ದೆಹಲಿ(ಜೂ.24): 2002ರ ಗೋಧ್ರಾ ನಂತರದ ಗಲಭೆಯಲ್ಲಿ ಹತ್ಯೆಗೀಡಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾ ಮಾಡಿದೆ. ಆಗಿನ ಗುಜರಾತ್ ಸಿಎಂ ಆಗಿದ್ದ ಮೋದಿ ಅವರ ವಿರುದ್ಧ ಪ್ರಕರಣದಲ್ಲಿ ಕೇಂದ್ರದ ವಿಶೇಷ ತನಿಖಾ ತಂಡ (SIT) ಕ್ಲೀನ್ ಚಿಟ್ ಕೊಟ್ಟಿತ್ತು. ಎಸ್ಐಟಿಯ ಕ್ಲೋಸಿಂಗ್ ರಿಪೋರ್ಟ್ನ್ನು ಪ್ರಶ್ನಿಸಿ ಜಾಫ್ರಿ ಅವರ ಪತ್ನಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆಗಿನ ಗುಜರಾತ್ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ (Narendra Modi) ಹಾಗೂ ಗುಜರಾತ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತರಿಗೂ ಕ್ಲೀನ್ ಚಿಟ್ ನೀಡಲಾಗಿದೆ.
ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರ ನೇತೃತ್ವದ ಪೀಠವು ಅಹಮದಾಬಾದ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿರುವ ತೀರ್ಪನ್ನು ಎತ್ತಿಹಿಡಿದಿದೆ. ಎಸ್‌ಐಟಿ ಸಲ್ಲಿಸಿದ ಕ್ಲೋಸಿಂಗ್ ರಿಪೋರ್ಟ್ನ್ನುಅಂಗೀಕರಿಸುವುದರ ವಿರುದ್ಧ ಜಾಫ್ರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು.
ಗುಜರಾತ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಝಾಕಿಯಾ
ಕಾಂಗ್ರೆಸ್ ಸಂಸದರಾಗಿದ್ದ ಝಾಫ್ರಿ ಅವರ ಪತ್ನಿ ಝಾಕಿಯಾ ಅವರ ಮೇಲ್ಮನವಿಯ ಅರ್ಜಿಯು ಅರ್ಹತೆಗಳನ್ನು ಹೊಂದಿಲ್ಲ. ವಜಾಗೊಳಿಸಲು ಅರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
2021 ರ ಡಿಸೆಂಬರ್‌ನಲ್ಲಿ ಮೇಲ್ಮನವಿ ಅದೇಶ ಕಾಯ್ದಿರಿಸಿದ್ದ ಕೋರ್ಟ್
ಅಕ್ಟೋಬರ್ 5, 2017 ರ ಗುಜರಾತ್ ಹೈಕೋರ್ಟ್ ಕ್ಲೋಸಿಂಗ್ ರಿಪೋರ್ಟ್ ಸ್ವೀಕರಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಆ ನಂತರ ಝಕಿಯಾ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯವು 2021 ರ ಡಿಸೆಂಬರ್‌ನಲ್ಲಿ ಮನವಿ ಆಲಿಸಿದ ನಂತರ ಮೇಲ್ಮನವಿಯ ಆದೇಶವನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: Rape Case: ಎಲ್ಲರೂ ಮದುವೆಯಲ್ಲಿ ಬ್ಯುಸಿ ಇದ್ದಾಗ 5 ವರ್ಷದ ಬಾಲಕಿ ಮೇಲೆ 15ರ ಬಾಲಕನಿಂದ ಅತ್ಯಾಚಾರ
2002 ರ ಗುಜರಾತ್ ಗಲಭೆಗಳನ್ನು 2002 ರ ಗುಜರಾತ್ ಹಿಂಸಾಚಾರ ಎಂದೂ ಕರೆಯುತ್ತಾರೆ. ಇದು ಗುಜರಾತ್‌ನಲ್ಲಿ ಮೂರು ದಿನಗಳ ಅಂತರ್-ಕೋಮು ಹಿಂಸಾಚಾರದ ಅವಧಿಯಾಗಿದೆ. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 58 ಹಿಂದೂ ಯಾತ್ರಿಕರ ಕರಸೇವಕರ ಸಾವಿಗೆ ಕಾರಣವಾದ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯು ಹಿಂಸಾಚಾರವನ್ನು ಪ್ರಚೋದಿಸಿತ್ತು.
ವರ್ಷಪೂರ್ತಿ ನಡೆಯುತ್ತಲೇ ಇತ್ತು ಹಿಂಸಾಚಾರ
ಆರಂಭಿಕ ಗಲಭೆ ಘಟನೆಗಳ ನಂತರ, ಮೂರು ತಿಂಗಳ ಕಾಲ ಅಹಮದಾಬಾದ್‌ನಲ್ಲಿ ಮತ್ತಷ್ಟು ಹಿಂಸಾಚಾರಗಳು ನಡೆದವು. ರಾಜ್ಯಾದ್ಯಂತ, ಮುಂದಿನ ಒಂದು ವರ್ಷದವರೆಗೆ ಗುಜರಾತ್‌ನ ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಯ ವಿರುದ್ಧ ಮತ್ತಷ್ಟು ಹಿಂಸಾಚಾರಗಳು ಉಲ್ಬಣಗೊಂಡವು.
ಮೃತಪಟ್ಟವರ ಸಂಖ್ಯೆ
ಅಧಿಕೃತ ಅಂಕಿಅಂಶಗಳ ಪ್ರಕಾರ ಗಲಭೆಯಲ್ಲಿ 1,044 ಮಂದಿ ಮೃತಪಟ್ಟರು. 223 ಮಂದಿ ಕಾಣೆಯಾದರು. 2,500 ಮಂದಿ ಗಾಯಗೊಂಡರು. ಸತ್ತವರಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು. ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್ ರಿಪೋರ್ಟ್ ಪ್ರಕಾರ ಸುಮಾರು 1,926 ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಇತರ ಮೂಲಗಳ ಪ್ರಕಾರ ಸಾವಿನ ಸಂಖ್ಯೆ 2,000 ಕ್ಕಿಂತ ಹೆಚ್ಚಿದೆ. ಅನೇಕ ಕ್ರೂರ ಹತ್ಯೆಗಳು ಮತ್ತು ಅತ್ಯಾಚಾರಗಳು ಮತ್ತು ವ್ಯಾಪಕವಾದ ಲೂಟಿ ಮತ್ತು ಆಸ್ತಿ ನಾಶದ ಬಗ್ಗೆಯೂ ವರದಿಯಾಗಿದೆ. ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಹಿಂಸಾಚಾರವನ್ನು ಮನ್ನಿಸಿದ್ದಾರೆ ಎಂದು ಆರೋಪಿಸಲಾಯಿತು. ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಗಲಭೆಕೋರರನ್ನು ಬೆಂಬಲಿಸಿದರು. ಅವರಿಗೆ ಮುಸ್ಲಿಂ ಒಡೆತನದ ಆಸ್ತಿಗಳ ಪಟ್ಟಿಯನ್ನು ನೀಡಿದರು ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ