ರಫೇಲ್ ಡೀಲ್: ‘ಸೋರಿಕೆ ದಾಖಲೆ’ಗಳ ಪರಿಶೀಲನೆ ಮಾಡಬೇಕಾ? ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳಲ್ಲಿ ಮೊದಲ ಮೂರು ಪುಟಗಳನ್ನು ಪರಿಶೀಲನೆಯಿಂದ ಕೈಬಿಡಬೇಕೆಂದು ಸರಕಾರ ಕೋರಿಕೊಂಡಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಕಾಯ್ದಿರಿಸಿದೆ.

Vijayasarthy SN | news18
Updated:March 14, 2019, 5:03 PM IST
ರಫೇಲ್ ಡೀಲ್: ‘ಸೋರಿಕೆ ದಾಖಲೆ’ಗಳ ಪರಿಶೀಲನೆ ಮಾಡಬೇಕಾ? ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ರಫೇಲ್ ಹಗರಣ
Vijayasarthy SN | news18
Updated: March 14, 2019, 5:03 PM IST
ನವದೆಹಲಿ(ಮಾ. 14): ರಫೇಲ್ ಹಗರಣದಲ್ಲಿ ಈ ಹಿಂದೆ ನೀಡಲಾಗಿದ್ದ ತೀರ್ಪನ್ನು ಮರಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇವತ್ತೂ ನಡೆಸಿತು. ಮರುಪರಿಶೀಲನೆಗೆಂದು ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳಲ್ಲಿ ಸೋರಿಯಾದ ದಾಖಲೆಗಳನ್ನೂ ಪರಿಶೀಲಿಸಬೇಕೋ ಬೇಡವೋ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಈ ಸಂಬಂಧ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಸರಕಾರ ಗೌಪ್ಯತೆ ಪಾಲಿಸಬೇಕೆಂದುಕೊಂಡಿದ್ದ ದಾಖಲೆಗಳನ್ನು ಕದ್ದು ತೆಗೆದುಕೊಂಡಿದ್ದು ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸುಪ್ರೀಂ ಕೋರ್ಟ್ ಎದುರು ಸರಕಾರದ ವಾದ ಮುಂದುವರಿಸಿತು. ರಫೇಲ್ ಒಪ್ಪಂದದಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಸರಕಾರ ತಾನು ಸಿಎಜಿ ವರದಿಯನ್ನು ಮಂಡಿಸಿ ತಪ್ಪು ಮಾಡಿದೆವು ಎಂದು ಹೇಳಿಕೊಂಡಿದೆ.

ಒಪ್ಪಂದದ ಕೆಲ ಪುಟಗಳನ್ನ ಫೋಟೋಕಾಪಿ ಮಾಡಿ ಆ ಪ್ರತಿಯನ್ನು ಅರ್ಜಿದಾರರು ಲಗತ್ತಿಸಿರುವುದಕ್ಕೆ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಫೋಟೋಕಾಪಿ ಮಾಡುವ ಮೂಲಕ ಕಳ್ಳತನ ಮಾಡಿದ್ಧಾರೆ. ಆ ಪ್ರಮುಖ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ದೇಶದ ಭದ್ರತೆಯನ್ನು ಅಪಾಯಕ್ಕೆ ತಳ್ಳಿದ್ದಾರೆ ಎಂದು ಸರಕಾರದ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಲ್ಲಿ ಮೊದಲ ಮೂರು ಪುಟಗಳನ್ನು ಮರುಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿಡಬೇಕು. ಈ ಮೂರು ಪುಟಗಳನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗೌಪ್ಯವಾಗಿಡುವುದು ಅಗತ್ಯವಿದೆ ಎಂದು ಸರಕಾರದ ಪರವಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು ಕೇಂದ್ರಕ್ಕೆ ಆರ್​ಟಿಐ ಕಾಯ್ದೆಯ ವ್ಯಾಪ್ತಿಯನ್ನು ಮನವರಿಕೆ ಮಾಡಿಕೊಟ್ಟಿತು. ಭ್ರಷ್ಟಾಚಾರದ ಆರೋಪ ಬಂದಾಗ ಸೂಕ್ಷ್ಮ ಮಾಹಿತಿ ಇರುವ ದಾಖಲೆಗಳನ್ನೂ ಪಡೆಯುವ ಹಕ್ಕು ಆರ್​ಟಿಐ ನೀಡುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಹಾಗೆಯೇ, ಈ ಹಿಂದೆ ಹಲವಾರು ರಕ್ಷಣಾ ಒಪ್ಪಂದಗಳ ಸಂಬಂಧ ಸರಕಾರವೇ ವರದಿಯನ್ನು ನೀಡಿರುವಾಗ ಈಗ ರಫೇಲ್ ಒಪ್ಪಂದದಲ್ಲಿ ಗೌಪ್ಯತೆ ಪಾಲಿಸುವ ಅಗತ್ಯವೇನಿದೆ? ಎಂದು ಸರಕಾರಕ್ಕೆ ಕೋರ್ಟ್ ಪ್ರಶ್ನೆ ಹಾಕಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ವಿಯೆಟ್ನಾಮ್ ಯುದ್ಧ ಸಂಬಂಧಿತ ರಕ್ಷಣಾ ವಿಭಾಗದ ದಾಖಲೆಗಳನ್ನು ಬಹಿರಂಗಗೊಳಿಸಲಾಗಿದ್ದ ಪ್ರಕರಣವನ್ನು ಉಲ್ಲೇಖಿಸಿದರು. ಮತ್ತೊಬ್ಬ ಅರ್ಜಿದಾರ ಅರುಣ್ ಶೌರಿ ಅವರು, ಕಳುವಾದ ದಾಖಲೆಗಳನ್ನು ಫೋಟೋಕಾಪಿ ಎಂದು ಕರೆಯುವ ಮೂಲಕ ಈ ದಾಖಲೆಗಳು ಸತ್ಯವೆಂಬುದನ್ನು ಸರಕಾರವೇ ಒಪ್ಪಿಕೊಂಡಿದೆ ಎಂದು ವಾದ ಮಂಡಿಸಿದರು.ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಲ್ಲಿ ಮೊದಲ ಮೂರು ಪುಟಗಳನ್ನು ಪರಿಶೀಲನೆಯಿಂದ ಕೈಬಿಡಬೇಕೆಂದು ಸರಕಾರ ಮಾಡಿಕೊಂಡ ಮನವಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ತಮ್ಮ ನಿರ್ಧಾರವನ್ನು ಕಾಯ್ದಿರಿಸಿದ್ದಾರೆ.
First published:March 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ