊಂಡಿವೆ ಎಂದರು.

ನಿನ್ನೆ ಬೆಳಗ್ಗೆ 5.47ಕ್ಕೆ ದಿಢೀರನೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಸೇರದೆ ಹಿಂಪಡೆಯಲಾಗಿದೆ. ಅಂಥ ರಾಷ್ಟ್ರೀಯ ತುರ್ತು ಏನಿತ್ತು? ಬಳಿಕ ತರಾತುರಿಯಲ್ಲಿ ಸಿಎಂ, ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರು ದುರುದ್ದೇಶಪೂರಿತವಾಗಿ ನಡೆದುಕೊಂಡಿದ್ದಾರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಹೇಳಿ. ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತು ಪಡಿಸಲಿ. ರಾಜ್ಯಪಾಲರ ಆಹ್ವಾನವೂ ಅಧಿಕೃತವಾಗಿ ಇಲ್ಲ. ಸಿಎಂ-ಡಿಸಿಎಂ ಪ್ರಮಾಣ ವಚನಕ್ಕೆ ಅವೆಲ್ಲಾ ಪ್ರಕ್ರಿಯೆಗಳು ಹೇಗೆ ನಡೆಯಿತೆಂಬುದೇ ಗೊತ್ತಿಲ್ಲ. ಯಾವೂದಕ್ಕೂ ಅಧಿಕೃತವಾದ ದಾಖಲೆಗಳಿಲ್ಲ ಎಂದು ಕಪಿಲ್​​ ಸಿಬಲ್​​ ವಾದ ಮಂಡಿಸಿದರು.

ಇದನ್ನೂ ಓದಿ: 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ

ಇನ್ನು ಕರ್ನಾಟಕದ ಪ್ರಕರಣ ಉಲ್ಲೇಖಿಸಿದ ಕಪಿಲ್ ಸಿಬಲ್,  ಮೇ 2018ರಲ್ಲಿ ಕರ್ನಾಟಕದಲ್ಲೂ ಹೀಗೆ ಆಗಿತ್ತು. ರಾಜ್ಯಪಾಲರು ಯಡಿಯೂರಪ್ಪಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸುಪ್ರೀಂಕೋರ್ಟ್ 24 ಗಂಟೆಯೊಳಗೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿತ್ತು. ಮಹಾರಾಷ್ಟ್ರ ರಾಜ್ಯಪಾಲರು ಈವರೆಗೆ ಪತ್ರ ಬರೆದಿಲ್ಲ. ವಿಶ್ವಾಸಮತ ಯಾಚನೆಗೆ ಈವರೆಗೆ ಪತ್ರ ಬರೆದಿಲ್ಲ. ನನಗೆ ಮಧ್ಯರಾತ್ರಿ ನೋಟಿಸ್ ಬಂದಿದೆ. ಹೆಚ್ಚಿನ ಸಮಯಾವಕಾಶ ಬೇಕು ಎಂದು ಪ್ರಸ್ತಾಪಿಸಿದರು

ಇನ್ನು ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ವಾದ ಶುರು ಮಾಡಿದರು. ಈ ಪ್ರಕರಣವನ್ನು ಸುಪ್ರೀಂ ವಿಚಾರಣೆ ನಡೆಸಲೇಬಾರದು. ರಾಜ್ಯಪಾಲರು ಸಂವಿಧಾನಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದರು.

ಇದೇ ವೇಳೆ ಮಧ್ಯ ಪ್ರವೇಶಿಸಿದ ಶಿವಸೇನೆ ಪರ ವಕೀಲ ಕಪಿಲ್​​ ಸಿಬಲ್​​​, ಮಹಾರಾಷ್ಟ್ರ ಜನರಿಗೆ ಬೇಗ ಸರ್ಕಾರ ಬರಬೇಕಿದೆ. ಬೇಗ ವಿಶ್ವಾಸಮತ ಯಾಚನೆ ಮಾಡಲು ಹೇಳಿ. ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತುಪಡಿಸಲಿ. ಇಲ್ಲದಿದ್ದರೆ ನಾವು ವಿಶ್ವಾಸಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿದರು.ಈ ಬೆನ್ನಲ್ಲೇ ವಾದ ಮಂಡಿಸಿದ ಕಾಂಗ್ರೆಸ್​​ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನ.22ರಂದು ಕಾಂಗ್ರೆಸ್, ಎನ್​​​ಸಿಪಿ, ಶಿವಸೇನೆ ಮೈತ್ರಿ ಆಗಿದೆ. ಇದನ್ನು ಪತ್ರಿಕಾಗೋಷ್ಠಿ ಮೂಲಕ ಬಹಿರಂಗ ಪಡಿಸಲಾಗಿದೆ. ಆದರೂ ರಾಜ್ಯಪಾಲರು ಬಿಜೆಪಿಗೆ ಹೇಗೆ ಅವಕಾಶ ಕೊಟ್ಟರು? ಈಗ ಎನ್​​ಸಿಪಿ ಅಜಿತ್ ಪವಾರ್​​ರನ್ನು ಉಚ್ಛಾಟಿಸಿದೆ. ನಿನ್ನೆ ಮಧ್ಯಾಹ್ನವೇ 3.30ಕ್ಕೆ ಉಚ್ಛಾಟನೆ ಮಾಡಲಾಗಿದೆ. ಅದೇಗೆ ಎನ್​​ಸಿಪಿ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಶರದ್ ಪವಾರ್ ಮೇಲೆ ಅನುಮಾನ ಪಡಲು ಕಾರಣಗಳೇ ಇಲ್ಲ; ಎನ್​ಸಿಪಿಯ ಅಜಿತ್ ಬಿಜೆಪಿ ಜತೆ ಕೈಜೋಡಿಸಿದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ

ಕರ್ನಾಟಕದ ಪ್ರಕರಣ ಉಲ್ಲೇಖಿಸಿ ಅಭಿಷೇಕ್ ಮನು ಸಿಂಘ್ವಿ, ಎಸ್.ಆರ್. ಬೊಮ್ಮಾಯಿ ಪ್ರಕರಣ ಪ್ರಸ್ತಾಪಿಸಿದರು. ಈ ಪ್ರಕರಣ ಅತ್ಯುತ್ತಮ ವಿಧಾನ ಎಂದು ಹೇಳಲಾಗಿದೆ. ಪದೇ ಪದೇ ಕರ್ನಾಟಕದ ಘಟನಾವಳಿಗಳನ್ನು ಸ್ಮರಿಸುತ್ತಿರುವ ವಕೀಲರು, ಬೊಮ್ಮಾಯಿ ಪ್ರಕರಣದಲ್ಲಿ ಹೇಳಿದಂತೆ ಮಹಾರಾಷ್ಟ್ರದಲ್ಲಿ ವಿಶ್ವಾಸಮತಯಾಚನೆಯಾಗಲಿ ಎಂದು ಆಗ್ರಹಿಸಿದರು.

ಇನ್ನು ಕರ್ನಾಟಕ ಪ್ರಕರಣದ ತೀರ್ಪಿನ ಆದೇಶ ಓದುತ್ತಿರುವ ನ್ಯಾ. ರಮಣ ಅವರು, ಆಗ 2018 ಮೇ 17ರಂದು ಪ್ರಮಾಣ ವಚನವಾಗಿತ್ತು. 18ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. 19 ವಿಶ್ವಾಸಮತ ಯಾಚನೆ ಆಗಿತ್ತು. ಮಹಾರಾಷ್ಟ್ರ ಪ್ರಕರಣದಲ್ಲೂ ಹೀಗೆ ಆಗಲಿ. ನಿನ್ನೆ ನಡೆದ ಎನ್​​ಸಿಪಿ ಶಾಸಕಾಂಗ ಸಭೆಯಲ್ಲಿ 41 ಶಾಸಕರ ಸಹಿ ಇದೆ. ಬಿಜೆಪಿ 54 ಸದಸ್ಯರ ಎನ್​​​ಸಿಪಿ ಬೆಂಬಲ ಇದೆ ಎಂದಿದೆ.  ಇದು ಸಾಬೀತಿಗೆ ವಿಶ್ವಾಸಮತಯಾಚನೆ ಆಗಬೇಕು. ಇದು ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಜವಾಬ್ದಾರಿ ಎಂದರು.

ಮತ್ತೆ ಬಿಜೆಪಿ ಪರ ವಾದ ಆರಂಭಿಸಿದ ವಕೀಲ ಮುಕುಲ್ ರೋಹಟಗಿ, ನಮಗೆ 3 ದಿನ ಸಮಯಾವಕಾಶ ಕೊಡಿ.  ಸರಿಯಾದ ಪ್ರತ್ಯುತ್ತರ ನೀಡಲಿದ್ದೇವೆ. ರಾಜ್ಯಪಾಲರಿಗೆ ಮನವರಿಕೆಯಾಗಬೇಕು. ಮನವರಿಕೆಯಾದರೆ ಪ್ರಮಾಣವಚನ ಬೋಧಿಸಬಹುದು. ರಾಜ್ಯಪಾಲರಿಗೆ ಕೋರ್ಟ್ ನಿರ್ದೇಶನ ನೀಡುವಂತಿಲ್ಲ. ನಿನ್ನೆ ತೆಗೆದುಕೊಂಡ ನಿರ್ಧಾರ ಕೋರ್ಟ್ ವ್ಯಾಪ್ತಿಗೆ ಬರಲ್ಲ. ರಾಜ್ಯಪಾಲರು ತಮ್ಮ ವಿವೇಚಾನಾಧಿಕಾರ ಬಳಿಸಿ ಪ್ರಮಾಣವಚನ ಬೋಧಿಸಿದ್ದಾರೆ. ಸಂವಿಧಾನದ 361ನೇ ವಿಧಿ ಪ್ರಕಾರವೇ ಅವರು ನಡೆದುಕೊಂಡಿದ್ದಾರೆ. ರಾಜ್ಯಪಾಲರಿಗೆ ನಿರ್ದೇಶನ ನೀಡಿ ಎಂದು ಕೇಳುತ್ತಿರುವ ಇಂಥ ಅರ್ಜಿಯನ್ನು ನಾನು ನೋಡಿರಲಿಲ್ಲ. ಮೊದಲನೇಯದಾಗಿ ಭಾನುವಾರವೂ ಇವರು ನಿಮಗೆ ತೊಂದರೆ ಕೊಡುತ್ತಿದ್ದಾರೆ. ನ್ಯಾಯಾಂಗವೂ ಶಾಸಕಾಂಗವನ್ನು ಗೌರವಿಸಬೇಕು. ಶಾಸಕಾಂಗವೂ ನ್ಯಾಯಾಂಗವನ್ನು ಗೌರವಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ

ಆಗ ನೀವು ಈ ರೀತಿ ವಾದ ಮಾಡುತ್ತಿರುವುದು ಅಚ್ಚರಿ ತರುತ್ತಿದೆ ಎಂದು ರೋಹಟಗಿಗೆ ನ್ಯಾಯಮೂರ್ತಿ ಪ್ರಶ್ನಿಸಿದರು. ಇದಕ್ಕೆ ಹಂಗಾಮಿ ಸ್ಪೀಕರ್ ಆಯ್ಕೆ ಮಾಡುವುದಕ್ಕೂ ಸುಪ್ರೀಂಕೋರ್ಟ್ ಸೂಚನೆ ನೀಡಬೇಕಾ? ಸ್ಪೀಕರ್ ಆಯ್ಕೆ ಸದನದ ವಿಷಯ. ವಿಶ್ವಾಸಮತಯಾಚನೆಗೆ ಸೂಕ್ತ ಕಾಲವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬಳಿಕ ಎರಡು ಕಡೆ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ನಾಳೆಗೆ ಪ್ರಕರಣದ ಅಂತಿಮ ತೀರ್ಪು ಮುಂದೂಡಿದೆ.
First published: November 24, 2019, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading