ನವದೆಹಲಿ; ದೇಶಾದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನ್ಕೆಕ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಈವರೆಗೂ ಅವಕಾಶ ನೀಡಲಾಗಿಲ್ಲ. ಅದರಂತೆ ಮುಸ್ಲಿಂ ಸಮುದಾಯದ ಮೊಹರಂ ಹಬ್ಬದ ದಿನದಂದು ಮೆರವಣಿಗೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ದೇಶಾದ್ಯಂತ ಮೊಹರಂ ಮೆರವಣಿಗೆ ನಡೆಸಲು ಅನುಮತಿ ನೀಡಲು ನಿರಾಕರಿಸಿದೆ. “ಒಂದು ವೇಳೆ ನಾವು ಮೆರವಣಿಗೆಗೆ ಅನುಮತಿ ನೀಡಿದರೆ, ಅವ್ಯವಸ್ಥೆ ಉಂಟಾಗುತ್ತದೆ ಮತ್ತು ಕೋವಿಡ್ ಅನ್ನು ಹರಡಲು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಲಾಗುತ್ತದೆ. ನಮಗೆ ಅದು ಬೇಡ,” ಎಂದು ಸಿಜೆಐ ಎಸ್.ಎ. ಬೊಬ್ಡೆ ಹೇಳಿದರು.
ಇದನ್ನು ಓದಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ತನ್ನ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ನಿರ್ಧಾರ
ದೇಶದಲ್ಲಿ ಕೊರೋನಾ ಕಾಣಿಸಿಕೊಂಡು ಸುಮಾರು ಏಳು ತಿಂಗಳಾಗುತ್ತಿದೆ. ಈ ನಡುವೆ ಕೊರೋನಾ ಸೋಂಕು ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ಹೆಚ್ಚಾದಾಗ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 33 ಲಕ್ಷದ ಗಡಿ ದಾಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 75 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪೀಡಿತರು ಪತ್ತೆಯಾಗಿದ್ದಾರೆ.
ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿ ಅದೇ ಮುಂದುವರೆಯುತ್ತಿದೆ. ಆಗಸ್ಟ್ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆಗಸ್ಟ್ 19ರಂದ 69,652 ಪ್ರಕರಣಗಳು, ಆಗಸ್ಟ್ 20ರಂದು 68,898 ಪ್ರಕರಣಗಳು, ಆಗಸ್ಟ್ 21ರಂದು 69,878 ಪ್ರಕರಣಗಳು, ಆಗಸ್ಟ್ 22ರಂದು 69,239 ಪ್ರಕರಣಗಳು, ಆಗಸ್ಟ್ 23ರಂದು 61,408 ಪ್ರಕರಣಗಳು, ಆಗಸ್ಟ್ 24ರಂದು 60,975 ಪ್ರಕರಣಗಳು ಹಾಗೂ ಆಗಸ್ಟ್ 25ರಂದು 67,151 ಪ್ರಕರಣಗಳು ಪತ್ತೆಯಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ