ನವದೆಹಲಿ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬ ಸದಸ್ಯರಿಗೆ (Amabni Family) ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅತ್ಯುನ್ನತ ಮಟ್ಟದ ಝಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನು (Z+ Security) ಒದಗಿಸುವಂತೆ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ. ಅಲ್ಲದೇ ಭಾರತ ಮತ್ತು ವಿದೇಶದಲ್ಲಿ ಝಡ್ + ಶ್ರೇಣಿಯ ಭದ್ರತೆಯ ಎಲ್ಲಾ ಖರ್ಚು ವೆಚ್ಚಗಳನ್ನು ಅವರೇ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ನೀಡಿದ್ದು, ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಪದೇ ಪದೇ ಎದುರಿಸುತ್ತಿರುವ ಬೆದರಿಕೆ ಕರೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್ ಅವರಿಗೆ ಗರಿಷ್ಠ ಶ್ರೇಣಿಯ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?
ಭದ್ರತೆಯನ್ನು ನಗರ, ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ
ಓರ್ವ ವ್ಯಕ್ತಿಯ ಭದ್ರತೆಯನ್ನು ಕೆಲ ಪ್ರದೇಶಕ್ಕೆ ಅಥವಾ ಕೆಲವು ನಗರಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಮುಕೇಶ್ ಅಂಬಾನಿ ಮಹಾರಾಷ್ಟ್ರ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಹೊಂದಿದ್ದಾರೆ. ವಿದೇಶಗಳಲ್ಲೂ ಹೂಡಿಕೆ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ದೇಶ ಹಾಗೂ ವಿದೇಶದಲ್ಲಿ ಏಕರೂಪದ ಹಾಗೂ ಗರಿಷ್ಠ ಮಟ್ಟದ ಭದ್ರತೆ ಅಗತ್ಯವಿದೆ. ಆದರೆ ಭದ್ರತೆಯ ಈಗಿನ ಪರಿಸ್ಥಿತಿ ನೋಡಿದರೆ ನಿರಾಶೆ ಉಂಟು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.
ಪದೇ ಪದೇ ಬೆದರಿಕೆ ಕರೆ
ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸದಸ್ಯರಿಗೆ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿವೆ. ಮುಂಬೈ ಪೊಲೀಸರು ಹಾಗೂ ಕೇಂದ್ರ ಗೃಹ ಸಚಿವಾಲಯ ಕೂಡ ಬೆದರಿಕೆ ಕರೆಯನ್ನು ಸ್ವೀಕರಿಸಿದೆ. ಹೀಗೆ ಪದೇ ಪದೇ ಬೆದರಿಕೆ ಕರೆಗಳು ಬಂದರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಕಷ್ಟ. ಹೀಗಾಗಿ ಅಂಬಾನಿ ಕುಟುಂಬಕ್ಕೆ ಗರಿಷ್ಠ ಮಟ್ಟದ ಭದ್ರತೆ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.
ಇದನ್ನೂ ಓದಿ: Anant Ambani: ತಮ್ಮ ಖಾಸಗಿ ಜೆಟ್ನಲ್ಲಿ ಉದ್ಯೋಗಿ ಬರ್ತ್‌ಡೇ ಆಚರಿಸಿದ ಅನಂತ್ ಅಂಬಾನಿ! ನೆಟ್ಟಿಗರಿಂದ ಪ್ರಶಂಸೆ
ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಗೆ ಬಾಂಬ್ ಬೆದರಿಕೆ!
ನವದೆಹಲಿ: ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ಬೆದರಿಸಿದ ಘಟನೆ ಬುಧವಾರ ನಡೆದಿದೆ. ಈ ಇಬ್ಬರು ಖ್ಯಾತ ನಟರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ಪುರ ಪೊಲೀಸರಿಗೆ ಕರೆ ಮಾಡಿದ್ದ ಹಿನ್ನೆಲೆ ಒಂದು ಕ್ಷಣ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕರೆಯ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ರು. ಈ ಸಂಬಂಧ ಕೂಡಲೇ ನಾಗ್ಪುರ ಪೊಲೀಸರು ಮುಂಬೈ ಪೊಲೀಸರಿಗೆ ಬಾಂಬ್ ಕರೆ ಬಂದಿರುವ ಬಗ್ಗೆ ಮಾಹಿತಿ ರವಾನಿಸಿದ್ರು.
ಆಗ ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಬ್ಬರ ಮನೆಯಲ್ಲೂ ಬಾಂಬ್ ನಿಗ್ರಹ ದಳದ ಜೊತೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಎಲ್ಲೂ ಬಾಂಬ್ ಇರುವುದು ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರಿಗೆ ಮನವರಿಕೆ ಆಗಿದೆ.
ಸದ್ಯ ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಿಡಿಗೇಡಿಗಳು ಕರೆ ಮಾಡಿದ ನಂಬರ್ ಅನ್ನು ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಅದರ ಆಧಾರದ ಮೇಲೆ ಯಾರು, ಎಲ್ಲಿಂದ ಕರೆ ಮಾಡಲಿದ್ದಾರೆ ಅನ್ನೋದು ತಿಳಿದು ಬರಲಿದೆ. ನಾಗ್ಪುರ ಪೊಲೀಸರಿಗೆ ಕರೆ ಮಾಡಿದ್ದ ಕಿಡಿಗೇಡಿಗಳು, ‘ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ. 10 ನಿಮಿಷದಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ. ದಾದರ್ನಲ್ಲಿ ಶಸ್ತ್ರ ಸಜ್ಜಿತವಾದ 25 ಜನರು ಭಯೋತ್ಪಾದಕ ದಾಳಿ ಮಾಡಲು ಸಿದ್ಧವಾಗಿದ್ದಾರೆ’ ಎಂದು ಬೆದರಿಸಿದ್ದರು.
ಸದ್ಯ ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ಸಂಬಂಧ ನಾಗ್ಪುರ ಹಾಗೂ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಂದು ಕ್ಷಣ ಎಲ್ಲರನ್ನೂ ಈ ಬಾಂಬ್ ಬೆದರಿಕೆ ಕರೆ ಭೀತಿಗೊಳಪಡಿಸಿದ್ದಂತು ಸತ್ಯ, ಆದರೆ ಅದೊಂದು ಹುಸಿ ಕರೆ ಎಂದು ತಿಳಿದಾಗ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ