ಭಾರತೀಯ ರೈಲ್ವೆಯ ಎಲ್ಲಾ ರೈಲುಗಳಲ್ಲಿ, ಹಿರಿಯ ನಾಗರಿಕರು ಕೊರೊನಾ ಮೊದಲು ರೈಲು ಟಿಕೆಟ್‌ಗಳಲ್ಲಿ ರಿಯಾಯಿತಿಯನ್ನು ಪಡೆಯುತ್ತಿದ್ದರು. ಆದರೆ ಕೊರೋನಾ ನಂತರ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ನಿಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅದನ್ನು ಮತ್ತೆ ಆರಂಭಿಸಬೇಕು ಎಂದು ಅರ್ಜಿದಾರರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ ರಿಯಾಯಿತಿ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ (Supreme Court). ಸದ್ಯ ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್ (Train Ticket Booking) ದರದಲ್ಲಿ ರಿಯಾಯಿತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಲಾದ ಮನವಿಯನ್ನು ಭಾರತದ ಸುಪ್ರೀಂ ಕೋರ್ಟ್ ಶುಕ್ರವಾರ (Friday) ತಿರಸ್ಕರಿಸಿದೆ. ಈ ಮೂಲಕ ಹಿರಿಯ ನಾಗರಿಗೆ ಭಾರಿ ನಿರಾಶೆ ಉಂಟಾಗಿದೆ.
ಎಂಕೆ ಬಾಲಕೃಷ್ಣನ್ ಸಲ್ಲಿಸಿದ್ದ ಅರ್ಜಿ ವಜಾ
ಎಂಕೆ ಬಾಲಕೃಷ್ಣನ್ ಕೋವಿಡ್ ನಂತರ ರದ್ದು ಮಾಡಿದ ವಿನಾಯಿತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಶುಕ್ರವಾರ ಪರಿಶೀಲಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಮನವಿಯನ್ನು ತಿರಸ್ಕಾರ ಮಾಡಿದೆ.
ಅರ್ಜಿ ವಿಚಾರ: ಸುಪ್ರೀಂ ಹೇಳಿದ್ದೇನು?
‘‘ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿರುವ ಅರ್ಜಿಯಲ್ಲಿ ಈ ನ್ಯಾಯಾಲಯವು ಆದೇಶ ಹೊರಡಿಸುವುದು ಸೂಕ್ತವಲ್ಲ. ಹಿರಿಯ ನಾಗರಿಕರ ಅಗತ್ಯಗಳು ಮತ್ತು ಆರ್ಥಿಕ ಪರಿಣಾಮಗಳನ್ನು ಗಮನದಲ್ಲಿ ಇರಿಸಿಕೊಂಡು ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಆಯಾ ಸರ್ಕಾರಕ್ಕೆ ಬಿಟ್ಟ ಸಂಗತಿ" ಎಂದು ನ್ಯಾಯಪೀಠ ತಿಳಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ರಿಯಾಯಿತಿ ಸ್ಥಗಿತ ಗೊಂಡಿದ್ದು ಯಾವಾಗ?
ಈ ಮೊದಲು ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದ ಟಿಕೆಟ್ ದರದ ಮೇಲೆ ರಿಯಾಯಿತಿ ನೀಡಲಾಗುತ್ತಿತ್ತು. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ರೈಲು ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು 20 ಮಾರ್ಚ್ 2020 ರಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿತ್ತು.
ಇದನ್ನೂ ಓದಿ: ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಭೀಕರ ದುರಂತ; 11 ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ!
2020 ರಲ್ಲಿ, ಕೋವಿಡ್ -19 ಹರಡುವುದನ್ನು ತಡೆಯಲು ಪ್ರಯಾಣದ ಮೇಲೆ ಕಡಿವಾಣ ಹಾಕಲು ಹಲವು ನಿಯಮಗಳನ್ನು ಸರ್ಕಾರ ಜಾರಿಗೆ ತಂದಿತ್ತು. ಅದರ ಜೊತೆ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ರಿಯಾಯಿತಿಗಳನ್ನು ಸಹ ಕೇಂದ್ರವು ಸ್ಥಗಿತಗೊಳಿಸಿತ್ತು.
ಹಿರಿಯ ನಾಗರಿಕರಿಗೆ ಎಷ್ಟು ರಿಯಾಯಿತಿ ಇತ್ತು?
ಭಾರತೀಯ ರೈಲ್ವೆಯ ಎಲ್ಲಾ ರೈಲುಗಳಲ್ಲಿ, ಹಿರಿಯ ನಾಗರಿಕರು ಕೊರೊನಾ ಮೊದಲು ಟಿಕೆಟ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದರು. 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರನ್ನು ರೈಲ್ವೇಯಲ್ಲಿ ಹಿರಿಯ ನಾಗರಿಕರ ವಿಭಾಗದಲ್ಲಿ ಇರಿಸಲಾಗಿದೆ.
ಕೊರೋನಾ ಆರಂಭಕ್ಕೂ ಮೊದಲು, ರಾಜಧಾನಿ, ಶತಾಬ್ದಿ, ದುರಂತೋ ಸೇರಿದಂತೆ ಎಲ್ಲಾ ಮೇಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ, ಪುರುಷರಿಗೆ ಮೂಲ ದರದಲ್ಲಿ 40 ಪ್ರತಿಶತ ಮತ್ತು ಮಹಿಳೆಯರಿಗೆ ಮೂಲ ದರದಲ್ಲಿ 50 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುತ್ತಿತ್ತು.
ಆದರೆ ಕೊರೋನಾ ನಂತರ ಈ ರಿಯಾಯಿತಿಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಟಿಕೆಟ್ ದರದಲ್ಲಿನ ವಿನಾಯ್ತಿಯನ್ನು ರದ್ದು ಮಾಡಿದ ಬಳಿಕ ರೈಲ್ವೆ ಇಲಾಖೆ ಹೆಚ್ಚಿನ ಆದಾಯ ಗಳಿಸಿತು.
ಇದನ್ನೂ ಓದಿ: ಭಾರತದಲ್ಲಿ ಇನ್ನೂ ತಾಂಡವವಾಡುತ್ತಿರುವ ಆರ್ಥಿಕ ಅಸಮಾನತೆ, ಇದಕ್ಕೆ ಶ್ರೀಮಂತರೇ ಕಾರಣ
2020 ರಿಂದ ಎರಡು ವರ್ಷಗಳಲ್ಲಿ ಹಿರಿಯ ನಾಗರಿಕ ಪ್ರಯಾಣಿಕರಿಗೆ ನೀಡಿದ್ದ ಟಿಕೆಟ್ ದರದಲ್ಲಿನ ವಿನಾಯ್ತಿಯನ್ನು ರದ್ದುಗೊಳಿಸಿದ ನಂತರ ರೈಲ್ವೇಯು 1,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಆರ್‌ಟಿಐ ಈ ಹಿಂದೆ ತಿಳಿಸಿತ್ತು.
ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲು ಹಿರಿಯ ನಾಗರಿಕರಿಗೆ ನೀಡಲಾಗಿದ್ದ ರಿಯಾಯಿತಿಗಳನ್ನು ಪುನರಾರಂಭಿಸಲು ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ