ಕೋವಿಡ್ ಸಂಕಷ್ಟ: ವಿನಾಯಿತಿ ಅವಧಿಯಲ್ಲಿ ಚಕ್ರಬಡ್ಡಿ ರದ್ದಿಗೆ ಸುಪ್ರೀಂ ಚಿಂತನೆ; ಸೆ. 28ಕ್ಕೆ ಮತ್ತೆ ವಿಚಾರಣೆ

ಬಡ್ಡಿಯ ಮೇಲಿನ ಬಡ್ಡಿ ವಸೂಲಿ ಮಾಡುವುದು ಬೇಡ ಎಂಬುದು ನಮ್ಮ ಒಲವು. ಈ ನಿಟ್ಟಿನಲ್ಲಿ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಸರ್ಕಾರ ಈ ವಿಚಾರದಲ್ಲಿ ಯೋಜಿತವಾಗಿ ಮುಂದಡಿ ಇಡಲು ಸಮಯಾವಕಾಶ ನೀಡುತ್ತೇವೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

 • News18
 • Last Updated :
 • Share this:
  ನವದೆಹಲಿ(ಸೆ. 10): ಕೋವಿಡ್-19 ಸಂಕಷ್ಟದ ಬೆನ್ನಲ್ಲೇ ವಿವಿಧ ಬ್ಯಾಂಕುಗಳಲ್ಲಿ ಸಾಲದ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ ಆರ್​ಬಿಐ ವಿನಾಯಿತಿ ನೀಡಲಾಗಿತ್ತು. ಆದರೆ, ಬ್ಯಾಂಕುಗಳು ಈ ಅವಧಿಯಲ್ಲಿ ಶೇಖರಣೆಯಾದ ಬಡ್ಡಿ ಹಾಗೂ ಚಕ್ರಬಡ್ಡಿಯನ್ನು ಗ್ರಾಹಕರಿಂದಲೇ ವಸೂಲಿ ಮಾಡುತ್ತಿವೆ. ಇದನ್ನು ಆಕ್ಷೇಪಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರುಗಳು ದಾಖಲಾಗಿವೆ. ಹಾಗೆಯೇ, ವಿನಾಯಿತಿ (ಮೊರಾಟೋರಿಯಂ) ಅವಧಿಯನ್ನು ವಿಸ್ತರಿಸುವಂತೆ ಮನವಿಯೂ ಸಲ್ಲಿಕೆಯಾಗಿವೆ. ಇವತ್ತು ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂ ನ್ಯಾಯಪೀಠ, ಚಕ್ರಬಡ್ಡಿಯನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಿತು. ಸೆಪ್ಟೆಂಬರ್ 28ರಂದು ವಿಚಾರಣೆ ಮುಂದುವರಿಸಲು ನಿರ್ಧರಿಸಿದೆ. ಅಲ್ಲಿಯವರೆಗೆ ಬ್ಯಾಂಕುಗಳು ಸಾಲದ ಕಂತುಗಳನ್ನ ಕಟ್ಟದ ಗ್ರಾಹಕರ ಖಾತೆಗಳನ್ನ ಎನ್​ಪಿಎ ಆಗಿ ಪರಿವರ್ತನೆ ಮಾಡುವಂತಿಲ್ಲ.

  ಬಡ್ಡಿಯ ಮೇಲಿನ ಬಡ್ಡಿ (ಚಕ್ರಬಡ್ಡಿ) ವಸೂಲಿ ಮಾಡುವುದು ಬೇಡ ಎಂಬುದು ನಮ್ಮ ಒಲವು. ಈ ನಿಟ್ಟಿನಲ್ಲಿ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಸರ್ಕಾರ ಈ ವಿಚಾರದಲ್ಲಿ ಯೋಜಿತವಾಗಿ ಮುಂದಡಿ ಇಡಲು ಸಮಯಾವಕಾಶ ನೀಡುತ್ತೇವೆ. ಎರಡು ವಾರಗಳಲ್ಲಿ ಸರ್ಕಾರ ತನ್ನ ನಿಲುವನ್ನು ದಾಖಲೆಗಳ ಸಮೇತ ಸ್ಪಷ್ಟಪಡಿಸಬೇಕು ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಸೂಚಿಸಿದರೆಂದು ವರದಿಯಾಗಿದೆ.

  ಇದನ್ನೂ ಓದಿ: ಚೀನಾಗೆ ಅಮೆರಿಕ ಕುಟುಕು; ಸಾವಿರಕ್ಕೂ ಹೆಚ್ಚು ಚೀನೀ ವಿದ್ಯಾರ್ಥಿಗಳ ವೀಸಾ ರದ್ದು

  ಮಾರ್ಚ್ ತಿಂಗಳಲ್ಲಿ ಕೋವಿಡ್ ಹಿನ್ನೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಬ್ಯಾಂಕುಗಳಲ್ಲಿ ಸಾಲದ ಕಂತು ಕಟ್ಟಲು ಆರ್​ಬಿಐ ಮೂರು ತಿಂಗಳು ವಿನಾಯಿತಿ ಘೋಷಿಸಿತು. ಅದು ಆಗಸ್ಟ್ 31ರವರೆಗೆ ವಿಸ್ತರಣೆಯಾಯಿತು. ಈ ಆರು ತಿಂಗಳ ಅವಧಿಯಲ್ಲಿ ಬೆಳೆದಿದ್ದ ಬಡ್ಡಿಯ ಜೊತೆಗೆ ಅದರ ಮೇಲೆ ಚಕ್ರಬಡ್ಡಿಯನ್ನೂ ಹೇರಿ ಬ್ಯಾಂಕುಗಳು ತಮ್ಮ ಗ್ರಾಹಕರಿಂದ ವಸೂಲಿ ಮಾಡಲು ಮುಂದಾದವು. ಸೆಪ್ಟೆಂಬರ್​ನಲ್ಲಿ ಸಾಲದ ಕಂತು ಕಟ್ಟದ ಖಾತೆಗಳನ್ನ ಎನ್​ಪಿಎ ಆಗಿ ಪರಿವರ್ತಿಸಲು ಬ್ಯಾಂಕುಗಳ ಮುಂದಾದವು. ಸೆ. 3ರಂದು ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿತು. ಇನ್ನೂ ಎರಡು ತಿಂಗಳು ಈ ನಿಟ್ಟಿನಲ್ಲಿ ಬ್ಯಾಂಕುಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.  ಸಾಲದ ಮೇಲಿನ ಬಡ್ಡಿಯನ್ನು ಕೈಬಿಟ್ಟರೆ ಬ್ಯಾಂಕುಗಳಿಗೆ 2 ಲಕ್ಷ ಕೋಟಿಗೂ ಹೆಚ್ಚು ಹಣದ ನಷ್ಟವಾಗುತ್ತದೆ ಎಂಬುದು ಆರ್​ಬಿಐನ ವಾದ. ಅಂತಿಮವಾಗಿ ಬಡ್ಡಿಯ ಮೇಲಿನ ಬಡ್ಡಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸುವ ಸಾಧ್ಯತೆ ಇದೆ.
  Published by:Vijayasarthy SN
  First published: